ಬೆಂಗಳೂರು: ಡಿಸೆಂಬರ್ 5 ರಂದು ನಡೆಯುವ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ 8 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಒಪ್ಪಿಗೆ ಪಡೆದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ 8 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾಗಿರುವ ಎಂಟು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕೈ ಮೇಲಾಗಿರುವುದು ಕಂಡು ಬರುತ್ತದೆ.
ಗೆದ್ದ ಸಿದ್ದರಾಮಯ್ಯ: ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಮತ್ತೂಮ್ಮೆ ಸಿದ್ದರಾಮಯ್ಯ ಕೈ ಮೇಲಾಗಿದೆ. ಹೊಸಕೋಟೆಯಿಂದ ತಮ್ಮ ಆಪ್ತ ಹಾಗೂ ಹೆಬ್ಟಾಳ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್‌ನಿಂದ ಡಿ.ಕೆ. ಶಿವಕುಮಾರ್ ಶಿಷ್ಯ ಹಾಗೂ 2018 ರ ವಿಧಾನಸಭೆ ಚುನಾವಣೆಯ ಅಭ್ಯರ್ಥಿ ಮಂಜುನಾಥ್ ಟಿಕೆಟ್ ಗಿಟ್ಟಿಸುವಲ್ಲಿ ವಿಫಲವಾಗಿದ್ದು, ಸಿದ್ದರಾಮಯ್ಯ ಶಿಷ್ಯ ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎಂ. ಶಿವರಾಜು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಫಲವಾಗಿದ್ದಾರೆ.
ಕೆ.ಆರ್.ಪುರದಿಂದ ವಿಧಾನ ಪರಿಷತ್ ಸದಸ್ಯ ಎಂ. ನಾರಾಯಣಸ್ವಾಮಿ ಟಿಕೆಟ್ ಪಡೆದಿದ್ದು, ಸ್ಥಳೀಯರಿಗೆ ಟಿಕೆಟ್ ಕೊಡಬೇಕೆಂಬ ಹೋರಾಟಕ್ಕೆ ಹಿನ್ನಡೆಯಾಗಿದೆ. ಚಿಕ್ಕಬಳ್ಳಾಪುರದಿಂದ ಮಾಜಿ ಮುಖ್ಯಮಂತ್ರಿ ಎಂ, ವೀರಪ್ಪ ಮೊಯ್ಲಿ ಶಿಷ್ಯ ಎಂ. ಆಂಜಿನಪ್ಪಗೆ ಟಿಕೆಟ್ ಸಿಕ್ಕಿದೆ. ಆಂಜನಪ್ಪ 2013ರಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಪಕ್ಷದ ವಿರುದ್ಧ ಮುನಿಸಿಕೊಂಡು ಚಿಕ್ಕಬಳ್ಳಾಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನ ತೊರೆದು ಜೆಡಿಎಸ್ ಸೇರಿದ್ದರು. ಕಳೆದ ಚುನಾವಣೆ ಸಂದರ್ಭದಲ್ಲಿ ಮತ್ತೆ ಕಾಂಗ್ರೆಸ್ ಸೇರಿದ್ದರು.
ಯಲ್ಲಾಪುರ ಕ್ಷೇತ್ರದಲ್ಲಿ ಆರ್.ವಿ.ದೇಶಪಾಂಡೆ ಆಪ್ತ ಭೀಮಣ್ಣ ನಾಯ್ಕ, ಹಿರೆಕೆರೂರು ಕ್ಷೇತ್ರಕ್ಕೆ ಎಚ್.ಕೆ. ಪಾಟೀಲ್ ಆಪ್ತರಾಗಿರುವ ಬಿ.ಎಚ್.ಬನ್ನಿಕೋಡ್ ಹಾಗೂ ರಾಣೆಬೆನ್ನೂರು ಕ್ಷೇತ್ರಕ್ಕೆ ನಿರೀಕ್ಷೆಯಂತೆ ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ್ ಅವರಿಗೆ ನೀಡಲಾಗಿದೆ.
ಇದರ ಜೊತೆಗೆ ಎರಡು ವಿಧಾನ ಪರಿಷತ್ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಡಾ. ಎಂ. ಕುಬೇರಪ್ಪ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಶರಣಪ್ಪ ಮಟ್ಟೂರ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ.
ಅಭ್ಯರ್ಥಿಗಳ ಪಟ್ಟಿ
ಯಲ್ಲಾಪುರ- ಭೀಮಣ್ಣ ನಾಯ್ಕ್
ಹಿರೆಕೆರೂರು- ಬಿ.ಎಚ್. ಬನ್ನಿಕೋಡ್
ರಾಣೆಬೆನ್ನೂರು- ಕೆ.ಬಿ. ಕೋಳಿವಾಡ,
ಚಿಕ್ಕಬಳ್ಳಾಪುರ- ಎಂ. ಆಂಜನಪ್ಪ
ಕೆ.ಆರ್.ಪುರ- ಎಂ. ನಾರಾಯಣಸ್ವಾಮಿ
ಮಹಾಲಕ್ಷ್ಮೀ ಲೇಔಟ್- ಎಂ. ಶಿವರಾಜು
ಹೊಸಕೋಟೆ- ಪದ್ಮಾವತಿ ಸುರೇಶ್
ಹುಣಸೂರು- ಎಚ್.ಪಿ. ಮಂಜುನಾಥ್
ವಿಧಾನ ಪರಿಷತ್ ಕ್ಷೇತ್ರಗಳಿಗೆ ಅಭ್ಯರ್ಥಿಗಳು
ಪಶ್ಚಿಮ ಪದವೀಧರ ಕ್ಷೇತ್ರ: ಡಾ. ಎಂ. ಕುಬೇರಪ್ಪ.
ಈಶಾನ್ಯ ಶಿಕ್ಷಕರ ಕ್ಷೇತ್ರ-ಶರಣಪ್ಪ ಮಟ್ಟೂರ