Advertisement

ಬಿಡಬ್ಲ್ಯುಎಫ್ ವಿಶ್ವ ರ್‍ಯಾಂಕಿಂಗ್‌: 16ನೇ ಸ್ಥಾನಕ್ಕೆ ಎಚ್‌.ಎಸ್‌. ಪ್ರಣಯ್‌

11:21 PM Sep 13, 2022 | Team Udayavani |

ಹೊಸದಿಲ್ಲಿ: ಸತತ ಕೂಟಗಳಲ್ಲಿ ಉತ್ತಮ ನಿರ್ವಹಣೆ ನೀಡುತ್ತಿರುವ ಭಾರತದ ಶಟ್ಲರ್‌ ಎಚ್‌.ಎಸ್‌. ಪ್ರಣಯ್‌ ನೂತನ ಬಿಡಬ್ಲ್ಯುಎಫ್ ವಿಶ್ವ ರ್‍ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಮೇಲಕ್ಕೇರಿ ವಿಶ್ವದ 16ನೇ ಸ್ಥಾನ ಪಡೆದಿದ್ದಾರೆ.

Advertisement

ವಿಶ್ವ ಚಾಂಪಿಯನ್‌ಶಿಪ್‌ ಮತ್ತು ಜಪಾನ್‌ ಓಪನ್‌ ಸೂಪರ್‌ 750 ಕೂಟಗಳಲ್ಲಿ ಕ್ವಾರ್ಟರ್‌ಫೈನಲಿಗೇರಿದ ಸಾಧನೆ ಮಾಡಿದ್ದ ಪ್ರಣಯ್‌ ಒಟ್ಟಾರೆ 33 ಕೂಟಗಳಲ್ಲಿ ಭಾಗವಹಿಸಿದ್ದು 64,330 ಅಂಕಗಳನ್ನು ಹೊಂದಿದ್ದಾರೆ. 30ರ ಹರೆಯದ ಪ್ರಣಯ್‌ ರೇಸ್‌ ಟು ಗ್ವಾಂಗ್‌ಝೂನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಅಗ್ರ ಆಟಗಾರರಾಗಿ ಕಾಣಿಸಿಕೊಂಡಿದ್ದರು. ಇದು ವರ್ಷಾಂತ್ಯದಲ್ಲಿ ನಡೆಯುವ ಬಿಡಬ್ಲ್ಯುಎಫ್ ವಿಶ್ವ ಟೂರ್‌ ಫೈನಲಿಗೆ ಅರ್ಹತೆ ಗಳಿಸುವವರನ್ನು ನಿರ್ಧರಿಸುತ್ತದೆ.

ಭಾರತದ ಇನ್ನೋರ್ವ ಆಟಗಾರ ಕಿದಂಬಿ ಶ್ರೀಕಾಂತ್‌ ಎರಡು ಸ್ಥಾನ ಮೇಲಕ್ಕೇರಿದ್ದು 12ನೇ ಸ್ಥಾನ ಪಡೆದಿದ್ದಾರೆ. ಲಕ್ಷ್ಯ ಸೇನ್‌ ವಿಶ್ವದ 9ನೇ ಸ್ಥಾನದಲ್ಲಿದ್ದಾರೆ. ಅವರು ಉನ್ನತ ಸ್ಥಾನದಲ್ಲಿರುವ ಭಾರತೀಯ ಪುರುಷ ಆಟಗಾರರಾಗಿ ಮುಂದುವರಿದಿದ್ದಾರೆ.

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದ ಪುರುಷರ ಡಬಲ್ಸ್‌ನಲ್ಲಿ ಚಿರಾಗ್‌ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಎಂಟನೇ ಸ್ಥಾನದಲ್ಲಿ ಉಳಿದಿದ್ದಾರೆ. ವನಿತೆಯರ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ ಮತ್ತು ಎನ್‌. ಸಿಕ್ಕಿ ರೆಡ್ಡಿ 28ನೇ ಸ್ಥಾನಕ್ಕೆ ಜಾರಿದ್ದಾರೆ. ಮಿಕ್ಸೆಡ್‌ ಡಬಲ್ಸ್‌ನಲ್ಲಿ ತನಿಷಾ ಕ್ರಾಸ್ತೊ ಮತ್ತು ಇಶಾನ್‌ ಭಟ್ನಾಗರ್‌ ಜೀವನಶ್ರೇಷ್ಠ 33ನೇ ಸ್ಥಾನಕ್ಕೇರಿದ್ದಾರೆ.

ಸಿಂಧು 7ನೇ ಸ್ಥಾನ
ಗಾಯದಿಂದಾಗಿ ವಿಶ್ವ ಚಾಂಪಿಯನ್‌ಶಿಪ್‌ ಮತ್ತು ಜಪಾನ್‌ ಓಪನ್‌ನಿಂದ ಹಿಂದೆ ಸರಿದಿದ್ದ ಪಿ.ವಿ. ಸಿಂಧು ಏಳನೇ ಸ್ಥಾನಕ್ಕೇರಿದ್ದಾರೆ. ಮೂರು ಸ್ಥಾನ ಉತ್ತಮಪಡಿಸಿಕೊಂಡ ಸೈನಾ ನೆಹ್ವಾಲ್‌ ಅಗ್ರ 30ರೊಳಗಿನ ಸ್ಥಾನ ಪಡೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next