Advertisement

ಉತ್ತರ ಪ್ರದೇಶ, ಪಂಜಾಬ್‌, ಒಡಿಶಾದಲ್ಲಿ ಉಪಚುನಾವಣೆ: ಆಡಳಿತ ಪಕ್ಷಗಳಿಗೆ ಜಯ

09:51 AM May 14, 2023 | Team Udayavani |

ಹೊಸದಿಲ್ಲಿ: ಉತ್ತರ ಪ್ರದೇಶ, ಪಂಜಾಬ್‌ ಮತ್ತು ಒಡಿಶಾದಲ್ಲಿ ನಡೆದ ಉಪ ಚುನಾವಣೆಯ ಫ‌ಲಿತಾಂಶ ಘೋಷಣೆಯಾಗಿದೆ. ಉತ್ತರ ಪ್ರದೇಶದ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎರಡರಲ್ಲೂ ಆಪ್ನಾ ದಳ(ಸೋನೆಲಾಲ್‌) ಪಕ್ಷವು ಜಯಭೇರಿ ಬಾರಿಸಿದೆ.

Advertisement

ರಾಮ್‌ಪುರ ಜಿಲ್ಲೆಯ ಸೂರ್‌ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪ ಚುನಾ ವಣೆಯಲ್ಲಿ ಎನ್‌ಡಿಎ ಮಿತ್ರ ಪಕ್ಷವಾದ ಆಪ್ನಾ ದಳ(ಸೋನೆಲಾಲ್‌) ದ ಶಫೀಕ್‌ ಅಹ್ಮದ್‌ ಅನ್ಸಾರಿ ಅವರು ಸಮೀಪದ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಅನುರಾಧ ಚೌಹಾಣ್‌ ಅವರ ವಿರುದ್ಧ 8,724 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಅಹ್ಮದ್‌ ಅನ್ಸಾರಿ ಅವರು 68,630 ಮತಗಳನ್ನು ಪಡೆದರೆ, ಅನುರಾಧ ಚೌಹಾಣ್‌ ಅವರು 59,906 ಮತಗಳನ್ನು ಪಡೆದಿದ್ದಾರೆ. 15 ವರ್ಷಗಳ ಹಿಂದಿನ ಪ್ರಕರಣದಲ್ಲಿ ಮೊರಾದಾಬಾದ್‌ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಹಿನ್ನೆಲೆಯಲ್ಲಿ ಅಬ್ದುಲ್ಲಾ ಅಜಂ ಖಾನ್‌ ಅವರನ್ನು ಫೆಬ್ರವರಿಯಲ್ಲಿ ಅನರ್ಹಗೊಳಿಸಿದ ಅನಂತರ ಸೂರ್‌ ವಿಧಾನಸಭಾ ಸ್ಥಾನವು ತೆರವಾಗಿತ್ತು. ಅಬ್ದುಲ್ಲಾ ಅವರು ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್‌ ಅವರ ಪುತ್ರರಾಗಿದ್ದಾರೆ.

ಇನ್ನೊಂದೆಡೆ, ಉತ್ತರ ಪ್ರದೇಶದ ಛನ್ಬೆ ವಿಧಾನ ಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಕೀರ್ತಿ ಕೊಲ್‌ ವಿರುದ್ಧ 9,587 ಮತಗಳ ಅಂತರದಿಂದ ಅಪ್ನಾ ದಳ(ಸೋನೆಲಾಲ್‌) ಪಕ್ಷದ ರಿಂಕಿ ಕೊಲ್‌ ಜಯಗಳಿಸಿದ್ದಾರೆ. ರಿಂಕಿ ಕೊಲ್‌ ಅವರು 76,203 ಮತಗಳನ್ನು ಪಡೆದರೆ, ಕೀರ್ತಿ ಕೊಲ್‌ ಅವರು 66,616 ಮತಗಳನ್ನು ಪಡೆದಿದ್ದಾರೆ.

ಫೆಬ್ರವರಿಯಲ್ಲಿ ಅಪ್ನಾ ದಳ (ಸೋನೆಲಾಲ್‌) ಪಕ್ಷದ ಶಾಸಕ ರಾಹುಲ್‌ ಕೊಲ್‌ ಅವರ ನಿಧನ ದಿಂದಾಗಿ ಛನ್ಬೆ ವಿಧಾನಸಭಾ ಕ್ಷೇತ್ರ ತೆರವಾಗಿತ್ತು.

Advertisement

ಒಡಿಶಾ ಉಪ ಚುನಾವಣೆ: ಒಡಿಶಾದ ಜಾರ್ಸುಗುಡಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಆಡಳಿತರೂಢ ಬಿಜೆಡಿ ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಟಂಕಧರ್‌ ತ್ರಿಪಾಠಿ ವಿರುದ್ಧ 48,721 ಮತಗಳ ಅಂತರದಿಂದ ಬಿಜೆಡಿ ಪಕ್ಷದ ದೀಪಾಲಿ ದಾಸ್‌ ಅವರು ಗೆಲುವು ಸಾಧಿಸಿದ್ದಾರೆ.

