ಸಾಗರ: ಎಪಿಎಂಸಿಯಲ್ಲಿ ವ್ಯವಹರಿಸುತ್ತಿರುವ ಅಡಕೆ ಖರೀದಿದಾರರ ಪರವಾನಿಗೆ ರದ್ದುಪಡಿಸಲು ಕೃಷಿ ಸಚಿವರು ಹೊರಡಿಸಿರುವ ಆದೇಶವನ್ನು ಖಂಡಿಸಿ, ತಕ್ಷಣ ಸುತ್ತೋಲೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಗುರುವಾರ ಅಡಕೆ ವರ್ತಕರ ಸಂಘದಿಂದ ಎಪಿಎಂಸಿ ಕಾರ್ಯದರ್ಶಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಡಕೆ ಚೇಂಬರ್ ರಾಜ್ಯ ಉಪಾಧ್ಯಕ್ಷ ಅಶ್ವಿನಿಕುಮಾರ್, ಎಪಿಎಂಸಿಯಿಂದ ಕೃಷಿ ಮಾರುಕಟ್ಟೆ ಸಚಿವರ ಸೂಚನೆ ಮೇರೆಗೆ ಈಚೆಗೆ ಸಾಗರ ಎಪಿಎಂಸಿಯ ಸುಮಾರು 370 ವರ್ತಕರಲ್ಲಿ 100 ಜನರಿಗೆ, ನೀವು ಸರಿಯಾಗಿ ವಹಿವಾಟು ನಡೆಸುತ್ತಿಲ್ಲ. ನಿಮ್ಮ ಪರವಾನಿಗೆಯನ್ನು ಏಕೆ ವಜಾ ಮಾಡಬಾರದು ಎಂದು ನೋಟಿಸ್ ಜಾರಿಗೊಳಿಸಲಾಗಿದೆ. ಸಾಗರ ಎಪಿಎಂಸಿಯಲ್ಲಿ 100 ಕ್ಕೂ ಹೆಚ್ಚು ವರ್ತಕರಿಗೆ ನೊಟೀಸ್ ನೀಡಿರುವುದು ಖಂಡನೀಯ. ವಹಿವಾಟು ನಡೆಸುವುದು ನಮ್ಮ ಮೂಲಭೂತ ಹಕ್ಕು.
ನಾವು ಪರವಾನಿಗೆ ಪಡೆಯುವಾಗ ಹಣ ಕಟ್ಟಿ, ಬ್ಯಾಂಕ್ ಗ್ಯಾರಂಟಿ ಕೊಟ್ಟಿರುತ್ತೇವೆ. ಎಪಿಎಂಸಿಯಿಂದ 10ವರ್ಷಗಳ ಅವಧಿಯ ಲೈಸೆನ್ಸ್ ಕೊಡಲಾಗಿದೆ. ಇದೊಂದು ರೀತಿಯಲ್ಲಿ ಬೈಕ್ ಚಾಲಕನ ಡ್ರೈವಿಂಗ್ ಲೈಸೆನ್ಸ್ ಇದ್ದ ಹಾಗೆ. ಡ್ರೈವಿಂಗ್ ಮಾಡುವುದು ಬಿಡುವುದು ಅವನ ವಿವೇಚನೆಗೆ ಬಿಟ್ಟದ್ದು. ಹಾಗೆಯೇ ಟೆಂಡರ್‌ನಲ್ಲಿ ಭಾಗವಹಿಸುವುದು ಬಿಡುವುದು ವರ್ತಕರ ಹಕ್ಕು. ಸರ್ಕಾರಕ್ಕೆ ಆದಾಯ ಸಂಗ್ರಹ ಆಗಬೇಕು ಎನ್ನುವ ನಿಟ್ಟಿನಲ್ಲಿ ವರ್ತಕರು ವಹಿವಾಟು ಕಡ್ಡಾಯವಾಗಿ ನಡೆಸಬೇಕು ಎಂದು ನೋಟಿಸ್ ಮೂಲಕ ಹೇರಿಕೆ ಮಾಡುವ ಕ್ರಮವನ್ನು ಸಂಘ ತೀವ್ರವಾಗಿ ಖಂಡಿಸುತ್ತದೆ. ತಕ್ಷಣ ವರ್ತಕರಿಗೆ ನೀಡಿರುವ ನೋಟಿಸ್ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: KVG ಎಂ.ಎಸ್ ರಾಮಕೃಷ್ಣ ಕೊಲೆ ಪ್ರಕರಣ: ಡಾ| ರೇಣುಕಾ ಪ್ರಸಾದ್ ಗೆ ಜೀವಾವಧಿ ಶಿಕ್ಷೆ
