ಬೆಂಗಳೂರು: ರಾಜಧಾನಿಯ ಜಿದ್ದಾಜಿದ್ದಿ ಕ್ಷೇತ್ರಗಳಲ್ಲಿ ಸೋಮವಾರ ಉಪ ಚುನಾವಣೆ ನಾಮಪತ್ರ ಸಲ್ಲಿಕೆ ಹಾಗೂ ರೋಡ್ ಶೋ ಭರಾಟೆ ಜೋರಾಗಿಯೇ ಇತ್ತು. ಯಶವಂತಪುರ, ಮಹಾಲಕ್ಷ್ಮಿ ಲೇ ಔಟ್, ಶಿವಾಜಿನಗರ, ಕೆ.ಆರ್.ಪುರಂ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್‌ನ ಜವರಾಯಿಗೌಡ ನಾಮಪತ್ರ ಸಲ್ಲಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಥ್ ನೀಡಿದರೆ, ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಗೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ ಜತೆಯಾದರು. ಕಾಂಗ್ರೆಸ್ ಅಭ್ಯರ್ಥಿ ನಾಗರಾಜ್ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಸಚಿವರಾದ ಎಂ.ಕೃಷ್ಣಪ್ಪ, ಟಿ.ಬಿ.ಜಯಚಂದ್ರ ಹಾಜರಿದ್ದರು. ಕೆ.ಆರ್.ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾರಾಯಣ ಸ್ವಾಮಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಾಥ್ ನೀಡಿದರು.
ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ನಾಮಪತ್ರ ಸಲ್ಲಿಸುವಾಗ ಸಚಿವ ವಿ.ಸೋಮಣ್ಣ, ಮಾಜಿ ಸಚಿವ ಅರವಿಂದ ಲಿಂಬಾವಳಿ ಇದ್ದರು. ಬೈರತಿ ನಡೆಸಿದ ರೋಡ್ ಶೋನಲ್ಲಿ ಸಹಸ್ರಾರು ಬೆಂಬಲಿಗರು ಪಾಲ್ಗೊಂಡಿದ್ದರಿಂದ ಸುತ್ತಮುತ್ತಲ ಭಾಗದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಒಗ್ಗಟ್ಟು ಪ್ರದರ್ಶನ: ಮಹಾಲಕ್ಷ್ಮಿ ಲೇ ಔಟ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಗೋಪಾಲಯ್ಯ ನಾಮಪತ್ರ ಸಲ್ಲಿಕೆ ವೇಳೆ ಸಚಿವ ಎಸ್.ಸುರೇಶ್ ಕುಮಾರ್, ಮಾಜಿ ಶಾಸಕ ಹಾಗೂ ಟಿಕೆಟ್ ಆಕಾಂಕ್ಷಿ ಯಾಗಿದ್ದ ನೆ.ಲ.ನರೇಂದ್ರಬಾಬು, ನಾಯಕರಾದ ಹರೀಶ್, ಎಂ.ನಾಗರಾಜ್ ಸೇರಿ ಎಲ್ಲ ಪಾಲಿಕೆಯ ಸದಸ್ಯರು ಹಾಜರಿದ್ದು ಒಗ್ಗಟ್ಟು ಪ್ರದರ್ಶಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಗೋಪಾಲಯ್ಯ ಅವರು ಪತ್ನಿ ಹೇಮಲತಾ ಅವರೊಂದಿಗೆ ಪ್ರಮುಖ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ನಾಯಕರು, ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶಿಸಿದರು.
ಹಿಂದೆ ಜೆಡಿಎಸ್‌ನಿಂದ ಎರಡು ಬಾರಿ ಮಹಾಲಕ್ಷ್ಮಿ ಲೇ ಔಟ್ ಕ್ಷೇತ್ರದಲ್ಲಿ ಜಯಗಳಿಸಿದ್ದ ಗೋಪಾಲಯ್ಯ, ಕೇಸರಿ ಬಣ್ಣದ ಅಂಗಿ ಧರಿಸಿ ನಾಮಪತ್ರ ಸಲ್ಲಿಕೆಗೆ ಬಂದಿದ್ದು ವಿಶೇಷವಾಗಿತ್ತು ಇದೇ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗಿರೀಶ್ ನಾಶಿ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಜರಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು ನಾಮಪತ್ರ ಸಲ್ಲಿಸುವಾಗ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಎಚ್.ಎಂ.ರೇವಣ್ಣ ಜತೆಗಿದ್ದರು. ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಸರವಣ ನಾಮಪತ್ರ ಸಲ್ಲಿಕೆ ವೇಳೆ ಸಂಸದ ಪಿ.ಸಿ.ಮೋಹನ್, ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನಾ ಹಾಜರಿದ್ದರು. ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ನಾಮಪತ್ರ ಸಲ್ಲಿಸುವಾಗ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕ ಎನ್.ಎ.ಹ್ಯಾರೀಸ್ ಇದ್ದರು. ಜೆಡಿಎಸ್ ಅಭ್ಯರ್ಥಿ ತನ್ವೀರ್ ಅಹಮದ್ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಜಫ್ರುಲ್ಲಾ ಖಾನ್ ಜತೆಗೂಡಿದರು.