Advertisement

ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಯಡಿಯೂರಪ್ಪ ಬೆಂಬಲ?

07:40 AM Jul 29, 2017 | Team Udayavani |

ಬೆಂಗಳೂರು: ವೀರಶೈವ-ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕೆನ್ನುವ ವಿಚಾರದಲ್ಲಿ ಈಗ ತಟಸ್ಥರಾಗಿರುವ ಬಿಜೆಪಿ ರಾಜ್ಯ ಅಧ್ಯಕ್ಷ ಬಿ. ಎಸ್‌. ಯಡಿಯೂರಪ್ಪಹಾಗೂ ಆ ಪಕ್ಷದ ನಾಯಕರು ಹಿಂದೊಮ್ಮೆ ಇದೇ ಪ್ರಸ್ತಾವವನ್ನು ಸರ್ಕಾರದ ಮುಂದೆ ಇಟ್ಟಿದ್ದರೇ? ಹೌದು, ಎನ್ನುತ್ತವೆ ದಾಖಲೆಗಳು! ಸದ್ಯ ಕಾಂಗ್ರೆಸ್‌ ಸರ್ಕಾರ ಎಬ್ಬಿಸಿರುವ “ಪ್ರತ್ಯೇಕ ಧರ್ಮ’ದ ವಿವಾದ ಸಂಬಂಧ ಈಗ ಬಿಜೆಪಿ ನಾಯಕರು ಮೌನವಾಗಿದ್ದಾರೆ. ಆದರೆ, 2013ರಲ್ಲಿ ಇದೇ ನಾಯಕರು ಆಗಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರಿಗೆ ಮನವಿ ಸಲ್ಲಿಸಿ ಇಂಥದ್ದೇ ಪ್ರಸ್ತಾವನೆ ಮುಂದಿಟ್ಟಿದ್ದರು!

Advertisement

“ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು’ ಎಂದು ಒತ್ತಾ ಯಿಸಿ ಅಖಲಿ ಭಾರತ ವೀರಶೈವ ಮಹಾ ಸಭಾ ನಾಲ್ಕು ವರ್ಷಗಳ ಹಿಂದೆ ಸಲ್ಲಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವ ಶಂಕರಪ್ಪ, ಸಚಿವರಾದ ಈಶ್ವರ ಖಂಡ್ರೆ, ಶರಣಪ್ರಕಾಶ ಪಾಟೀಲ, ಎಂ.ಬಿ. ಪಾಟೀಲ, ವಿನಯ ಕುಲಕರ್ಣಿ, ಮುಖ್ಯ ಸಚೇತಕ ಅಶೋಕ ಪಟ್ಟಣ, ಸಂಸದ ಪ್ರಭಾಕರ ಕೋರೆ, ಮಾಜಿ ಸಚಿವರಾದ ಉಮೇಶ್‌ ಕತ್ತಿ, ಬಸವರಾಜ ಬೊಮ್ಮಾಯಿ, ಜೆಡಿಎಸ್‌ ಮುಖಂಡ ಬಸವರಾಜ ಹೊರಟ್ಟಿ ಸೇರಿದಂತೆ ಸುಮಾರು 25 ಜನ ಲಿಂಗಾಯತ ಮುಖಂಡರು ಸಹಿ ಕೂಡ ಮಾಡಿದ್ದಾರೆ.

“ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಅಖೀಲ ಭಾರತ ವೀರಶೈವ ಮಹಾಸಭಾ ಸಲ್ಲಿಸಿದ ಮನವಿಗೆ ನಮ್ಮೆಲ್ಲರ ಒಪ್ಪಿಗೆ ಇದ್ದು, ಆದಷ್ಟು ಬೇಗ ಪ್ರತ್ಯೇಕ ಧರ್ಮ ಘೋಷಣೆ ಮಾಡಬೇಕು’ ಎಂದು ಮನವಿಯಲ್ಲಿ ನಾಯಕರು ತಿಳಿಸಿದ್ದಾರೆ. 2013ರ ಜುಲೈ 7ರಂದು ಗೃಹ ಸಚಿವರಿಗೆ ಹಾಗೂ ಅದೇ ವರ್ಷ ಜುಲೈ 25ರಂದು ಪ್ರಧಾನಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಗಿದೆ. ಇವುಗಳ ಪ್ರತಿ “ಉದಯವಾಣಿ’ಗೆ ಲಭ್ಯವಾಗಿದೆ.

