Advertisement
ಕನಿಷ್ಠ 8ರಿಂದ 9 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ಕಾಂಗ್ರೆಸ್‌ನ ಲೆಕ್ಕಚಾರ ತಲೆಕೆಳಗಾಗಿರುವಂತೆ ಕಾಣುತ್ತಿದೆ. ಆದರೆ ಈಗ ಹುಣಸೂರು, ಕಾಗವಾಡ, ಅಥಣಿ, ರಾಣೆಬೆನ್ನೂರು ಬಗ್ಗೆ ಮಾತ್ರ ಆಶಾ ಭಾವನೆ ಹೊಂದಿದ್ದು, ಶಿವಾಜಿನಗರದಲ್ಲಿ ಅಚ್ಚರಿಯ ಫಲಿತಾಂಶ ಬಂದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ ಎಂಬ ವಿಶ್ವಾಸ ಇಟ್ಟುಕೊಂಡಿದೆ. ಉಳಿದ ಕಡೆ ಅಂಥ ಯಾವ ಲಕ್ಷಣಗಳೂ ಕಾಂಗ್ರೆಸ್‌ಗೆ ಸದ್ಯಕ್ಕಂತೂ ಕಾಣುತ್ತಿಲ್ಲ.
ವಿಪಕ್ಷ ನಾಯಕನ ಸ್ಥಾನಪಲ್ಲಟ, ಕೆಪಿಸಿಸಿ ಅಧ್ಯಕ್ಷರ ತಲೆದಂಡ ಚರ್ಚೆಗಳು ಮುನ್ನೆಲೆಗೆ ಬರಲಿದ್ದು, ಜತೆಗೆ ಪಕ್ಷ ಸೋತರೆ ಯಾರನ್ನು ಹೊಣೆ ಮಾಡಬೇಕು, ಗೆದ್ದರೆ ಯಶಸ್ಸಿನ ಶ್ರೇಯ ಯಾರಿಗೆ ಎಂಬ ಬಗ್ಗೆ ಈಗಾಗಲೇ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗಳು ಆರಂಭವಾಗಿದ್ದು ಫಲಿತಾಂಶ ಘೋಷಣೆಯಾದ ಬಳಿಕ ಈ ಚರ್ಚೆಗಳು ಇನ್ನಷ್ಟು ಬಿರುಸುಗೊಳ್ಳುವ ಸಾಧ್ಯತೆಗಳಿವೆ. ಮೂಲ ಮತ್ತು ವಲಸಿಗರ ಸೆಣಸಾಟ ಸಹ ಹೆಚ್ಚಾಗಲಿದೆ. ಈ ಮಧ್ಯೆ ಹೈಕಮಾಂಡ್‌ಗೆ ವರದಿ ಒಪ್ಪಿಸಲು ಪೈಪೋಟಿಯೂ ನಡೆಯಲಿದೆ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿವೆ.
Related Articles
ಉಪ ಸಮರ ಗೆಲ್ಲೋದು ನಾವೇ ಎಂದು ರಣರಂಗಕ್ಕೆ ಇಳಿದ ಕಾಂಗ್ರೆಸ್ ಚುನಾವಣ ಪ್ರಚಾರದ ಮೊದಲಾರ್ಧದಲ್ಲಿ ಅಷ್ಟೇನು ಉತ್ಸಾಹ, ಸಂಘಟಿತ ಪ್ರಯತ್ನ ನಡೆಸಿದಂತೆ ಕಂಡು ಬರಲಿಲ್ಲ. ಆದರೆ ದೇವೇಗೌಡರು ಮೈತ್ರಿ ದಾಳ ಉರುಳಿಸುತ್ತಿದ್ದಂತೆ ಸಿಎಂ ಪಟ್ಟಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ತೇಲಿ ಬರುತ್ತಿದ್ದಂತೆ ಪ್ರಚಾರ ಗರಿಗೆದರಿತು. ಪ್ರಚಾರದ ಕೊನೆಯಾರ್ಧದಲ್ಲಿ ಕಣದಲ್ಲಿ ಕಾಂಗ್ರೆಸ್‌ನ ಘಟಾನುಘಟಿಗಳು ಒಟ್ಟೊಟ್ಟಿಗೆ ಕಂಡು ಬಂದರು. ನಮಗೆ ಬಿಜೆಪಿಯಷ್ಟೇ ಜೆಡಿಎಸ್ ಸಹ ರಾಜಕೀಯವಾಗಿ ಅಷ್ಟೇ ಶತ್ರು ಎಂಬ ಸಿದ್ದರಾಮಯ್ಯ ಅವರ ಮಾತು ಮೈತ್ರಿಯ ಕನಸಿಗೆ ಭಂಗ ತಂದಿತು ಎಂಬು ಮಾತುಗಳು ಕೇಳಿ ಬರುತ್ತಿವೆ.
