Advertisement

ಅನುದಾನ ಲ್ಯಾಪ್ಸ್‌ ಆದ್ರೆ ಅಧಿಕಾರಿಗಳೇ ಹೊಣೆ

03:06 PM Feb 14, 2017 | Team Udayavani |

ಕಲಬುರಗಿ: ವಿವಿಧ ಇಲಾಖೆಗಳಿಗೆ ನಿಗದಿಯಾಗಿರುವ ಅನುದಾನ ಮಾರ್ಚ್‌ದೊಳಗೆ ಬಳಕೆ ಮಾಡದಿದ್ದರೆ ಹಾಗೂ ಕಾಮಗಾರಿಗಳಲ್ಲಿ ಕಳಪೆ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

Advertisement

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾಮಗಾರಿಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಇಷ್ಟು ದಿನ ಸಬೂಬು ಹೇಳಿದ್ದನ್ನು ಕೇಳಲಾಗಿದೆ. ಆದರೆ ಇನ್ನು ಮುಂದೆ ಕೆಲಸವಾಗಬೇಕು. ಪ್ರಮುಖವಾಗಿ ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾದ ಎಲ್ಲ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಜನರಿಗೆ ನೀರು ಪೂರೈಸಬೇಕೆಂದು ಸೂಚಿಸಿದರು.  

ಕುಡಿಯುವ ನೀರು ಸರಬರಾಜಿನ ಕಾಮಗಾರಿಗಳಲ್ಲಿ ಯಾವುದೇ ಲೋಪದೋಷ ಆಗದಂತೆ ಎಚ್ಚರಿಕೆ ವಹಿಸಬೇಕು. ಕಾಲಕಾಲಕ್ಕೆ ಕಾಮಗಾರಿಗಳ ತಪಾಸಣಾ ಕಾರ್ಯ ಕೈಗೊಳ್ಳಬೇಕು. ಕಾಮಗಾರಿಗಳಲ್ಲಿ ವಿಳಂಬವಾಗುವುದನ್ನು ಸಹಿಸಲಾಗದು. ಕಾಮಗಾರಿ ಪೂರ್ಣಗೊಳಿಸಲು ಸಹಕರಿಸದ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು ಎಂದರು. 

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಅಫಜಲಪುರ ತಾಲೂಕಿನಲ್ಲಿ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳದೇ ಹಣ ಗೋಲ್‌ ಮಾಲ್‌ ಮಾಡಲಾಗಿದೆ. ಈ ಕುರಿತು ಸೋಮವಾರ “ಉದಯವಾಣಿ”ಯಲ್ಲಿ ವರದಿ ಪ್ರಕಟಗೊಂಡಿದೆ ಎಂದು ಪ್ರಸ್ತಾಪಿಸಿದರು.

ಇದಕ್ಕೆ ಉತ್ತರ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಅಶೋಕ ಅಂಬಲಗಿ, ಅಫಜಲಪುರ ತಾಲೂಕಿನಲ್ಲಿ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳದೇ ಹಾಗೂ ನಕಲಿ ದಾಖಲೆ ಸೃಷ್ಟಿಸಿ ಅವ್ಯಹಾರ ಎಸಗಿದ್ದರ ಸಂಬಂಧವಾಗಿ ಇಇ ಸೇರಿದಂತೆ ಮೂವರ ವಿರುದ್ಧ ಅಫಜಲಪುರ ಠಾಣೆಯಲ್ಲಿ ಎಫ್‌ ಐಆರ್‌ ದಾಖಲಿಸಲಾಗಿದೆ ಎಂದು ಹೇಳಿದರು. 

Advertisement

ನೋಟಿಸ್‌ ಜಾರಿ ಎಚ್ಚರಿಕೆ: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಾಂತಗೌಡ ಬಿ.ಆರ್‌. ಅವರು ಕಲಬುರ್ಗಿ ಸುತ್ತಮುತ್ತ ಬೋಗಸ್‌ ವಿದ್ಯಾರ್ಥಿಗಳ ಹೆಸರಿನಲ್ಲಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನು ಗ್ರಾಮೀಣ ಪ್ರದೇಶದಲ್ಲಿ ವರ್ಗಾವಣೆ ಮಾಡದೇ ಇರುವ ಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ್‌ ಅವರು ತರಾಟೆಗೆ ತೆಗೆದುಕೊಂಡು ನೋಟಿಸ್‌ ಜಾರಿ ಮಾಡುವುದಾಗಿ ಎಚ್ಚರಿಸಿದರು.

ಶಾಂತಗೌಡರು ಉತ್ತರಿಸಿ, ನಾನು ಈ ಕುರಿತು ಪರಿಶೀಲಿಸಿದಾಗ ದಕ್ಷಿಣ ವಲಯದಲ್ಲಿ ಸುಮಾರು 20,000 ಬೋಗಸ್‌ ವಿದ್ಯಾರ್ಥಿಗಳನ್ನು ಹಾಜರಾತಿಯಲ್ಲಿ ಸೇರಿಸಿದ್ದನ್ನು ರದ್ದುಪಡಿಸಿರುವೆ. ಸುಮಾರು 46 ಶಿಕ್ಷಕರು ಹೆಚ್ಚುವರಿಯಾಗಿದ್ದು, ಅವರನ್ನು ವರ್ಗಾವಣೆ ಮಾಡುವುದಾಗಿ ಹೇಳಿದರು. 

ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ಎಲ್ಲ ಹಾಸ್ಟೆಲ್‌ಗ‌ಳ ಸಮರ್ಪಕ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಇಲಾಖೆಯ ಜಂಟಿ ನಿರ್ದೆಶಕರು ಪ್ರತಿ ಸೋಮವಾರ ಎಲ್ಲ ವಾರ್ಡನ್‌ಗಳ ಸಭೆ ಕರೆದು ಸಮರ್ಪಕ ಊಟೋಪಹಾರ ಪೂರೈಕೆ, ಕೋಣೆ ಮತ್ತು ಶೌಚಾಲಯಗಳ ಹಾಗೂ ಹಾಸ್ಟೆಲ್‌ ಆವರಣಗಳಲ್ಲಿ ಶುಚಿತ್ವ ಕಾಪಾಡುವ ಬಗ್ಗೆ ಚರ್ಚಿಸಬೇಕು.

ಎಲ್ಲ ಹಾಸ್ಟೆಲ್‌ ಗಳಲ್ಲಿ ವಾರ್ಡನ್‌ಗಳ ಕಡ್ಡಾಯ ಹಾಜರಾತಿಗೆ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೊಳಿಸಿ ಹಾಸ್ಟೆಲ್‌ಗ‌ಳ ಭೇಟಿ ತೀವ್ರಗೊಳಿಸಿ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರ ಕನಿಷ್ಠ ಮೂಲಭೂತ ಸೌಲಭ್ಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಚುನಾಯಿತ ಪ್ರತಿನಿಧಿ ಗಳು ಕೇಳಿರುವ ಮಾಹಿತಿ ಸಕಾಲದಲ್ಲಿ ಒದಗಿಸಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿರುದ್ಧ ಶ್ರವಣ ಪಿ. ಸೂಚಿಸಿದರು.  

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ದೇವಕ್ಕೆವ್ವ ಚನ್ನಮಲ್ಲಯ್ಯ ಹಿರೇಮಠ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ  ಯಾಕಾಪುರ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷಅರವಿಂದ ಚವ್ಹಾಣ, ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ, ಜಿಲ್ಲಾ ಮಟ್ಟದ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next