ದೀಪಾಲಿ ದಾಸ್‌ ಅವರು ಒಟ್ಟಾರೆ 1,07,198 ಮತಗಳನ್ನು ಪಡೆದರೆ, ಸಮೀಪದ ಪ್ರತಿಸ್ಪರ್ಧಿ ಟಂಕಧರ್‌ ತ್ರಿಪಾಠಿ ಅವರು 58,477 ಮತಗಳನ್ನು ಪಡೆಯಲು ಮಾತ್ರ ಶಕ್ತರಾದರು. ದೀಪಾಲಿ ದಾಸ್‌ ಅವರು ಒಡಿಶಾದ ಹಿಂದಿನ ಆರೋಗ್ಯ ಸಚಿವ ನಬಾ ಕಿಶೋರ್‌ ದಾಸ್‌ ಅವರ ಪುತ್ರಿಯಾಗಿದ್ದಾರೆ. ಜನವರಿಯಲ್ಲಿ ಪೊಲೀಸ್‌ ಅಧಿಕಾರಿಯೊಬ್ಬ ಜಾರ್ಸುಗುಡಾ ಕ್ಷೇತ್ರದ ಶಾಸಕರಾಗಿದ್ದ ಕಿಶೋರ್‌ ದಾಸ್‌ ಅವರನ್ನು ಹತ್ಯೆ ಮಾಡಿದ್ದ. ಇದರಿಂದಾಗಿ ಸ್ಥಾನ ತೆರವಾಗಿತ್ತು.

ಜಲಂಧರ್‌ ಲೋಕಸಭೆ ಕ್ಷೇತ್ರ: ಪಂಜಾಬ್‌ನ ಜಲಂಧರ್‌ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ(ಆಪ್‌) ಅಭ್ಯರ್ಥಿ ಜಯಗಳಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಕರಮ್‌ಜೀತ್‌ ಕೌರ್‌ ಚೌಧರಿ ವಿರುದ್ಧ ಆಪ್‌ ಅಭ್ಯರ್ಥಿ ಸುಶೀಲ್‌ ಕುಮಾರ್‌ ರಿಂಕು 58,691 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಸುಶೀಲ್‌ ಕುಮಾರ್‌ ರಿಂಕು ಅವರು 3,02,279 ಮತಗಳನ್ನು ಪಡೆದರೆ ಸಮೀಪದ ಪ್ರತಿಸ್ಪರ್ಧಿ ಕರಮ್‌ಜೀತ್‌ ಕೌರ್‌ ಚೌಧರಿ ಅವರು 2,43,588 ಮತಗಳನ್ನು ಪಡೆದಿದ್ದಾರೆ.

ಜನವರಿಯಲ್ಲಿ ಕಾಂಗ್ರೆಸ್‌ ಸಂಸದರಾಗಿದ್ದ ಸಂತೋಕ್‌ ಸಿಂಗ್‌ ಚೌಧರಿ ಅವರ ಸಾವಿನಿಂದ ಜಲಂಧರ್‌ ಲೋಕಸಭೆ ಕ್ಷೇತ್ರ ತೆರವಾಗಿತ್ತು. ಇವರ ಪತ್ನಿ ಕರಮ್‌ಜೀತ್‌ ಕೌರ್‌ ಚೌಧರಿ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿತ್ತು.

ಯು.ಪಿ.: 16 ಪಾಲಿಕೆಗಳಲ್ಲಿ ಬಿಜೆಪಿ ಜಯಭೇರಿ
ಉತ್ತರ ಪ್ರದೇಶದ ಒಟ್ಟು 17 ನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ 16 ನಗರ ಪಾಲಿಕೆಗಳು ಬಿಜೆಪಿ ತೆಕ್ಕೆಗೆ ಸೇರಿದೆ. ಈ ಮೂಲಕ ರಾಜ್ಯದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಕಮಾಲ್‌ ಮುಂದುವರಿದಿದೆ. ಪ್ರಮುಖ ವಿಪಕ್ಷಗಳಾದ ಸಮಾಜವಾದಿ ಪಕ್ಷ ಮತ್ತು ಎಐಎಂಐಎಂ ಪಕ್ಷವನ್ನು ಬಿಜೆಪಿ ಮಕಾಡೆ ಮಲಗಿಸಿದೆ. ಬಹುತೇಕ ವಾರ್ಡ್‌ಗಳಲ್ಲಿ ಕೇಸರಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ರಾಮಜನ್ಮಭೂಮಿ ಅಯೋಧ್ಯೆ ನಗರ ಪಾಲಿಕೆಯು ಕೂಡ ಬಿಜೆಪಿ ತೆಕ್ಕೆಗೆ ಜಾರಿದೆ.

Advertisement

Udayavani is now on Telegram. Click here to join our channel and stay updated with the latest news.

Next