ಹೊಸದಿಲ್ಲಿ: ಟಿಎಂಸಿ ಪರಾಜಿತ ಅಭ್ಯರ್ಥಿ, ಪ. ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಸ್ಪರ್ಧಿಸಲು ಉದ್ದೇಶಿಸಿರುವ ಭವಾನಿಪುರ್ ವಿಧಾನಸಭೆ ಕ್ಷೇತ್ರಕ್ಕೆ ಸೆ. 30ರಂದು ಉಪಚುನಾವಣೆ ನಿಗದಿಯಾಗಿದೆ. ಇದರೊಂದಿಗೆ ಪ. ಬಂಗಾಲದ ಸಂಸರ್‌ಗಂಜ್, ಜಾಂಗೀರ್‌ಪುರ್ ಅಲ್ಲದೆ ಒಡಿಶಾದ ಪಿಪ್ಲಿ ಕ್ಷೇತ್ರಕ್ಕೂ ಅಂದೇ ಉಪಚುನಾವಣೆ ನಡೆಸಲು ಕೇಂದ್ರ ಚುನಾವಣ ಆಯೋಗ ನಿರ್ಧರಿಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋತಿದ್ದ ಮಮತಾ ಬ್ಯಾನರ್ಜಿ, ಪಕ್ಷದ ಬಹುಮತದ ಬಳಿಕ ಸಿಎಂ ಹುದ್ದೆಗೆ ಏರಿದ್ದರು.
ಈಗ ಅವರಿಗೆ ವಿಧಾನಸಭೆಗೆ ಆಯ್ಕೆಯಾಗುವ ಅನಿವಾರ್ಯತೆ ಎದುರಾಗಿದ್ದು, ಪುನಃ ತಮ್ಮ ತವರು ಕ್ಷೇತ್ರ ಭವಾನಿಪುರ್‌ನಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಕೊರೊನಾ ಆತಂಕ ಹಿನ್ನೆಲೆಯಲ್ಲಿ ಆಯೋಗ ಹಿಂದೆಂದಿಗಿಂತ ಕಠಿನ ಮಾರ್ಗಸೂಚಿ ರೂಪಿಸಿದೆ. ಅ. 3ರಂದು ಎಣಿಕೆ ನಡೆಯಲಿದೆ. ಇದೇ ವೇಳೆ, ಮಹಾರಾಷ್ಟ್ರ ಮತ್ತು ತೆಲಂಗಾಣಕ್ಕೆ ಸೇರಿದ ಒಟ್ಟು 31 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಕೊರೊನಾ ಹಿನ್ನೆಲೆಯಲ್ಲಿ ಸದ್ಯಕ್ಕೆ ಮುಂದೂಡಲಾಗಿದೆ ಎಂದು ಆಯೋಗ ತಿಳಿಸಿದೆ.
ದಸರೆ ಬಳಿಕ: ತೆಲಂಗಾಣದ ಹುಝುರಾಬಾದ್ ಸೇರಿದಂತೆ ದೇಶಾದ್ಯಂತ ಬಾಕಿ ಉಳಿದ 33 ಕ್ಷೇತ್ರಗಳಿಗೆ ದಸರೆಯ ಬಳಿಕ ಉಪಚುನಾವಣೆ ನಡೆಸಲು ಆಯೋಗ ನಿರ್ಧರಿಸಿದೆ. ಚುನಾವಣೆ ನಿಗದಿ ಸಂಬಂಧ ಆಯೋಗ ಸಂಬಂಧಿಸಿದ ರಾಜ್ಯಗಳಿಗೆ ಪತ್ರ ಬರೆದು, ಪ್ರತಿಕ್ರಿಯೆಗೆ ಸೂಚಿಸಿತ್ತು. ಪ. ಬಂಗಾಲ ತುರ್ತಾಗಿ ಸ್ಪಂದಿಸಿದ್ದು, ತತ್‌ಕ್ಷಣ ಚುನಾವಣೆ ನಡೆಸಲು ಕೋರಿತ್ತು.
ಟಿಎಂಸಿಗೆ ಸೌಮನ್ ಮರುಸೇರ್ಪಡೆ :
ಪಶ್ಚಿಮ ಬಂಗಾಲದಲ್ಲಿನ ಉಪಚುನಾವಣೆಗೆ ಚುನಾವಣ ಆಯೋಗ ದಿನಾಂಕವನ್ನು ನಿಗದಿ ಪಡಿಸಿದ ಬೆನ್ನಲ್ಲೇ ಬಿಜೆಪಿ ಶಾಸಕರೊಬ್ಬರು ಪಕ್ಷ ತೊರೆದು, ಆಡಳಿತದಲ್ಲಿರುವ ಟಿಎಂಸಿ ಸೇರಿದ್ದಾರೆ. ಕಲಿಯಾಗಂಜ್‌ನ ಶಾಸಕ ಸೌಮನ್ ರಾಯ್ ಟಿಎಂಸಿಗೆ ಮರಳಿರುವ ನಾಯಕ. ಟಿಎಂಸಿಯ ನಾಯಕನಾಗಿದ್ದು, ಬಿಜೆಪಿಗೆ ಬಂದಿದ್ದ ಅವರು ಇದೀಗ ಮತ್ತೆ ಟಿಎಂಸಿಗೆ ಮರಳಿದ್ದಾರೆ. ಬಂಗಾಲದ ಅಭಿವೃದ್ಧಿಗಾಗಿ ಅವರು ಪಕ್ಷಕ್ಕೆ ಮರಳಿದ್ದಾರೆ ಎಂದು ಟಿಎಂಸಿ ನಾಯಕ ಪಾರ್ಥ ಚಟರ್ಜಿ ತಿಳಿಸಿದ್ದಾರೆ. ಕಳೆದ ನಾಲ್ಕು ವಾರಗಳಲ್ಲಿ ಬಿಜೆಪಿ ತೊರೆದ ನಾಲ್ಕನೇ ಶಾಸಕ ಇವರು. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಬಲ 71ಕ್ಕೆ ಕುಸಿದಿದೆ.