ಬ್ಯಾಂಕಾಕ್: ಈಗಾಗಲೇ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿರುವ ಭಾರತದ ಟಾಪ್ ಶಟ್ಲರ್ ಎಚ್.ಎಸ್. ಪ್ರಣಯ್ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಬ್ಯಾಡ್ಮಿಂಟನ್ ಫೈನಲ್ಸ್‌ನ ಅಂತಿಮ ಪಂದ್ಯದಲ್ಲಿ ದೊಡ್ಡ ಬೇಟೆ ಯಾಡಿದ್ದಾರೆ. ವಿಶ್ವದ ನಂ.1 ಆಟಗಾರ, ಒಲಿಂಪಿಕ್ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಪರಾಭವಗೊಳಿಸಿ ವೀರೋಚಿತವಾಗಿ ನಿರ್ಗಮಿಸಿದರು.
ಕೂಟದ ತೃತೀಯ ಶ್ರೇಯಾಂಕಿತ ಆಟಗಾರನಾಗಿರುವ ಎಚ್.ಎಸ್. ಪ್ರಣಯ್ “ಎ’ ವಿಭಾಗದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಡೆನ್ಮಾರ್ಕ್‌ನ ಅಗ್ರ ಶ್ರೇಯಾಂಕಿತ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ 14-21, 21-17, 21-19 ಅಂತರದ ಗೆಲುವು ಸಾಧಿಸಿದರು. 51 ನಿಮಿಷಗಳಲ್ಲಿ ಪ್ರಣಯ್‌ಗೆ ಗೆಲುವು ಒಲಿಯಿತು.
ಇದು ಅಕ್ಸೆಲ್ಸೆನ್ ವಿರುದ್ಧದ 7 ಪಂದ್ಯಗಳಲ್ಲಿ ಪ್ರಣಯ್ ಸಾಧಿಸಿದ 2ನೇ ಗೆಲುವು. ಮೊದಲ ಜಯ ಕಳೆದ ವರ್ಷದ ಇಂಡೋನೇಷ್ಯಾ ಮಾಸ್ಟರ್ ಕೂಟದಲ್ಲಿ ಬಂದಿತ್ತು.ಪ್ರಣಯ್ ವರ್ಷಾಂತ್ಯದ ಈ ಕೂಟದಲ್ಲಿ ಪಾಲ್ಗೊಂಡ ಭಾರತದ ಏಕೈಕ ಆಟಗಾರ.