Advertisement
ಅಷ್ಟಕ್ಕೂ ಮೈತ್ರಿಯ ಮಾತೇ ಗೆಲ್ಲುವ ಲೆಕ್ಕಾಚಾರಕ್ಕೆ ಹಿನ್ನಡೆ ತಂದಿತು ಎನ್ನುವ ಮಾತುಗಳು ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿ ಬಂದಿವೆ. ಏಕೆಂದರೆ ಶಾಸಕರ ಅನರ್ಹತೆಯ ವಿಚಾರ ಇಟ್ಟುಕೊಂಡು ಪ್ರಚಾರ ಮಾಡಿದ್ದರೆ ಪಕ್ಷಕ್ಕೆ ಹೆಚ್ಚು ಪೂರಕವಾಗುತ್ತಿತ್ತು. ಆದರೆ ಚುನಾವಣ ಪ್ರಚಾರದ ಕೊನೆಯಾರ್ಧದಲ್ಲಿ ಕೇಳಿ ಬಂದ ಮೈತ್ರಿಯ ಮಾತುಗಳು ಲೆಕ್ಕಚಾರ “ಕೈ’ ತಪ್ಪುವಂತೆ ಮಾಡಿತು. ಇದು ಬಿಜೆಪಿಗೆ ಇನ್ನಷ್ಟು ಪೂರಕ ವಾತಾವರಣ ನಿರ್ಮಿಸಿಕೊಟ್ಟಿತು. ಜೆಡಿಎಸ್ ನಾಯಕರು ಉದ್ದೇಶಪೂರ್ವಕವಾಗಿಯೇ ಕೊನೆ ಹಂತದಲ್ಲಿ ಮೈತ್ರಿ ಮಾತುಗಳನ್ನು ತೇಲಿ ಬಿಟ್ಟರು ಎಂದು ಕಾಂಗ್ರೆಸ್ ನಾಯಕರ ವಾದವಾಗಿದೆ.
ಕೆಪಿಸಿಸಿ ಅಧ್ಯಕ್ಷರ ತಲೆದಂಡ?ಉಪ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ತಂದು ಕೊಟ್ಟರೂ ಸದ್ಯಕ್ಕೆ ವಿಪಕ್ಷ ನಾಯಕನ ಸ್ಥಾನ ಪಲ್ಲಟ ಆಗುವ ಸಾಧ್ಯತೆಗಳು ಕಡಿಮೆ. ಆದರೆ ಕೆಪಿಸಿಸಿ ಅಧ್ಯಕ್ಷರ “ತಲೆದಂಡ’ಕ್ಕೆ ಒತ್ತಡ ಹೆಚ್ಚಾಗಬಹುದು. ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನ ಸಿಗದಿದ್ದಾಗ “ನೈತಿಕ’ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜೀನಾಮೆ ಕೊಡಲು ಮುಂದಾಗಿದ್ದರು. ಆದರೆ ಬಳಿಕ ಹೈಕಮಾಂಡ್ ಸೂಚಿಸಿದರೆ ರಾಜಿನಾಮೆ ಕೊಡುತ್ತೇನೆ ಎಂದು ಉಲ್ಟಾ ಹೊಡೆದಿದ್ದರು.