ರಾಯಚೂರು: ಸೂಕ್ತ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳ ಮೂಲಕ ರೈತರ ಧಾನ್ಯ ಖರೀದಿಸಬೇಕು ಎಂದು ಆಗ್ರಹಿಸಿ ಸ್ವಾಭಿಮಾನಿ ರೈತ ಸೌಹಾರ್ದ ಸಹಕಾರಿ ಸಂಘದ ಸದಸ್ಯರು ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಶುಕ್ರವಾರ ಧರಣಿ ನಡೆಸಿದರು. ಈ ಕುರಿತು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಈ ವರ್ಷ ರಾಜ್ಯದಲ್ಲಿ ಭೀಕರ ಬರ ಆವರಿಸಿದೆ. ಅಷ್ಟೋ ಇಷ್ಟೊ ಬೆಳೆ ಕೈಗೆ ಬಂದಿದ್ದು, ಸೂಕ್ತ ಬೆಲೆ ಸಿಗುತ್ತಿಲ್ಲ. ಹೀಗಾಗಿ ಸರ್ಕಾರವೇ ಸೂಕ್ತ ಬೆಂಬಲ ಬೆಂಬಲ ಬೆಲೆ ನಿಗದಿ ಮಾಡುವುದಲ್ಲದೇ ಖರೀದಿ ಕೇಂದ್ರಗಳ ಮೂಲಕವೇ ಖರೀದಿಸಬೇಕು
ಎಂದು ಒತ್ತಾಯಿಸಿದರು. ರೈತರು ಸಾಲ ಮಾಡಿಕೊಂಡಿದ್ದಾರೆ.
ಮುಂಗಾರು ಹಿಂಗಾರು ಕೈಕೊಟ್ಟಿದ್ದರಿಂದ ಸಂಪೂರ್ಣ ನಷ್ಟದಲ್ಲಿದ್ದಾರೆ. ಇಂಥ ವೇಳೆ ಕೈಗೆಟುಕಿದ ಅಲ್ಪಸ್ವಲ್ಪ ಬೆಳೆಗೆ ಸೂಕ್ತ ಬೆಲೆ ಸಿಗಬೇಕಿದೆ. ಶೇಂಗಾ, ಜೋಳ, ಭತ್ತ, ಸಜ್ಜೆಗೆ ಬೆಂಬಲ ಬೆಲೆ ನೀಡುತ್ತಿಲ್ಲ. ಪ್ರತಿ ರೈತರಿಂದ 20 ಕ್ವಿಂಟಲ್‌ವರೆಗೆ ಕ್ವಿಂಟಲ್‌ಗೆ 6 ಸಾವಿರ ರೂ. ಖರೀದಿಸಲಾಗಿತ್ತು. ಆದರೆ, ಈಗ ಬರ ಇದ್ದರೂ 2ನೇ ಹಂತದಲ್ಲಿ ಕೇವಲ 10 ಕ್ವಿಂಟಲ್ ಖರೀದಿಗೆ ಮುಂದಾಗಿರುವುದು ಖಂಡನೀಯ ದೂರಿದರು.
ಸಕಾಲಕ್ಕೆ ತೊಗರಿ ಖರೀದಿ ಕೇಂದ್ರ ಕಾರ್ಯಾರಂಭಿಸದ ಕಾರಣ ರೈತರು ಸಿಕ್ಕ ಬೆಳೆಗೆ ಮಾರಾಟ ಮಾಡಿಕೊಂಡಿದ್ದಾರೆ. ಎಲ್ಲ ಬೆಳೆಗಳಿಗೂ ಖರೀದಿ ಕೇಂದ್ರ ಆರಂಭಿಸಬೇಕು. ಆ ಮೂಲಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು. ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ನಿವಾರಿಸಬೇಕು. ಖಾತ್ರಿಯಡಿ ಸಕಾಲಕ್ಕೆ ಕೂಲಿ ಪಾವತಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಸಂಘದ ಸದಸ್ಯರಾದ ಶಿವರಾಮರೆಡ್ಡಿ, ಕೃಷ್ಣಪ್ರಸಾದ, ಮಲ್ಲೇಶ ಬೊಮ್ಮನಾಳ, ಗುರುರಾಜ, ವೆಂಕಟೇಶ ಮಂದಕಲ್, ರಾಘವೇಂದ್ರ, ಹುಸೇನಪ್ಪ ಇದ್ದರು.