ಬೆಂಗಳೂರು: ಸಿಂದಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಎರಡೂ ಕ್ಷೇತ್ರಗಳಲ್ಲಿ 37 ಅಭ್ಯರ್ಥಿಗಳಿಂದ 57 ನಾಮಪತ್ರಗಳು ಸಲ್ಲಿಕೆಯಾಗಿವೆ.
ನಾಮಪತ್ರ ಸಲ್ಲಿಕೆಗೆ ಅ.8 ಕೊನೆ ದಿನವಾಗಿತ್ತು. ಅದರಂತೆ, ಸಿಂದಗಿಯಲ್ಲಿ ಬಿಜೆಪಿಯ ರಮೇಶ್ ಭೂಸನೂರು, ಕಾಂಗ್ರೆಸ್‌ನ ಅಶೋಕ ಮನಗೋಳಿ, ಜೆಡಿಎಸ್‌ನ ನಾಜಿಯಾ ಶಕೀಲ್ ಅಂಗಡಿ ಸೇರಿದಂತೆ ಒಟ್ಟು ಎಂಟು ಅಭ್ಯರ್ಥಿಗಳಿಂದ 12 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ, ರಾಷ್ಟ್ರೀಯ ಸಮಾಜ ಪಕ್ಷದಿಂದ ತಲಾ ಒಂದು ಹಾಗೂ ಪಕ್ಷೇತರರಿಂದ ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ.
ಅದೇ ರೀತಿ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯ ಶಿವರಾಜ್ ಸಜ್ಜನ್, ಕಾಂಗ್ರೆಸ್‌ನ ಶ್ರೀನಿವಾಸ್ ಮಾನೆ, ಜೆಡಿಎಸ್‌ನ ನಿಯಾಜ್ ಶೇಕ್ ಸೇರಿದಂತೆ ಒಟ್ಟು 29 ಅಭ್ಯರ್ಥಿಗಳಿಂದ 45 ನಾಮಪತ್ರಗಳು ಸಲ್ಲಿಕೆಯಾಗಿವೆ. ಇದರಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ 2, ಲೋಕಶಕ್ತಿ 3, ಕನ್ನಡ ದೇಶದ ಪಕ್ಷ 1, ರೈತ ಭಾರತ ಪಕ್ಷ 1 ಹಾಗೂ ಪಕ್ಷೇತರರಿಂದ 28 ನಾಮಪತ್ರಗಳು ಸಲ್ಲಿಕೆಯಾಗಿವೆ.
ಇದನ್ನೂ ಓದಿ:ಕಥಾ ಮೇನಿಯಾದಲ್ಲಿ ಕಥಾ ರತ್ನವಾದ ಸಾನ್ವಿ ಜೋಶಿ
ಸಿಂದಗಿ ಕ್ಷೇತ್ರದಲ್ಲಿ ಎಂಟು ಅಭ್ಯರ್ಥಿಗಳಿಂದ 12 ನಾಮಪತ್ರಗಳು ಸಲ್ಲಿಕೆಯಾಗಿದ್ದರೆ, ಹಾನಗಲ್ ಕ್ಷೇತ್ರದಲ್ಲಿ 29 ಅಭ್ಯರ್ಥಿಗಳಿಂದ 45 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಪೈಕಿ ಎರಡೂ ಕ್ಷೇತ್ರಗಳಲ್ಲಿ 33 ಪುರುಷರು ಹಾಗೂ ನಾಲ್ವರು ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ. 31 ಮಂದಿ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ.
ಅಕ್ಟೋಬರ್ 11ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಅ.13 ಕೊನೆ ದಿನಾಂಕವಾಗಿದೆ.