ಬೆಂಗಳೂರು: ರಾಜ್ಯದ 3 ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿವೆ. ಹೈವೋಲ್ಟೇಜ್ ಕ್ಷೇತ್ರವೆಂದೇ ಪರಿಗಣಿಸಲಾದ ಚನ್ನಪಟ್ಟಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕಗ್ಗಂಟು ಮುಂದುವರಿದಿದೆ.
ಇದನ್ನು ಮೈತ್ರಿ ಪಕ್ಷದ ವರಿಷ್ಠರು ಹೇಗೆ ಬಗೆಹರಿಸುತ್ತಾರೆಂಬುದೇ ಸದ್ಯದ ಕುತೂಹಲ.ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಜೆಡಿಎಸ್ ಅಭ್ಯರ್ಥಿಗೇ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಈ ಹಿಂದೆಯೇ ಹೇಳಿಕೆ ನೀಡಿದ್ದು, ಇದರ ಬೆನ್ನಲ್ಲೇ ವಿಪಕ್ಷ ನಾಯಕ ಅಶೋಕ್ ಅವರು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರೇ ಎನ್‌ಡಿಎ ಅಭ್ಯರ್ಥಿ ಎನ್ನುವ ಮೂಲಕ ಸಿಪಿವೈ ಪರ ಬ್ಯಾಟಿಂಗ್ ಬೀಸಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್‌ಗೆ ಸಿ.ಪಿ.ಯೋಗೇಶ್ವರ್ ಪಟ್ಟು ಹಿಡಿದಿದ್ದಾರೆ. ಸ್ಥಳೀಯ ಬಿಜೆಪಿ ವಲಯದಲ್ಲೂ ಅವರ ಪರ ಅಭಿಪ್ರಾಯಗಳು ವ್ಯಕ್ತವಾಗಿದೆ.
ಬುಧವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಯೋಗೇಶ್ವರ್, ನೂರಕ್ಕೆ ನೂರು ನಾನೇ ಎನ್‌ಡಿಎ ಅಭ್ಯರ್ಥಿ. ನಮ್ಮ ಪಕ್ಷದ ರಾಜ್ಯ ನಾಯಕರು ಕುಮಾರಸ್ವಾಮಿ ಅವರ ಜತೆ ಚರ್ಚಿಸಿ ಮೈತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಬೆನ್ನಲ್ಲೇ, ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಸಿ.ಪಿ.ಯೋಗೇಶ್ವರ್ ಸ್ಪರ್ಧೆಯ ಬಗ್ಗೆ ಕೇಳಿದ್ದೇವೆ. ಚನ್ನಪಟ್ಟಣ ಕ್ಷೇತ್ರದ ಟಿಕೆಟನ್ನು ನಮ್ಮ ಪಕ್ಷದ ಹೈಕಮಾಂಡ್ ಹಾಗೂ ಕುಮಾರಸ್ವಾಮಿಯವರು ಸೇರಿ ತೀರ್ಮಾನ ಮಾಡುತ್ತಾರೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಯೋಗೇಶ್ವರ್ ಪರ ನಿಲುವು ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಇಡೀ ಬೆಳವಣಿಗೆಗಳ ಬಗ್ಗೆ ಜೆಡಿಎಸ್ ವರಿಷ್ಠರಿಂದ ಯಾವುದೇಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ನಾಯಕರು ಚನ್ನಪಟ್ಟಣದ ಟಿಕೆಟ್ ಕಗ್ಗಂಟನ್ನು ಹೇಗೆ ಬಗೆಹರಿಸುತ್ತಾರೆ ಎಂಬುದೇ ತೀವ್ರ ಚರ್ಚೆಗೆ ಕಾರಣವಾಗಿದೆ.