Advertisement

ಬಿ.ವೈ ವಿಜಯೇಂದ್ರಗೆ ಇಲ್ಲ ಸಚಿವ ಪಟ್ಟ, ಯಡಿಯೂರಪ್ಪ ವಿರುದ್ಧ ಗುಡುಗಿದವರಿಗೆ ಶಾಕ್!

12:01 PM Aug 04, 2021 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ಸೇರುವ ಶಾಸಕರ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಅಂತಿಮಗೊಳಿಸಿದ ಬೆನ್ನಲ್ಲೇ ಬಿವೈ ವಿಜಯೇಂದ್ರ ಬುಧವಾರ (ಆಗಸ್ಟ್ 04) ಬೆಳಗ್ಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಜತೆ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚಿಸಿರುವ ವಿದ್ಯಮಾನ ನಡೆದಿದೆ ಎಂದು ಮಾಧ್ಯಮದ ವರದಿಗಳು ತಿಳಿಸಿದೆ.

Advertisement

ಇದನ್ನೂ ಓದಿ:ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಪಟ್ಟಿ ಅಂತಿಮ: ಯಾರು ಇನ್, ಯಾರು ಔಟ್?

ನೂತನ ಸಚಿವ ಸಂಪುಟದಲ್ಲಿ ಬಿವೈ ವಿಜಯೇಂದ್ರ ಅವರಿಗೆ ಯಾವುದೇ ಸಚಿವ ಸ್ಥಾನ ನೀಡಿಲ್ಲ ಎಂಬುದಾಗಿ ಖುದ್ದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಬಿವೈ ವಿಜಯೇಂದ್ರ ಅವರು ತಂದೆ ಬಿಎಸ್ ವೈ ಅವರ ಜತೆ ಮಾತನಾಡಿ ತೆರಳಿರುವುದಾಗಿ ಮೂಲಗಳು ಹೇಳಿವೆ.

ಯಡಿಯೂರಪ್ಪ ವಿರುದ್ಧ ಗುಡುಗಿದವರಿಗೆ ಶಾಕ್:

ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿಎಸ್ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಅಸಮಾಧಾನವ್ಯಕ್ತಪಡಿಸುತ್ತಿದ್ದವರಿಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ. ಅಷ್ಟೇ ಅಲ್ಲ ತಮ್ಮ ವಿರುದ್ಧ ಕತ್ತಿ ಮಸೆದವರ ವಿರುದ್ಧ ಸೇಡು ತೀರಿಸಿಕೊಂಡಿರುವುದು ಜಗಜ್ಜಾಹೀರಾಗಿದೆ.

Advertisement

ಬಿಎಸ್ ಯಡಿಯೂರಪ್ಪ ಬದಲಾವಣೆ ಕುರಿತು ಕೂಗು ಎಬ್ಬಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಸಿಪಿ ಯೋಗೇಶ್ವರ್, ಅರವಿಂದ್ ಬೆಲ್ಲದ್ ಗೆ ಮಂತ್ರಿಗಿರಿ ಕೈತಪ್ಪಿದೆ. ಮತ್ತೊಂದೆಡೆ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೂ ಸಚಿವ ಸ್ಥಾನ ಕೈತಪ್ಪಿದೆ.

ಸರ್ಕಾರದ ಬಗ್ಗೆ ಪರ, ವಿರೋಧ ಕೂಗು ಎಬ್ಬಿಸಿದವರಿಗೆ ಬಿಜೆಪಿ ಹೈಕಮಾಂಡ್ ಬ್ರೇಕ್ ಹಾಕಿದಂತಾಗಿದೆ. ಅಲ್ಲದೇ ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿ ಹಿರಿಯ ಸಚಿವರಾಗಿದ್ದ ಜಗದೀಶ್ ಶೆಟ್ಟರ್, ಅರವಿಂದ್ ಲಿಂಬಾವಳಿ ಹಾಗೂ ಸುರೇಶ್ ಕುಮಾರ್ ಅವರನ್ನೂ ಕೂಡಾ ನೂತನ ಸಂಪುಟದಲ್ಲಿ ಕೈಬಿಡಲಾಗಿದೆ.

ಮತ್ತೊಂದು ಕುತೂಹಲಕರ ಸಂಗತಿ ಉಪಮುಖ್ಯಮಂತ್ರಿಯಾಗಿದ್ದ ಲಕ್ಷ್ಮಣ ಸವದಿ ಅವರನ್ನೂ ಕೈಬಿಡುವ ಮೂಲಕ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸಂಪುಟದಲ್ಲಿ ಯಾವುದೇ ಡಿಸಿಎಂ ಹುದ್ದೆ ಸೃಷ್ಟಿ ಇಲ್ಲ ಎಂಬ ಸಂದೇಶವನ್ನು ರವಾನಿಸಿದೆ.

ಅಸಮಾಧಾನ ಸ್ಫೋಟಗೊಳ್ಳಬಹುದೇ?

ಬಿಎಸ್ ಯಡಿಯೂರಪ್ಪ ಸಂಪುಟದಲ್ಲಿದ್ದ ಲಕ್ಷ್ಮಣ ಸವದಿ ಅವರನ್ನು ಕೈಬಿಟ್ಟಿರುವುದು, ರೇಣುಕಾಚಾರ್ಯಗೆ ಸಚಿವ ಸ್ಥಾನ ಸಿಗದಿರುವುದು, ಕೆಎಸ್ ಈಶ್ವರಪ್ಪ ಅವರ ಡಿಸಿಎಂ ಹುದ್ದೆ ನಿರೀಕ್ಷೆ ಹುಸಿಯಾಗಿರುವುದು ಹಾಗೂ ಯತ್ನಾಳ್, ಬೆಲ್ಲದ್ ಹಾಗೂ ಸಿಪಿ ಯೋಗೇಶ್ವರ್ ಅವರಿಗೆ ಮುಖಭಂಗವಾಗಿರುವುದು ಮುಂದಿನ ದಿನಗಳಲ್ಲಿ ರಾಜಕೀಯದ ಜಿದ್ದಾಜಿದ್ದಿಗೆ ಕಾರಣವಾಗಬಹುದು ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next