ಮೈಸೂರು: ನಗರದೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಹಬ್ಬದ ಮುನ್ನಾ ದಿನವಾದ ಶನಿವಾರ ನಗರದ ಮಾರುಕಟ್ಟೆಗಳಲ್ಲಿ ಹೂವು-ಹಣ್ಣು ಸೇರಿದಂತೆ ಹಬ್ಬಕ್ಕೆ ಅಗತ್ಯವಿರುವ ಪೂಜಾ ಸಾಮಗ್ರಿಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು.
ಖರೀದಿ ಜೋರು: ಹಿಂದೂ ಸಂಪ್ರದಾಯದಲ್ಲಿ ಯುಗಾದಿ ಹಬ್ಬಕ್ಕೆ ಅತ್ಯಂತ ಮಹತ್ವವಿದ್ದು, ಹೊಸ ಸಂವತ್ಸರದ ಆರಂಭಕ್ಕೆ ಮುನ್ನುಡಿ ಬರೆಯುವ ಯುಗಾದಿ ಹಬ್ಬವನ್ನು ಅನೇಕರು ಹೊಸ ವರ್ಷದ ಆಗಮನವೆಂದು ಸಂಭ್ರಮದಿಂದ ಆಚರಿಸುತ್ತಾರೆ.
ಹೀಗಾಗಿ ನಗರದ ಜನತೆ ಹೊಸ ವರ್ಷಕ್ಕೆ ಮುನ್ನುಡಿ ಬರೆಯಲಿರುವ ಯುಗಾದಿ ಸಂಭ್ರಮಕ್ಕಾಗಿ ಸಕಲ ರೀತಿಯಲ್ಲೂ ಸಜಾjಗಿದ್ದಾರೆ. ಪ್ರತಿ ಹಬ್ಬಗಳಂತೆ ಈ ಬಾರಿಯೂ ಅಗತ್ಯ ವಸ್ತುಗಳು ಬೆಲೆ ಗಗನಕ್ಕೇರಿದ್ದರಿಂದಾಗಿ ಗ್ರಾಹಕರು ಕೈಸುಟ್ಟುಕೊಳ್ಳುವಂತಾಯಿತು. ಬೆಲೆ ಏರಿಕೆ ನಡುವೆಯೂ ಹೂವು-ಹಣ್ಣು ಸೇರಿದಂತೆ ಪೂಜಾ ಸಾಮಾಗ್ರಿಗಳನ್ನು ಖರೀದಿಸಿದರು.
ಬೆಲೆ ಗಗನಕ್ಕೆ: ಶುಕ್ರವಾರವಷ್ಟೇ 40 ರೂ.ಗೆ ಮಾರಾಟವಾಗುತ್ತಿದ್ದ ಒಂದು ಮಾರು ಸೇವಂತಿಗೆ ಹೂವಿಗೆ ಶನಿವಾರ 80 ರೂ, ನಿಗದಿ ಮಾಡಲಾಗಿತ್ತು. ಇದಲ್ಲದೆ ಮಲ್ಲಿಗೆ, ಕಾಕಡ, ಚೆಂಡು ಹೂವು ಸೇರಿದಂತೆ ವಿವಿಧ ಬಣ್ಣಗಳ ಅಲಂಕಾರಿಕ ಹೂವುಗಳ ಬೆಲೆಯೂ ದುಪ್ಪಟ್ಟಾಗಿತ್ತು. ಇದರೊಂದಿಗೆ ಪೂಜೆಗೆ ಬಳಸುವ ಬಾಳೆಹಣ್ಣು, ಮಾವಿನ ಸೊಪ್ಪು, ಬೇವಿನ ಸೊಪ್ಪಿನ ಒಂದು ಕಂತೆಗೆ 20 ರೂ.ಗೆ ಮಾರಾಟ ಮಾಡಲಾಯಿತು.
ಹಬ್ಬದ ಹಿನ್ನೆಲೆಯಲ್ಲಿ ನಗರದ ದೇವರಾಜ ಮಾರುಕಟ್ಟೆ, ಕೆ.ಆರ್.ಮಾರುಕಟ್ಟೆ, ವಾಣಿವಿಲಾಸ ಮಾರುಕಟ್ಟೆ, ಎಂ.ಜಿ.ರಸ್ತೆ, ಧನ್ವಂತ್ರಿ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಜನದಟ್ಟಣೆ ಜೋರಾಗಿತ್ತು. ಒಂದೆಡೆ ಪೂಜಾ ಸಾಮಾಗ್ರಿ ಖರೀದಿಗೆ ಮಾರುಕಟ್ಟೆಗಲ್ಲಿ ಜನರು ಮುಗಿಬಿದ್ದರೆ, ಮತ್ತೂಂದೆಡೆ ಹೊಸ ಬಟ್ಟೆ ಖರೀದಿಗಾಗಿ ಅನೇಕರು ಬಟ್ಟೆ ಅಂಗಡಿಗಳತ್ತ ಮುಖ ಮಾಡಿದ್ದರು.
ನಗರದಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಯುಗಾದಿ ಹಬ್ಬದ ವ್ಯಾಪಾರಕ್ಕೆ ಸ್ವಲ್ಪ$ಮಟ್ಟಿಗೆ ಅಡ್ಡಿಪಡಿಸಿತು. ಮೂರು ದಿನಗಳಿಂದ ಸಂಜೆ ವೇಳೆ ಮೋಡ ಕವಿದ ವಾತಾವರಣದ ಜತೆಗೆ ಕೆಲವು ಕಡೆಗಳಲ್ಲಿ ಮಳೆಯಾಗುತ್ತಿದ್ದು, ಮಳೆಯ ಭೀತಿಯಿಂದಾಗಿ ಬಹುತೇಕ ಮಂದಿ ಶನಿವಾರ ಮಧ್ಯಾಹ್ನದ ವೇಳೆಗೆ ಮಾರುಕಟ್ಟೆಗಳಿಗೆ ತೆರಳಿ, ಹಬ್ಬಕ್ಕೆ ಅಗತ್ಯವಿರುವ ಹೂವು-ಹಣ್ಣು ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿ ಮಾಡಿದರು. ಇದರಿಂದಾಗಿ ಶನಿವಾರ ಸಂಜೆ ಬಳಿಕ ನಗರದ ಮಾರುಕಟ್ಟೆಗಳಲ್ಲಿ ನಿರೀಕ್ಷಿತ ವ್ಯಾಪಾರ-ವಹಿವಾಟು ನಡೆಯಲಿಲ್ಲ.