ಪ್ರತ್ಯೇಕ ಧರ್ಮಕ್ಕೆ ಸಂಬಂಧಿಸಿದಂತೆ ವೀರಶೈವ ಮತ್ತು ಲಿಂಗಾಯತರ ನಡುವೆ ತಿಕ್ಕಾಟ ನಡೆದ ಬೆನ್ನಲ್ಲೇ ಸಮುದಾಯದ ಮುಖಂಡರು ಒಟ್ಟಾಗಿ ಸಹಿ ಮಾಡಿದ ಈ ಮನವಿ ಪತ್ರ ಬಹಿರಂಗಗೊಂಡಿದ್ದರಿಂದ ತಿಕ್ಕಾಟ ಮತ್ತೂಂದು
ತಿರುವು ಪಡೆದುಕೊಂಡಿದೆ.

ಪ್ರತ್ಯೇಕ ಕೋಡ್‌-ಕಾಲಂ: ದೇಶದಲ್ಲಿ ಸಿಖ್‌ರು, ಜೈನರು, ಬೌದಟಛಿ ಧರ್ಮಗಳು ಇರುವಂತೆಯೇ ವೀರಶೈವ-ಲಿಂಗಾಯತ ಕೂಡ ಒಂದು ಸ್ವತಂತ್ರ ಧರ್ಮವಾಗಿದ್ದು, ಈ ಸಮುದಾಯದ ಸುಮಾರು 4 ಕೋಟಿ ಜನರಿದ್ದಾರೆ. ಅವರೆಲ್ಲಾ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಹರಿದುಹಂಚಿ ಹೋಗಿದ್ದಾರೆ.
ಈ ಪೈಕಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವೀರಶೈವ -ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕು. ಅಲ್ಲದೆ, ಜಾತಿ ಗಣತಿ ಮಾಡುವ ಸಂದರ್ಭದಲ್ಲಿ ಇತರ ಧರ್ಮಗಳಂತೆ ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಕೋಡ್‌ ಹಾಗೂ ಕಾಲಂ ಇರಬೇಕು ಎಂದು ಮನವಿಯಲ್ಲಿ ಈ ಮುಖಂಡರು ಒತ್ತಾಯಿಸಿದ್ದಾರೆ.

Advertisement

ಸರ್ವಾನುಮತದಿಂದ ವೀರಶೈವ- ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವಂತೆ ಸಲ್ಲಿಸಿರುವ ಮನವಿಯನ್ನು ಶೀಘ್ರ ಪುರಸ್ಕರಿಸಬೇಕು ಎಂದು ಕೋರಲಾಗಿದೆ. ಆದರೆ, ನಂತರದಲ್ಲಿ ಈ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆಗಳು ನಡೆದಿಲ್ಲ. ಈ ಮಧ್ಯೆ ಈಚೆಗೆ ನಡೆದ ಅಖೀಲ ಭಾರತ ವೀರಶೈವ ಮಹಾಸಭಾ ಸಮಾವೇಶದಲ್ಲಿ ಪ್ರತ್ಯೇಕ ಧರ್ಮದ ಮಾನ್ಯತೆಗೆ ಶಿಫಾರಸು ಮಾಡುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಎನ್‌. ತಿಪ್ಪಣ್ಣ ತಿಳಿಸಿದ್ದಾರೆ.

ಆದರೆ, ಮನವಿ ಇನ್ನೂ ತಮ್ಮ ಕೈಸೇರಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೂಮ್ಮೆ ಮುಖ್ಯಮಂತ್ರಿ ಭೇಟಿ ಮಾಡಿ, ಮನವಿ ಸಲ್ಲಿಸಲು ಮಹಾಸಭಾ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next