Advertisement

By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?

01:17 PM Nov 23, 2024 | Team Udayavani |

ಮಣಿಪಾಲ: ಕರ್ನಾಟಕದ ಮೂರು ವಿಧಾನಸಭೆ ಕ್ಷೇತ್ರಗಳಿಗೆ ನಡೆದಿದ್ದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ (ನ.23) ನಡೆದಿದೆ. ರಾಜಕೀಯ ಪಂಡಿತರ, ಮತದಾನೋತ್ತರ ಸಮೀಕ್ಷೆಯನ್ನು ಬುಡಮೇಲು ಮಾಡಿರುವ ಅಧಿಕಾರರೂಢ ಕಾಂಗ್ರೆಸ್‌ ಮೂರು ಕ್ಷೇತ್ರಗಳಲ್ಲಿಯೂ ಜಯ ಸಾಧಿಸಿದೆ.

Advertisement

ಮತದಾನೋತ್ತರ ಸಮೀಕ್ಷೆಗಳು ಚನ್ನಪಟ್ಟಣ ಮತ್ತು ಶಿಗ್ಗಾವಿ ಕ್ಷೇತ್ರದಲ್ಲಿ ಎನ್‌ ಡಿಎ ಅಭ್ಯರ್ಥಿಗಳು ಹಾಗೂ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ಇದು ಉಲ್ಟಾ ಹೊಡೆದಿದ್ದು, ಮೂರು ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳಯ ಗೆಲುವಿನ ನಗೆ ಬೀರಿದ್ದಾರೆ.

ಶಿಗ್ಗಾವಿಯಲ್ಲಿ ಯಾಸಿರ್‌ ಖಾನ್‌ ಪಠಾಣ್‌ ಗೆಲುವು ಕಂಡರೆ, ಸಂಡೂರಿನಲ್ಲಿ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ, ಮತ್ತು ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್‌ ಗೆಲುವು ಸಾಧಿಸಿದ್ದಾರೆ.

ಇಬ್ಬರು ಮಾಜಿ ಸಿಎಂ ಗಳ ಪುತ್ರರಿಗೆ ಸೋಲು

Advertisement

ಮೂರು ಕ್ಷೇತ್ರಗಳಲ್ಲಿ ಎರಡರಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಎನ್‌ ಡಿಎ ಟಿಕೆಟ್‌ ನಲ್ಲಿ ಕಣಕ್ಕೆ ಇಳಿದಿದ್ದರು. ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಮತ್ತು ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಸ್ಪರ್ಧೆ ಮಾಡಿದ್ದರು.

ಭರತ್‌ ಗೆ ಸಿಗದ ಬ್ರೇಕ್

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಲೋಕಸಭೆಯಲ್ಲಿ ಗೆಲುವು ಸಾಧಿಸಿದ ಕಾರಣ ಅವರಿಂದ ತೆರವಾದ ಶಿಗ್ಗಾವಿ ಕ್ಷೇತ್ರಕ್ಕೆ ಉಪ ಚುನಾವಣೆಯಲ್ಲಿ ಬೊಮ್ಮಾಯಿ ಪುತ್ರನಿಗೆ ಬಿಜೆಪಿ ಟಿಕೆಟ್‌ ನೀಡಲಾಗಿತ್ತು. ಉದ್ಯಮಿಯಾಗಿದ್ದ ಭರತ್‌ ಬೊಮ್ಮಾಯಿ (Bharath Bommai) ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದರು. ಆದರೆ ಮೊದಲ ಅಗ್ನಿಪರೀಕ್ಷೆಯಲ್ಲಿಯೇ ಭರತ್‌ ಗೆ ಸೋಲಾಗಿದೆ.

