ಬೆಂಗಳೂರು: ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹಗೊಂಡಿರುವ ಶಾಸಕರ ವಿಚಾರದಲ್ಲಿ ಏನು ತೀರ್ಪು ಬರುತ್ತದೋ ಗೊತ್ತಿಲ್ಲ. ಸ್ಪೀಕರ್ ತೀರ್ಮಾನ ಎತ್ತಿ ಹಿಡಿದರೆ ಉಪ ಚುನಾವಣೆ ನಡೆಯುತ್ತದೆ, ಇಲ್ಲದಿದ್ದರೆ ಇಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಉಪ ಚುನಾವಣೆ ನಡೆದರೆ ಹದಿನೈದು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ.ಅದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಮ್ಮಿಶ್ರ ಸರಕಾರದ ಪತನಕ್ಕೆ ಕಾರಣರಾದ ಜೆಡಿಎಸ್‌ನ ಮೂವರು ಅನರ್ಹಗೊಂಡ ಶಾಸಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ನ ಅನರ್ಹಗೊಂಡ ಶಾಸಕರನ್ನು ಕರೆದುಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.
ವಿಧಾನ ಪರಿಷತ್‌ನ ಪದವೀಧರರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಅ.18 ರಂದು ಸಭೆ ನಡೆಸುತ್ತೇವೆ. ಬಸವರಾಜ ಹೊರಟ್ಟಿ ಅವರನ್ನೇ ಕರೆದು ಪಕ್ಷದ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದರು.
ಸಾ.ರಾ.ಮಹೇಶ್ ಅವರು ಎಚ್.ವಿಶ್ವನಾಥ್ ಆರೋಪದಿಂದ ನೊಂದು ರಾಜೀನಾಮೆ ನೀಡಿರುವುದು ನಿಜ. ಸ್ಪೀಕರ್ ಊರಲ್ಲಿ ಇರಲಿಲ್ಲ, ವಾಪಸ್ ಪಡೆಯಲು ಹೇಳಿದ್ದೇನೆ. ಗುರುವಾರ ವಾಪಸ್ ಪಡೆಯುತ್ತಾರೆ. ಒಬ್ಬರು ಚಾಮುಂಡಿ ಬೆಟ್ಟಕ್ಕೆ ಬನ್ನಿ ಅಂತಾರೆ, ಮತ್ತೂಬ್ಬರು ಆವಶ್ಯಕತೆ ಇಲ್ಲ ಎನ್ನುತ್ತಾರೆ. ಆರೋಪ-ಪ್ರತ್ಯಾರೋಪಗಳು ಸರಿಯಲ್ಲ.
ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