ಗಂಗಾವತಿ: ಹಂಪಿ, ಆನೆಗೊಂದಿ ಪ್ರದೇಶಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿವೆ. ಇದರಿಂದ ಈ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ 10 ವರ್ಷಗಳಿಂದ ಹೆಚ್ಚಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಉಳಿದುಕೊಳ್ಳುವ ಮತ್ತು ಊಟ, ವಸತಿ ಕಲ್ಪಿಸಲು ಹಲವು ಉದ್ಯಮಿಗಳು ಈಗಾಗಲೇ ಅಂಜನಾದ್ರಿ ಸುತ್ತಲಿನ ಪ್ರದೇಶದಲ್ಲಿ ಭೂಮಿ ಖರೀದಿ ಮಾಡಿದ್ದು, ಕೃಷಿಯೇತರ ಚಟುವಟಿಕೆ ಮಾಡಲು ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಎನ್‌ಒಸಿ ಪಡೆದು ಭೂ ಪರಿವರ್ತಿಸಲು ಜಿಲ್ಲಾಧಿಕಾರಿ ಕಚೇರಿಗೆ ಈಗಾಗಲೇ ಹಲವರು ಅರ್ಜಿ ಸಲ್ಲಿಸಿದ್ದಾರೆ.
ಕಿಷ್ಕಿಂದಾ ಅಂಜನಾದ್ರಿ ಪ್ರದೇಶ ಏಳುಗುಡ್ಡ, ಫಲವತ್ತಾದ ಭೂಮಿಯಿಂದ ಕೂಡಿದೆ. ಇಲ್ಲಿ ಜೀವ ವೈವಿಧ್ಯವಿದ್ದು ಪ್ರಮುಖವಾಗಿ ಬಾಳೆ, ಭತ್ತ ಬೆಳೆಯಲಾಗುತ್ತದೆ. ವರ್ಷದ 365 ದಿನವೂ ಇಲ್ಲಿ ನೀರಿನ ಸೌಲಭ್ಯವಿರುವುದರಿಂದ ಈ ಪ್ರದೇಶ ಹಚ್ಚಹಸಿರಾಗಿತ್ತದೆ. ಇಲ್ಲಿಯ ಪ್ರಕೃತಿ ಸೌಂದರ್ಯ ಸವಿಯಲು ದೇಶ, ವಿದೇಶದ ಪ್ರವಾಸಿಗರು ಆಗಮಿಸುತ್ತಾರೆ. ಇವರೆಲ್ಲ ವಿರೂಪಾಪೂರಗಡ್ಡಿಯ ರೆಸಾರ್ಟ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದರು.
ಇದೀಗ ರೆಸಾರ್ಟ್‌ಗಳನ್ನು ಸಂಪೂರ್ಣವಾಗಿ ತೆರವು ಮಾಡಿರುವುದರಿಂದ ಅಂಜನಾದ್ರಿ ಬೆಟ್ಟದ ಸುತ್ತಲಿರುವ ಭೂಮಿಯ ಬೆಲೆ ಗಗನಕ್ಕೇರಿದೆ. ಬಳ್ಳಾರಿ, ಹುಬ್ಬಳ್ಳಿ, ಬೆಂಗಳೂರು, ಗಂಗಾವತಿ, ಸಿಂಧನೂರು, ಲಿಂಗಸುಗೂರು ಸೇರಿದಂತೆ ಪ್ರಮುಖ ನಗರಗಳಪ್ರಭಾವಿ ಉದ್ಯಮಿಗಳು, ರಾಜಕೀಯ ನಾಯಕರ ಕಣ್ಣು ಆನೆಗೊಂದಿ ಸುತ್ತಲಿನ ಭೂಮಿಯ ಮೇಲೆ ಬಿದಿದ್ದೆ. ಈಗಾಗಲೇ ಒಂದು ಎಕರೆ ಬೆಲೆ 50 ಲಕ್ಷ (ಸರಕಾರದ ಮೌಲ್ಯ ಕಡಿಮೆ ಇದೆ)ರೂ. ಇದೆ. ಹನುಮನಹಳ್ಳಿ, ಆನೆಗೊಂದಿ, ರಂಗಾಪೂರಜಂಗ್ಲಿ, ಸಾಣಾಪೂರ ತಿರುಮಲಾಪೂರ ಗ್ರಾಮಗಳಲ್ಲಿ ಭೂ ಖರೀದಿ ವ್ಯಾಪಕವಾಗಿದ್ದು, ಭೂಮಿ ಖರೀದಿಸಿ ಕೃಷಿಯೇತರ ಭೂ ಪರಿವರ್ತನೆ ಕಾರ್ಯ ನಡೆಯುತ್ತಿದೆ. ಇಲ್ಲಿ ಒಂದು ಎರಡು ಎಕರೆ ಭೂಮಿ ಇರುವ ಭೂ ಮಾಲೀಕರು 35ರಿಂದ 50 ಲಕ್ಷ ರೂ.ಗಳಿಗೆ ಮಾರಾಟ ಮಾಡಿ ಬೇರೆಡೆ ಕಡಿಮೆ ದರದಲ್ಲಿ ಭೂಮಿ ಖರೀದಿ ಮಾಡುತ್ತಿದ್ದಾರೆ.
