Advertisement
ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪನೆಗೆ ಚುನಾವಣೆ ಪೂರ್ವ ಸಿದ್ಧತೆಗಳನ್ನು ಚುರುಕುಗೊಳಿಸಲು ಆರಂಭಿಸಿವೆ. ಕಳೆದ ವಿಧಾನಸಣೆ ಚುನಾವಣೆಯಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವುದರೊಂದಿಗೆ ಬಿಗಿ ಹಿಡಿತ ಸಾಧಿಸಿದ್ದ ಜೆಡಿಎಸ್‌ಗೆ ಉಪ ಚುನಾವಣೆ ಅಸ್ತಿತ್ವದ ಉಳಿವಿನ ಹೋರಾಟವಾಗಿದೆ. ಸತತ 2 ಬಾರಿ ಸೋಲುಂಡಿರುವ ಕಾಂಗ್ರೆಸ್ ಜನರ ಅನುಕಂಪವನ್ನು ಎದುರುನೋಡುತ್ತಿದ್ದರೆ, ಸಿಎಂ ಯಡಿಯೂರಪ್ಪನವರ ತವರಾದ ಕೆ.ಆರ್.ಪೇಟೆಯಲ್ಲಿ ಕಮಲ ಅರಳುವಂತೆ ಮಾಡುವುದು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
Related Articles
Advertisement
ಸದ್ಯಕ್ಕೆ ಕೆಸಿಎನ್ಗೆ ಅತಂತ್ರ ಸ್ಥಿತಿ: ಜೆಡಿಎಸ್ ನಾಯಕತ್ವದ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿ ಜೊತೆಗೂಡಿ ಪತನಗೊಳಿಸಿದ ಕ್ಷೇತ್ರದ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡರ ಚುನಾವಣಾ ಸ್ಪರ್ಧೆ ಅತಂತ್ರವಾಗಿದೆ. ಶಾಸಕರ ಅನರ್ಹತೆ ಎತ್ತಿ ಹಿಡಿದು ಚುನಾವಣೆ ಸ್ಪರ್ಧಿಸದಂತೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ತೀರ್ಪು ನೀಡಿದ್ದು, ಅದು ಇನ್ನೂ ಜಾರಿಯಲ್ಲಿದೆ.
ಆ ಪ್ರಕಾರ ಕೆ.ಸಿ.ನಾರಾಯಣಗೌಡರ ಸ್ಪರ್ಧೆಗೆ ಸದ್ಯಕ್ಕೆ ಅವಕಾಶವಿಲ್ಲದಂತಾಗಿದೆ. ಅನರ್ಹ ಶಾಸಕರು ಸುಪ್ರೀಂಕೋರ್ಟ್‌ನಿಂದ ಸ್ಪೀಕರ್ ಆದೇಶಕ್ಕೆ ತಡೆ ಅಥವಾ ಉಪ ಚುನಾವಣೆ ತಡೆಯಾಜ್ಞೆ ತಂದಲ್ಲಿ ಮಾತ್ರ ರಾಜಕೀಯವಾಗಿ ಸುಧಾರಿಸಿಕೊಳ್ಳಲು ಸಾಧ್ಯವಾಗಲಿದೆ ಎನ್ನಲಾಗುತ್ತಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರದಲ್ಲಿ ಕ್ಷೇತ್ರದಿಂದ ನಾಪತ್ತೆಯಾಗಿದ್ದ ಕೆ.ಸಿ.ನಾರಾಯಣಗೌಡರು ಒಂದೂವರೆ ತಿಂಗಳಿಂದ ಕ್ಷೇತ್ರದಲ್ಲಿ ಸಂಚರಿಸುತ್ತಾ ಜನರ ವಿಶ್ವಾಸ ಸಂಪಾದಿಸುವ ಪ್ರಯತ್ನದಲ್ಲಿ ಸಕ್ರಿಯರಾಗಿದ್ದರು. ಚುನಾವಣೆಗೆ ಸ್ಪರ್ಧಿಸುವ ಹಂಬಲದೊಂದಿಗೆ ಬಿಜೆಪಿ ನಾಯಕರೊಂದಿಗೆ ನಿಕಟ ಸಂಪರ್ಕದಲ್ಲಿದ್ದುಕೊಂಡು ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಅಧಿಕಾರಿಗಳ ಮೇಲೆ ಒತ್ತಡ ತಂದು ಚಾಲನೆ ಕೊಡಿಸುತ್ತಾ ಅನರ್ಹತೆ ನಡುವೆಯೂ ತಮ್ಮ ಶಕ್ತಿ ಪ್ರದರ್ಶಿಸುತ್ತಾ ಅಸ್ತಿತ್ವ ಉಳಿವಿಗೆ ಹೋರಾಟ ನಡೆಸುತ್ತಿದ್ದರು.
ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಜೆಡಿಎಸ್‌ನ ನಿಖೀಲ್ ಕುಮಾರಸ್ವಾಮಿ ವಿರುದ್ಧ ದಿಗ್ವಿಜಯ ಸಾಧಿಸಿದ ಸುಮಲತಾ ಅಂಬರೀಶ್, ವರ್ಚಸ್ವಿ ರಾಜಕಾರಣಿಯಾಗಿ ಜಿಲ್ಲೆಯೊಳಗೆ ಬೆಳವಣಿಗೆ ಕಾಣುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಅವರನ್ನೂ ಪ್ರಚಾರಕ್ಕೆ ಬಳಸಿಕೊಳ್ಳುವುದಕ್ಕೆ ನಾರಾಯಣಗೌಡರು
ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಇದೀಗ ಅನರ್ಹ ಶಾಸಕರು ಉಪ ಚುನಾವಣೆಗೆ ಸ್ಪರ್ಧಿಸದಂತೆ ಚುನಾವಣಾಧಿಕಾರಿ ಘೋಷಿಸಿರುವುದು ರಾಜಕೀಯ ಭವಿಷ್ಯಕ್ಕೆ ಬರಸಿಡಿಲು ಬಡಿದಂತಾಗಿದೆ.
ಬಿಎಸ್ವೈಗೆ ಪ್ರತಿಷ್ಠೆಯ ಪ್ರಶ್ನೆ: ಇನ್ನು ಕೆ.ಆರ್.ಪೇಟೆ ಬಿ.ಎಸ್.ಯಡಿಯೂರಪ್ಪನವರ ತವರು ಕ್ಷೇತ್ರ. ಉಪಚುನಾವಣೆ ಗೆಲುವು ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ. ಕೆ.ಸಿ.ನಾರಾಯಣಗೌಡರು ಬಿಜೆಪಿ ಅಭ್ಯರ್ಥಿಯಾಗಲು ಇಚ್ಛಿಸಿದರೆ ಟಿಕೆಟ್ ಕೊಡುವುದಕ್ಕೂ ಸಿದ್ಧರಿದ್ದರು. ಈಗ ಅವರ ಸ್ಪರ್ಧೆ ಡೋಲಾಯಮಾನಸ್ಥಿತಿ ತಲುಪಿರುವುದರಿಂದ ಪ್ರಬಲ ಅಭ್ಯರ್ಥಿಗೆ ಹುಡುಕಾಟ ನಡೆಸುವಂತಾಗಿದೆ. ಕ್ಷೇತ್ರದಿಂದ ಬಿಎಸ್‌ವೈ ಪುತ್ರ ವಿಜಯೇಂದ್ರ ಕಣಕ್ಕಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿಬಂದವಾದರೂ, ಅದು ಗಾಳಿಸುದ್ದಿಯಾಗಿ ಮಾಯವಾಯಿತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬೂಕಹಳ್ಳಿ ಬಿ.ಸಿ.ಮಂಜು 10 ಸಾವಿರ ಮತಗಳನ್ನೂ ಪಡೆಯಲಾಗದೆ ಠೇವಣಿ ಕಳೆದುಕೊಂಡಿದ್ದರು.
ಹೀಗಾಗಿ ನೆಲೆಯೇ ಇಲ್ಲದ ಕೆ.ಆರ್.ಪೇಟೆಯೊಳಗೆ ಬಿಜೆಪಿ ಕಮಲ ಅರಳಿಸುವುದುಅಷ್ಟು ಸುಲಭವಾಗಿಲ್ಲ. ಇದರ ನಡುವೆ ಹಿಂದೊಮ್ಮೆ ಕೆ.ಆರ್.ಪೇಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಎನ್.ಕೆಂಗೇಗೌಡ ಅವರು 29 ಸಾವಿರ ಮತಗಳನ್ನು ಪಡೆದಿರುವುದು ದಾಖಲೆಯಾಗಿದೆ. ಇದೀಗ ಅವರ ಮಗ ಕೆ.ಶ್ರೀನಿವಾಸ್ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡರ ಬೆಂಬಲಿಗರಾಗಿದ್ದಾರೆ. ಕೆ.ಸಿ.ನಾರಾಯಣಗೌಡರ ಚುನಾವಣಾ ಸ್ಪರ್ಧೆಗೆ ಅವಕಾಶ ಸಿಗದಿದ್ದರೆ ಕೆ.ಶ್ರೀನಿವಾಸ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ಚಿಂತಿಸುತ್ತಿದ್ದಾರೆ.
ಕೆ.ಎನ್.ಕೆಂಗೇಗೌಡರು ಕುರುಬ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಆ ಸಮುದಾಯದ ಮತಗಳ ಜೊತೆಗೆ ಹಿಂದುಳಿದ ಜನಾಂಗದ ಮತಗಳೂ ಸುಲಭವಾಗಿ ಕೈ ಸೇರಲಿವೆ ಎಂಬ ಲೆಕ್ಕಾಚಾರ ಬಿಜೆಪಿಯವರದ್ದಾಗಿದೆ. ಒಟ್ಟಾರೆ 3 ಪಕ್ಷಗಳಿಗೂ ಕೆ. ಆರ್. ಪೇಟೆ ಉಪ ಚುನಾವಣೆ ಗೆಲುವು ಅನಿವಾರ್ಯ. ಇದು ಪಕ್ಷಗಳ ರಾಜಕೀಯ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಮೂವರಲ್ಲಿ ಕ್ಷೇತ್ರದ ಮತದಾರರು ಯಾರ ಪರ ಒಲವು ತೋರಲಿದ್ದಾರೆ ಎಂಬುದು ಮಾತ್ರ ನಿಗೂಢವಾಗಿದೆ.
-ಮಂಡ್ಯ ಮಂಜುನಾಥ್