ಸತತ ಐದು ಬಾರಿ ಗೆದ್ದು ಶಿಗ್ಗಾವಿಯನ್ನು ತನ್ನ ಭದ್ರಕೋಟೆ ಮಾಡಿಕೊಂಡಿದ್ದ ಬಿಜೆಪಿಗೆ ಈ ಬಾರಿ ಮತದಾರ ಶಾಕ್‌ ನೀಡಿದ್ದಾನೆ. ಸತತ ಆರು ಬಾರಿ ಸೋಲುಕಂಡಿದ್ದ ಕಾಂಗ್ರೆಸ್‌ ಇದೀಗ ಕೊನೆಗೂ ಗೆಲುವಿನ ನಗೆ ಬೀರಿದೆ. ಬೊಮ್ಮಾಯಿ ಕುಟುಂಬದ ಮೂರನೇ ಕುಡಿಯನ್ನು ವಿಧಾನಸಭೆಗೆ ಪ್ರವೇಶಿಸುವ ಪ್ರಯತ್ನಕ್ಕೆ ಸದ್ಯ ಹಿನ್ನಡೆಯಾಗಿದೆ.

ಮತ್ತೆ ಸೋತ ನಿಖಿಲ್‌

ಒಕ್ಕಲಿಗರ ಕೋಟೆ ಎನಿಸಿರುವ ಚನ್ನಪಟ್ಟಣದಲ್ಲಿ ಈ ಬಾರಿ ಸೈನಿಕನಿಗೆ ಗೆಲುವಾಗಿದೆ. ಎಚ್‌ ಡಿಕೆ ವರ್ಸಸ್‌ ಡಿಕೆಶಿ ಎಂದೇ ಗುರುತಿಸಲ್ಪಟ್ಟಿದ್ದ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಹಲವು ಸರ್ಕಸ್‌ ಗಳ ಬಳಿಕ ಕಾಂಗ್ರೆಸ್‌ ಗೆ ಗೆಲುವಾಗಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ರಾಜಕೀಯ ಪ್ರವೇಶ ಮಾಡಿದ್ದ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಅಂದು ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ದ ಸೋಲು ಕಂಡಿದ್ದರು. ಎರಡನೇ ಪ್ರಯತ್ನವಾಗಿ 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಲ್ಲಿ ಸ್ಪರ್ಧೆ ಮಾಡಿದ್ದ ನಿಖಿಲ್‌ ಗೆ ಮತ್ತೆ ಸೋಲಾಗಿತ್ತು. ಚನ್ನಪಟ್ಟಣದಲ್ಲಿ ಶಾಸಕರಾಗಿದ್ದ ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಗೆದ್ದ ಬಳಿಕ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದರು. ಉಪ ಚುನಾವಣೆಯಲ್ಲಿ ಆರಂಭದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದ ನಿಖಿಲ್‌ ಬದಲಾದ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸಬೇಕಾಯಿತು. ಆದರೆ ಮೂರನೇ ಬಾರಿಗೂ ಅದೃಷ್ಟದ ಬಾಗಿಲು ಮಾತ್ರ ನಿಖಿಲ್‌ ಗೆ ತೆರಯಲಿಲ್ಲ.

ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌ ಡಿ ದೇವೇಗೌಡ, ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಸೇರಿ ದಿಗ್ಗಜರು ನಿಖಿಲ್‌ ಪರ ಪ್ರಚಾರ ನಡೆಸಿದ್ದರು. ಪ್ರಚಾರದ ಸಂದರ್ಭದಲ್ಲಿ “ಈ ಬಾರಿಯಾದರೂ ನನ್ನ ಕೈ ಬಿಡಬೇಡಿ” ಎಂದು ನಿಖಿಲ್‌ ಕಣ್ಣೀರು ಹಾಕಿದ ಪ್ರಸಂಗವೂ ನಡೆದಿತ್ತು. ಆದರೆ ಮತ ಎಣಿಕೆ ಫಲಿತಾಂಶ ಮತ್ತೆ ನಿಖಿಲ್‌ ಗೆ ನಿರಾಸೆ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next