Advertisement

ಇನ್ನು ವಾಗ್ವಾದದ ಭರಾಟೆ

10:18 AM Nov 21, 2019 | mahesh |

ಬೆಂಗಳೂರು: ಉಪ ಚುನಾವಣೆ ಕಣದಲ್ಲಿ ನಾಮಪತ್ರ ಸಲ್ಲಿಕೆ ಮುಗಿಯುತ್ತಿದ್ದಂತೆ ಪ್ರಚಾರದ ಭರಾಟೆ ಪ್ರಾರಂಭವಾಗಿದ್ದು, ನಾಯಕರ ನಡುವೆ ವಾಕ್ಸಮರ, ಆರೋಪ-ಪ್ರತ್ಯಾರೋಪಗಳು ಚುನಾವಣ ಕಾವು ಏರಿಸಿವೆ.

Advertisement

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ಮುಂದಿನ ಮೂರೂವರೆ ವರ್ಷಗಳ ಅವಧಿಯವರೆಗೆ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮುಂದುವರಿಸಲು ಈಗಾಗಲೇ ರಾಜ್ಯದ ಜನರು ತೀರ್ಮಾನಿಸಿದ್ದಾರೆ. ಉಪ ಚುನಾವಣೆ ಅನಂತರ ಸರಕಾರ ಬಿದ್ದು ಹೋಗಲಿದೆ ಎಂಬ ವಿಪಕ್ಷ ನಾಯಕರ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.

ಈಗಾಗಲೇ ರಾಜ್ಯದ ಮತದಾರರು ಯಡಿಯೂರಪ್ಪ ಅಧಿಕಾರದ ಅವಧಿಯನ್ನು ಪೂರ್ಣಗೊಳಿಸಬೇಕು ಎಂದು ನಿರ್ಧರಿಸಿದ್ದಾರೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರು ಹಗುರವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಬೇಕು ಎಂದರು.

ಅನರ್ಹರ ವಿರುದ್ಧ ಹೋರಾಟ
ಮತ್ತೂಂದೆಡೆ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್‌ ಅಭ್ಯರ್ಥಿಗಳನ್ನು ಸೋಲಿಸಲು ಕಾಂಗ್ರೆಸ್‌ ನಾಯಕರು ಏನೆಲ್ಲ ಮಾಡಿದರೋ ಅದೇ ರೀತಿ ಉಪ ಚುನಾವಣೆಯಲ್ಲೂ ಸೋಲಿ ಸಲು ಬಯಸಿದ್ದಾರೆ. ಆದರೆ ನಾವು ಜೆಡಿಎಸ್‌ ಗೆಲ್ಲದಿದ್ದರೂ ಕಾಂಗ್ರೆಸ್‌ ಗೆಲ್ಲಲಿ. ಅನರ್ಹರು ಗೆಲ್ಲಬಾರದು ಎಂದು ಬಯಸಿದ್ದೇವೆ. ಆ ಮಟ್ಟ ದಲ್ಲಿ ಅನರ್ಹರ ವಿರುದ್ಧ ನಮ್ಮ ಹೋರಾಟ ಇರಲಿದೆ ಎಂದು ಹೇಳಿದರು.

ಇನ್ನೊಂದೆಡೆ ಉಪ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್‌ನವರು ಮತದಾರರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಈ ಆರೋಪವನ್ನು ಬಿಜೆಪಿ ನಾಯಕರು ಅಲ್ಲಗೆಳೆದಿದ್ದಾರೆ.

Advertisement

ಸಿದ್ದು ವರ್ಸಸ್‌ ರಾಮುಲು
ಪರಿಶಿಷ್ಟ ಪಂಗಡಕ್ಕೆ ಶೇ. 7.5 ಮೀಸಲಾತಿ ಕೊಡಿಸುವ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಸಚಿವ ಶ್ರೀರಾಮುಲು ನಡುವೆ ವಾಕ್ಸಮರ ನಡೆದಿದೆ. ಮೀಸಲಾತಿ ಕೊಡಿಸಲು ಆಗದಿದ್ದಕ್ಕೆ ಶ್ರೀರಾಮುಲು ರಾಜೀ ನಾಮೆ ಕೊಡಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಶ್ರೀರಾಮುಲು ಮೀಸಲಾತಿ ಕೊಡಿಸದಿದ್ದರೆ ನಾನು ಸಚಿವನಾಗಿರಲಾರೆ ಎಂದು ಹೇಳಿದ್ದಾರೆ.

ಜತೆಗೆ ಸಿದ್ದರಾಮಯ್ಯ ವಿರುದ್ಧ ರಾಜ್ಯದ ಯಾವುದೇ ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧ. ಅವರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿ, ನಾನೂ ಕೊಡುತ್ತೇನೆ. ಮೀಸಲು ಕ್ಷೇತ್ರ ಹೊರತು ಪಡಿಸಿ ಉಳಿದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸುವು ದಾದರೆ ಪ್ರತಿಯಾಗಿ ಸ್ಪರ್ಧಿಸುವುದಾಗಿ ಪಂಥಾಹ್ವಾನ ನೀಡಿದ್ದಾರೆ.

ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗುವುದಿಲ್ಲ ಎಂದು ಹೇಳಿದ ನೀವು ಅನಂತರ ಅವರ ಮನೆ ಬಾಗಿಲಿಗೆ ಹೋಗಿ ಕರೆತಂದು ಮುಖ್ಯಮಂತ್ರಿ ಮಾಡಿ ಬಳಿಕ ಷಡ್ಯಂತ್ರ ನಡೆಸಿ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಿದ ನಿಮಗೆ ಮಾನ, ಮರ್ಯಾದೆ ಎಂದರೆ ಏನು ಎಂಬುದು ಗೊತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.

ಮೊಯಿಲಿ ವಿರುದ್ಧ ಗರಂ
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಾ| ಕೆ. ಸುಧಾಕರ್‌, ಎಚ್‌.ಡಿ. ಕುಮಾರಸ್ವಾಮಿ ಹಾಗೂ ಡಿ.ಕೆ. ಶಿವಕುಮಾರ್‌ ನನ್ನನ್ನು ಸೋಲಿಸಲು ಯಾವ ದಾಳ ಉರುಳಿಸುತ್ತಾರೋ ನೋಡೋಣ ಎಂದು ಲೇವಡಿ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅದರಿಂದಲೇ ಅವರನ್ನು ಮಂಗಳೂರಿನಿಂದ ಜನ ಓಡಿಸಿದ್ದರು ಎಂದು ಹೇಳಿದ್ದಾರೆ.

ಬಚ್ಚೇಗೌಡ ನಾಮಪತ್ರ ತಿರಸ್ಕೃತ
ಬೆಂಗಳೂರು: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಕೆ.ಪಿ. ಬಚ್ಚೇಗೌಡ ನಾಮಪತ್ರ ತಿರಸ್ಕಾರಗೊಂಡಿರುವುದರಿಂದ ರಾಧಾಕೃಷ್ಣ ಜೆಡಿಎಸ್‌ನ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಕೆ.ಪಿ.ಬಚ್ಚೇಗೌಡ ಹಾಗೂ ರಾಧಾಕೃಷ್ಣ ಇಬ್ಬರೂ ಜೆಡಿಎಸ್‌ ಅಭ್ಯರ್ಥಿಗಳಾಗಿ ಬಿ ಫಾರಂ ಪಡೆದು ನಾಮ ಪತ್ರ ಸಲ್ಲಿಸಿದ್ದರಾದರೂ ಕೆ.ಪಿ. ಬಚ್ಚೇಗೌಡರ ನಾಮಪತ್ರ ತಿರಸ್ಕೃತಗೊಂಡು ರಾಧಾಕೃಷ್ಣ ನಾಮಪತ್ರ ಅಂಗೀಕಾರಗೊಂಡಿದೆ. ಹೀಗಾಗಿ ರಾಧಾಕೃಷ್ಣ ಅಧಿಕೃತ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕೆ.ಪಿ. ಬಚ್ಚೇಗೌಡರ ಬದಲು ರಾಧಾಕೃಷ್ಣಗೆ ಟಿಕೆಟ್‌ ನೀಡುವ ಬಗ್ಗೆ ರವಿವಾರ ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಮೇಲೆ ಸ್ಥಳೀಯ ಕೆಲವು ನಾಯಕರು ಒತ್ತಡ ಹೇರಿದ್ದರು. ನಾಮಪತ್ರ ತಿರಸ್ಕಾರ ಮಾಡಿದ್ದರಿಂದ ಬಚ್ಚೇಗೌಡರು ಬೇಸರಗೊಂಡಿದ್ದಾರೆಂದು ಹೇಳಲಾಗಿದೆ.

ಸತೀಶ ಜಾರಕಿಹೊಳಿ ನಾಮಪತ್ರ ತಿರಸ್ಕೃತ
ಬೆಳಗಾವಿ: ಗೋಕಾಕದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಲಖನ್‌ ಜಾರಕಿಹೊಳಿ, ಬಿಜೆಪಿಯ ರಮೇಶ ಜಾರಕಿಹೊಳಿ ಮತ್ತು ಜೆಡಿಎಸ್‌ ಅಭ್ಯರ್ಥಿ ಅಶೋಕ ಪೂಜಾರಿ ಅವರ ನಾಮಪತ್ರಗಳು ಕ್ರಮಬದ್ಧ ವಾಗಿವೆ. ಆದರೆ ಕಾಂಗ್ರೆಸ್‌ನಿಂದ ಡಮ್ಮಿ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದ ಶಾಸಕ ಸತೀಶ ಜಾರಕಿಹೊಳಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಬಿ ಫಾರ್ಮ್ ಮತ್ತು ಕೆಲವೊಂದು ಮಾಹಿತಿಗಳನ್ನು ಸಮರ್ಪಕವಾಗಿ ನಮೂದಿಸದಿರುವುದರಿಂದ ನಾಮಪತ್ರ ತಿರಸ್ಕೃತಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next