ವಾಣಿಜ್ಯ ಸಂಕೀರ್ಣ ಸರಿಯೇ? : ವಿಶ್ವಪಾರಂಪರಿಕ (ಯುನೆಸ್ಕೋ)ಪಟ್ಟಿಯಲ್ಲಿರುವ ಹಂಪಿ ಸುತ್ತಲಿನ ಪ್ರದೇಶದಲ್ಲಿ ಯಾವುದೇ ಅನಧಿಕೃತ ಚಟುವಟಿಕೆ ನಡೆಯದಂತೆ ತಡೆಯಲು ಹಂಪಿ ಅಭಿವೃದ್ಧಿ ಪ್ರಾಧಿ ಕಾರ ರಚನೆ ಮಾಡಲಾಗಿದೆ. ನೂತನ ಕಟ್ಟಡ ಸೇರಿ ಯಾವುದೇ ಕಾಮಗಾರಿ ನಡೆಯಬೇಕಾದರೂ ಪ್ರಾಧಿಕಾರದ ಎನ್‌ಒಸಿ ಪಡೆಯುವುದು ಕಡ್ಡಾಯವಾಗಿದೆ. ವಿರೂಪಾಪೂರಗಡ್ಡಿಯಲ್ಲಿ ಅನಧಿಕೃತ ಕಟ್ಟಡಗಳನ್ನು ಸುಪ್ರೀಂಕೋರ್ಟ್ ಆದೇಶದ ಅನ್ವಯ ಪ್ರಾಧಿಕಾರ ತೆರವುಗೊಳಿಸಿದೆ. ಈ ಮಧ್ಯೆ ಪವಿತ್ರ ಕ್ಷೇತ್ರ ಅಂಜನಾದ್ರಿ ಬೆಟ್ಟದ ಸುತ್ತಲೂ ಉದ್ಯಮಿಗಳು ಭೂಮಿ ಎನ್‌ಎ ಮಾಡಿಸಲು ಪ್ರಾಧಿಕಾರ ಎನ್‌ಒಸಿ ಕೊಡುತ್ತಿರುವುದು ಎಷ್ಟು ಸರಿ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಒಂದು ಕಡೆ ಅನೈತಿಕ ಚಟುವಟಕೆ ತಡೆಯಲು ಪ್ರಾ ಧಿಕಾರ ಕ್ರಮ ಕೈಗೊಳ್ಳುತ್ತಿದೆ. ಇನ್ನೊಂದೆಡೆ ಭೂಪರಿವರ್ತನೆ ಮಾಡಲು ಎನ್‌ಒಸಿ ಕೊಡುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ.
ಅಧಿಕ ಲಾಭದ ನಿರೀಕ್ಷೆ :ಅಂಜನಾದ್ರಿ ಬೆಟ್ಟದಲ್ಲಿ ಮೂಲಸೌಕರ್ಯ ಕಲ್ಪಿಸಲು ಸರಕಾರ 20 ಕೋಟಿ ರೂ. ಮೀಸಲಿಟ್ಟಿದ್ದು ಅಂಜನಾದ್ರಿ ಬೆಟ್ಟದ ಸುತ್ತಲಿರುವ ಸುಮಾರು 100 ಎಕರೆ ಭೂಮಿಯನ್ನು ಸ್ವಾ ಧೀನ ಮಾಡಿಕೊಳ್ಳಲು ಜಿಲ್ಲಾಡಳಿತ ಯೋಜಿಸಿದೆ ಎನ್ನಲಾಗುತ್ತಿದೆ. ಇದರಿಂದ ಅಂಜನಾದ್ರಿ ಸುತ್ತಲಿರುವವರು ಭೂಮಿ ಮಾರಾಟಕ್ಕೆ ಮುಂದೆ ಬಂದಿದ್ದಾರೆ. ಸರಕಾರ ಭೂಸ್ವಾಧಿಧೀನ ಮಾಡಿಕೊಂಡರೆ ಕಡಿಮೆ ಬೆಲೆ ನಿಗದಿ ಮಾಡುತ್ತದೆ. ಉದ್ಯಮಿಗಳಿಗೆ ಭೂಮಿ ಮಾರಾಟಮಾಡುವ ಮೂಲಕ ಅಧಿಕ ಲಾಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಅಂಜನಾದ್ರಿ ಬೆಟ್ಟ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಇಲ್ಲಿಯ ಭೂಮಿಯ ಬೆಲೆಯೂ ಹೆಚ್ಚಾಗುತ್ತಿದೆ ಸ್ಥಳೀಯೇತರರು ಈ ಭಾಗದಲ್ಲಿ ಭೂಮಿ ಖರೀದಿ ಮಾಡುತ್ತಿರುವ ಬಗ್ಗೆ ಮಾಹಿತಿ ಇದ್ದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಹಲವು ಷರತ್ತುಗಳೊಂದಿಗೆ ಎನ್‌ಒಸಿ ಪಡೆದು ಭೂಪರಿವರ್ತನೆಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ನಿಯಮಾನುಸಾರ ಭೂಪರಿವರ್ತನೆಯಾಗುತ್ತದೆ. –
ಎಲ್.ಡಿ. ಚಂದ್ರಕಾಂತ, ತಹಶೀಲ್ದಾರ್
–ಕೆ.ನಿಂಗಜ್ಜ