ಸಂಘದ ಅಧ್ಯಕ್ಷ ಕೆ.ಬಸವರಾಜ್ ಮಾತನಾಡಿ, ಸಾಗರ ಎಪಿಎಂಸಿಯಲ್ಲಿ ವರ್ತಕರಿಗೆ ಲೈಸೆನ್ಸ್ ರದ್ದುಗೊಳಿಸುವ ನಿಟ್ಟಿನಲ್ಲಿ ನೀಡಿರುವ ನೋಟಿಸ್ ಅವೈಜ್ಞಾನಿಕವಾಗಿದೆ. ಕೆಲವು ವರ್ತಕರು ಕೊರೊನಾ ಸಂದರ್ಭದಲ್ಲಿ ಅಡಕೆ ವಹಿವಾಟು ನಡೆಸಲು ಆಗಲಿಲ್ಲ. ಆದರೆ ವರ್ತಕರು ಪ್ರಾಂಗಣದ ಜೊತೆ ನಿರಂತರ ಸಂಪರ್ಕ ಇರಿಸಿ ಕೊಂಡಿದ್ದಾರೆ. ವರ್ತಕರು ವ್ಯಾಪಾರ ಮಾಡಿಲ್ಲ ಎನ್ನುವುದನ್ನು ಬಿಟ್ಟರೆ ಅವ್ಯವಹಾರ ನಡೆಸಿಲ್ಲ. ಇದನ್ನೇ ಆಧಾರವಾಗಿರಿಸಿಕೊಂಡು ಲೈಸೆನ್ಸ್ ರದ್ದು ಮಾಡಲು ಮುಂದಾಗಿರುವ ಕ್ರಮ ಖಂಡನೀಯ ಎಂದರು.
ಎಪಿಎಂಸಿ ಮಾಜಿ ನಿರ್ದೇಶಕ ವೆಂಕಟೇಶ್ ಮಾತನಾಡಿ, ಹಿಂದೆ ಸಹ ಇದೇ ರೀತಿ ನೋಟಿಸ್ ಜಾರಿಗೊಳಿಸಲಾಗಿತ್ತು. ಆಗ ಎಪಿಎಂಸಿ ಅಧ್ಯಕ್ಷರಿಗೆ ಮನವಿ ಮಾಡಿ ನೋಟಿಸ್ ಹಿಂದಕ್ಕೆ ಪಡೆಯುವಂತೆ ಮಾಡಲು ಯಶಸ್ವಿಯಾಗಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಹೇರಿಕೆ ಕ್ರಮ ಸರಿಯಲ್ಲ. ಇದು ಮಾರ್ಕೇಟ್ ಮತ್ತು ರೈತರ ಮೇಲೆ ಪರಿಣಾಮ ಬೀರುತ್ತದೆ. ಇದರ ಜೊತೆಗೆ ಮ್ಯಾಮ್ಕೋಸ್ ದಲ್ಲಾಳಿ ಆಚರಣೆ ಮಾಡುವಾಗ ಕಮೀಷನ್‌ನಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಹಿಂದೆ ಯಡಿಯೂರಪ್ಪನವರು, ಸಂಸದರು ಮ್ಯಾಮ್ಕೋಸ್‌ಗೆ ತಾರತಮ್ಯ ನೀತಿ ಸರಿಪಡಿಸಲು ಮನವಿ ಮಾಡಲಾಗಿತ್ತು. ಈತನಕ ಸರಿಪಡಿಸಿಲ್ಲ. ಮ್ಯಾಮ್ಕೋಸ್ ತಕ್ಷಣ ತನ್ನ ನೀತಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಹೇಳಿದರು.
ಅಡಕೆ ವರ್ತಕರ ಸಂಘದ ಅಮಿತ್ ಹೆಗಡೆ, ಕೆ.ಎನ್.ನಿರಂಜನ, ಕೆ.ಸಿ.ಸುರೇಶ್, ಶಶಿಧರ್ ಎಂ.ಎಸ್., ಸುಂದರ ಸಿಂಗ್, ಕುಮಾರ್, ಹನೀಫ್ ಕುಂಜಾಲಿ, ಮಂಜಣ್ಣ, ಬಿ.ಎಚ್.ಲಿಂಗರಾಜ್, ಎಸ್.ಎಚ್.ಸೊರಟೂರ, ರಶೀದ್, ವಿನಾಯಕ ಇನ್ನಿತರರು ಹಾಜರಿದ್ದರು.