Advertisement

ಮಹಾಲಿಂಗಪುರ ಪುರಸಭೆ 3ನೇ ವಾರ್ಡಿನ ಉಪಚುನಾವಣೆ: ಶಾಂತಿಯುತ ಮತದಾನ

08:53 PM Sep 03, 2021 | Team Udayavani |

ಮಹಾಲಿಂಗಪುರ: ಸ್ಥಳೀಯ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ 3ನೇ ವಾರ್ಡಿನ ಉಪಚುನಾವಣೆಯ ಮತದಾನವು ಅತ್ಯಂತ ಶಾಂತಿಯುತವಾಗಿ ಸೆ.3ರ ಶುಕ್ರವಾರ ಮುಕ್ತಾಯಗೊಂಡಿತು.

Advertisement

ಸೆ.3 ಶುಕ್ರವಾರ ಮುಂಜಾನೆಯಿಂದ ಸಂಜೆ 6ರವರೆಗೆ ಮತದಾನ ನಡೆಯಿತು. ಪಟ್ಟಣದ ಡಬಲ್ ರಸ್ತೆಯ ಶತಮಾನ ಕಂಡ ಎಂಪಿಎಸ್ ಶಾಲೆಯಲ್ಲಿನ ಎರಡು ಬೂತ್‌ಗಳಲ್ಲಿ ಮತದಾನ ನಡೆಯಿತು.

3ನೇ ವಾರ್ಡಿನ ಒಟ್ಟು 1353 ಮತದಾರರ ಪೈಕಿ ಬೂತ್ ನಂಬರ್ 4ರಲ್ಲಿ 288 ಪುರುಷ, 254 ಮಹಿಳೆ ಹಾಗೂ ಬೂತ್ ನಂಬರ್ 5ರಲ್ಲಿ ೨೮೧ ಪುರುಷ, 278 ಮಹಿಳೆಯರು ಸೇರಿದಂತೆ ಒಟ್ಟು 532 ಮಹಿಳೆಯರು, 569 ಪುರುಷರು ಸೇರಿ 1101 (81.37%) ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು.

ಮಧ್ಯಾಹ್ನದವರೆಗೆ ಬಿರುಸಿನ ಮತದಾನ :

ಮುಂಜಾನೆ 7 ರಿಂದ ಮಧ್ಯಾಹ್ನ 1‌ ಗಂಟೆವರೆಗೆ ಬಿರುಸಿನ ಮತದಾನ ನಡೆಯಿತು. ಮಧ್ಯಾಹ್ನದ ನಂತರ ಮಂದಗತಿಯಲ್ಲಿ ಸಾಗಿದ ಮತದಾನವು ಸಂಜೆ 5 ರೊಳಗೆ ಬಹುತೇಕ ಮತದಾನವು ಮುಕ್ತಾಯಗೊಂಡಿತ್ತು. 3ನೇ ವಾರ್ಡಿನ ಉಪಚುನಾವಣೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿರುವ 3 ನೇ ವಾರ್ಡಿನ ಮತದಾರರು, ಮತಗಟ್ಟೆ ಸಮೀಕ್ಷೆಯಲ್ಲಿ ಯಾವ ಅಭ್ಯರ್ಥಿ ಪರ ತಮ್ಮ ಒಲುವು ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡದೇ ಜಾಣತನ ಮೆರೆದಿದ್ದಾರೆ.

Advertisement

ಇದನ್ನೂ ಓದಿ:ಮಲ್ಪೆ-ತೊಟ್ಟಂ: ಕೈರಂಪಣಿ ಬಲೆಗೆ ಬಿತ್ತು ರಾಶಿ ರಾಶಿ ಪಾಂಪ್ರಟ್‌ ಮೀನು!

ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ :

ಶುಕ್ರವಾರ 3ನೇ ವಾರ್ಡಿನ ಉಪಚುನಾವಣೆಯು ಮುಕ್ತಾಯಗೊಳ್ಳುವ ಮೂಲಕ ಸ್ಪರ್ಧೆಯಲ್ಲಿರುವ ಮೂರು ಅಭ್ಯರ್ಥಿಗಳ ಭವಿಷ್ಯವು ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಪಕ್ಷೇತರ ಅಭ್ಯರ್ಥಿ ಸಜನಸಾಬ ಪೆಂಡಾರಿ ಅವರು ಮತಗಟ್ಟೆ ಸಂಖ್ಯೆ 5 ರಲ್ಲಿ ಮತದಾನ ಮಾಡಿದರು. ಕಾಂಗ್ರೆಸ್‌ನ ಸಾಲಿಯಾಬಾನು ಸೌದಾಗರ್ ಮತ್ತು ಜೆಡಿಎಸ್‌ನ ರಾಮು ಪಾತ್ರೋಟ ಅಭ್ಯರ್ಥಿಗಳು ಬೇರೆ ವಾರ್ಡುಗಳ ಮತದಾರರಾದ ಕಾರಣ ಮತದಾನಕ್ಕೆ ಅವಕಾಶವಿರಲಿಲ್ಲ.

