Advertisement

ಹುಲಿ ಹುಲ್ಲು ಮೇಯುವುದಿಲ್ಲ; ಹೊಳೆನರಸೀಪುರದಲ್ಲಿ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಗುಡುಗು

11:22 PM May 28, 2022 | Team Udayavani |

ವಿಧಾನಸಭೆ ಚುನಾವಣೆಯತ್ತ ರಾಜ್ಯ ದಾಪುಗಾಲಿಡುತ್ತಿರುವಾಗಲೇ ರಾಜಕೀಯ ಪ್ರಹಸನಗಳು, ಆರೋಪ-ಪ್ರತ್ಯಾರೋಪಗಳು, ಪರೋಕ್ಷ ಎಚ್ಚರಿಕೆಗಳು, ಅಸಮಾಧಾನ, ಬೇಗುದಿ ಒಂದೊಂದಾಗಿ ಉಕ್ಕಿ ಹರಿಯಲಾರಂಭಿಸಿವೆ. ಶನಿವಾರ ನಡೆದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರು ಆಡಿರುವ ಮಾತುಗಳು ಸದ್ಯದಲ್ಲೇ ರಾಜ್ಯದಲ್ಲಿ ಚುನಾವಣೆಯ ಕಾವು ಏರುವ ಮುನ್ಸೂಚನೆಯನ್ನು ನೀಡಿವೆ.

Advertisement

ಬೆಂಗಳೂರು/ಹೊಳೆನರಸೀಪುರ: ಹುಲಿ ಯನ್ನು ಬೋನಿನಲ್ಲಿ ಕೂಡಿ ಹಾಕಿಟ್ಟರೂ ಅದು ಹೊಟ್ಟೆ ಹಸಿದಿದೆ ಎಂದು ಹುಲ್ಲು ತಿನ್ನುವುದಿಲ್ಲ…

– ಇದು ಮಾಜಿ ಸಿಎಂ ಬಿಎಸ್‌ವೈ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಾಡಿದ ಮಾತು.

ಹೊಳೆನರಸೀಪುರದಲ್ಲಿ ಶನಿವಾರ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಹುಲಿ ಎಂದಿಗೂ ಹುಲಿಯೇ. ಅದು ಬೇಟೆ ಆಡುವುದನ್ನು ಬಿಡುವುದಿಲ್ಲ’ ಎಂದಿರುವುದು ಕುತೂಹಲ ಕೆರಳಿಸಿದೆ.

ನಮ್ಮ ವೀರಶೈವ-ಲಿಂಗಾಯತರು ಎಂದೆಂದಿಗೂ ಹುಲಿಗಳೇ ಎಂಬುದನ್ನು ಮತ್ತೊಮ್ಮೆ ಹೇಳಬೇಕಿಲ್ಲ ಎಂದ ಅವರು ಕೊನೆಗೆ “ಈ ಸಮಾರಂಭದಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ’ ಎಂದು ಹೇಳಿ ಸುಮ್ಮನಾದರು.

Advertisement

12ನೇ ಶತಮಾನದಲ್ಲಿ ಎಲ್ಲ ಶೋಷಿತ ವರ್ಗದವರಿಗೂ ಸಮಾಜದಲ್ಲಿ ಸ್ಥಾನಮಾನ ಕಲ್ಪಿಸಿದ ಗುರು ಬಸವಣ್ಣ. ಅದೇ ರೀತಿ ಯಡಿಯೂರಪ್ಪ ರಾಜ್ಯದ ಶೋಷಿತ ವರ್ಗಗಳು, ಮಹಿಳೆಯರಿಗೆ ಸಹಾಯ ಹಸ್ತ ಚಾಚಿ ಸಮಾಜದ ಮುಖ್ಯ ವಾಹಿನಿಗೆ ತಂದ ಧೀಮಂತ ನಾಯಕ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದರು.

ಬಸವಣ್ಣ ಅವರ ಆದರ್ಶಗಳು ಮೋದಿ ಅವರಿಗೂ ಪ್ರೇರಣೆಯಾಗಿವೆ. ಯಡಿಯೂರಪ್ಪ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ ನಾಡಿನ ಏಳಿಗೆಗೆ ಕಾರಣರಾದವರು. ನಾನು ಅವರ ಪುತ್ರನಾಗಿರುವುದಕ್ಕೆ ಹೆಮ್ಮೆ ಇದೆ. ಸಮಾಜದ ಮುಖಂಡರು ನನ್ನನ್ನು ಆಹ್ವಾನಿಸಿದ್ದರಿಂದಾಗಿ ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಬರುವ ದಾರಿಯಲ್ಲಿ ಗ್ರಾಮೀಣ ಪ್ರದೇಶದ ಜನರು ನನ್ನನ್ನು “ನಮ್ಮ ಯಡಿಯೂರಪ್ಪ ಅವರ ಪುತ್ರ’ ಎನ್ನುತ್ತ ಸ್ವಾಗತಿಸಿದರು. ಇದಕ್ಕಿಂತ ಬೇರೇನು ಬೇಕು ಎಂದೂ ವಿಜಯೇಂದ್ರ ಹೇಳಿದರು. ಈ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಎಂಬುದು ಇಲ್ಲವೇ ಇಲ್ಲ. ಇಲ್ಲಿ ಎಲ್ಲವೂ ಬಿಗಿ ವಾತಾವರಣದಲ್ಲೇ ಇರಬೇಕಿದೆ. ಈ ಕಾರ್ಯಕ್ರಮದ ದಿನದಿಂದಲಾದರೂ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಲು ಅವಕಾಶ ದೊರೆತರೆ ಒಳ್ಳೆಯದಾಗಲಿದೆ ಎಂದು ಇದಕ್ಕೆ ಮುನ್ನ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲುಂಡಿದ್ದ ಬಿ.ಪಿ. ಮಂಜೇಗೌಡ ಹೇಳಿದರು.

ಚರ್ಚೆಗೆ ಗ್ರಾಸವಾದ ಮಾತು
ಇತ್ತೀಚೆಗೆ ವಿಧಾನಪರಿಷತ್‌ ಚುನಾವಣೆಯಲ್ಲಿ ವಿಜಯೇಂದ್ರ ಅವರಿಗೆ ಅಂತಿಮ ಕ್ಷಣದಲ್ಲಿ ಟಿಕೆಟ್‌ ಕೈ ತಪ್ಪಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ವಿಜಯೇಂದ್ರ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಅವರಾಡಿದ ಮಾತುಗಳ ಬಗ್ಗೆ ರಾಜಕೀಯ ವಲಯದಲ್ಲಿ ನಾನಾ ರೀತಿಯ ವ್ಯಾಖ್ಯಾನಗಳು ಕೇಳಿಬರುತ್ತಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next