ಭಾರಿ ಬಂದೋಬಸ್ತ್ :

2020ರ ಪುರಸಭೆಯ ಅಧ್ಯಕ್ಷ ಚುನಾವಣೆಯಲ್ಲಿ ಗಲಾಟೆ ನಡೆದ ಕಾರಣ, ಮುಂಜಾಗ್ರತವಾಗಿ ಈ ಉಪ ಚುನಾವಣೆಯಲ್ಲಿ ಯವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯು ಭಾರಿ ಬಂದೋಬಸ್ತ ಏರ್ಪಡಿಸಿತ್ತು. ಪಟ್ಟಣದ ಠಾಣಾಧಿಕಾರಿ ವಿಜಯ ಕಾಂಬಳೆ ಅವರು ಸ್ಥಳೀಯ ಠಾಣೆಯ ಬಹುತೇಕ ಎಲ್ಲಾ ಪೊಲೀಸರನ್ನು ಮತಗಟ್ಟೆಯ ಒಳಗೆ, ಹೊರಗೆ ಹಾಗೂ ಮತಗಟ್ಟೆಯ 100 ಮೀಟರ್ ಸುತ್ತಳತೆಯ ಪ್ರತಿಯೊಂದು ರಸ್ತೆಗಳಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

ನಾಯಕರ ಕೊನೆಕ್ಷಣದ ಕಸರತ್ತು : ಮತಗಟ್ಟೆಯ ನೂರು ಮೀಟರ್ ಹೊರಗಡೆ ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರು, ಪಕ್ಷೇತರ ಅಭ್ಯರ್ಥಿ ಬೆಂಬಲಿಗರು ಹಾಗೂ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ ಬಿಜೆಪಿ ಪಕ್ಷದ ಮುಖಂಡರು, ಪುರಸಭೆ ಸದಸ್ಯರು ಮತದಾನಕ್ಕೆ ಹೋಗುವ ಸಾರ್ವಜನಿಕರಿಗೆ ಕೈಮುಗಿದು ನಮ್ಮನ್ನು ಮರೆಯಬೇಡಿ ಎಂದು ಕೊನೆಯ ಕ್ಷಣದ ಕಸರತ್ತು ನಡೆಸಿ ಮತದಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಮತದಾರ ಯಾರಿಗೆ ಜೈ ಎಂದಿದ್ದಾನೆ ಎಂಬುದಕ್ಕೆ ಸೋಮವಾರ ಮುಂಜಾನೆವರೆಗೂ ಕಾಯಲೇಬೇಕು.

ಗೆಲುವಿನ ಲೆಕ್ಕಾಚಾರದಲ್ಲಿ ಮಗ್ನ : ಮತದಾನ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಗೆಲುವಿನ ಲೆಕ್ಕಾಚಾರದಲ್ಲಿ ಮಗ್ನರಾಗಿದ್ದರು. 3ನೇ ವಾರ್ಡಿನ ಫಲಿತಾಂಶವು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಕಾರಣ, ಆ ಗಲ್ಲಿಯಲ್ಲಿ ನಮಗೆ ಇಷ್ಟು, ಅವರಿಗೆ ಅಷ್ಟು, ಈ ಓಣಿಯಲ್ಲಿ ನಮ್ಮಗೆ ಹೆಚ್ಚು ಮತಗಳು ಬರಲಿವೆ ಎಂಬ ಹತ್ತಾರು ಲೆಕ್ಕಾಚಾರಗಳಲ್ಲಿ ಮಗ್ನರಾಗಿರುವದು ಕಂಡು ಬಂದಿತು. ನಾಯಕರು ಮತ್ತು ಸ್ಪರ್ಧಾಳುಗಳ ಲೆಕ್ಕಾಚಾರಕ್ಕಿಂತ ಮತದಾರರು ನೀಡಿದ ನಿಜವಾದ ಲೆಕ್ಕಾಚಾರವೇ ಅಂತಿಮ. ಅದಕ್ಕಾಗಿ ಈಗ ಎಲ್ಲರ ಚಿತ್ತ ಸೆ.6ರ ಫಲಿತಾಂಶದತ್ತ.

ಅಧಿಕಾರಿಗಳ ಭೇಟಿ : 3ನೇ ವಾರ್ಡಿನ ಉಪಚುನಾವಣೆಯ ಬೂತ್‌ಗಳಿಗೆ ರಬಕವಿ-ಬನಹಟ್ಟಿ ತಹಶೀಲ್ದಾರ ಸಂಜಯ ಇಂಗಳೆ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಬನಹಟ್ಟಿ ಸಿಪಿಆಯ್ ಜೆ.ಕರುಣೇಶಗೌಡ ಅವರು ಭೇಟಿ ನೀಡಿ, ಶಾಂತಿಯುತ ಮತದಾನ ನಡೆಯುವಂತೆ ಅಗತ್ಯ ಕ್ರಮಗಳನ್ನು ಜರುಗಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next