Advertisement

ಉದ್ಯಮಿ ಮಲ್ಯ ಕೇಸ್‌: ಬ್ಯಾಂಕುಗಳಿಗೆ ಗೆಲುವು

08:18 AM May 09, 2018 | Harsha Rao |

ಲಂಡನ್‌: ತಲೆಮರೆಸಿ ಕೊಂಡಿರುವ ಭಾರತದ ಉದ್ಯಮಿ ವಿಜಯ್‌ ಮಲ್ಯ ಅವರ ಸಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಭಾರತೀಯ ಬ್ಯಾಂಕುಗಳಿಗೆ ಗೆಲುವಾಗಿದೆ. ಮಲ್ಯ ಅವರು ಉದ್ದೇಶಪೂರ್ವಕವಾಗಿ 1.4 ಶತಕೋಟಿ ಡಾಲರ್‌ ಮೊತ್ತದ ಸಾಲವನ್ನು ಮರುಪಾವತಿ ಮಾಡಿಲ್ಲ ಎಂಬ ಬ್ಯಾಂಕುಗಳ ಆರೋಪವನ್ನು ಒಪ್ಪಿಕೊಂಡಿರುವ ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ನ್ಯಾಯಾಲಯ, ಈ ಸಂಬಂಧ ಭಾರತದ ಕೋರ್ಟ್‌ ನೀಡಿರುವ ಆದೇಶದಂತೆ ಐಡಿಬಿಐ ಸೇರಿದಂತೆ ಇತರೆ ಬ್ಯಾಂಕುಗಳು ಕ್ರಮ ಕೈಗೊಳ್ಳಬಹುದು ಎಂದು ಹೇಳಿದೆ. 

Advertisement

ಇದರಿಂದಾಗಿ ಮಲ್ಯ ಮಾಡಿದ್ದ ಸಾಲದಿಂದ ಸಂಕಷ್ಟಕ್ಕೀಡಾಗಿದ್ದ ಭಾರತದ 13 ಬ್ಯಾಂಕುಗಳು ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೆ, ಎಲ್ಲ ಸಾಲವನ್ನೂ ಮಲ್ಯ ಕಡ್ಡಾಯವಾಗಿ ಮರುಪಾವತಿ ಮಾಡಲೇ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಲ್ಯರ ವಿರುದ್ಧ ಭಾರತೀಯ ನ್ಯಾಯಾಲಯಗಳು ಹೊರಡಿಸಿರುವ ಆದೇಶಗಳನ್ನು ಜಾರಿಗೊಳಿಸಲು ನ್ಯಾಯಾಧೀಶ ಆ್ಯಂಡ್ರೂ ಹೆನ್ಶಾ ಬ್ಯಾಂಕುಗಳಿಗೆ ಅನುಮತಿ ನೀಡಿದ್ದಾರೆ. ಅದರಂತೆ, 1.55 ಶತಕೋಟಿ ಡಾಲರ್‌(10,400 ಕೋಟಿ) ಮೊತ್ತವನ್ನು ವಸೂಲಿ ಮಾಡಲು ಭಾರತದ ನ್ಯಾಯಾಲಯಗಳು 13 ಬ್ಯಾಂಕುಗಳ ಒಕ್ಕೂಟಕ್ಕೆ ನೀಡಿದ್ದ ಅನುಮತಿಗೆ ಬಲ ಬಂದಂತಾಗಿದೆ. ಮಂಗಳವಾರ ನಡೆದ ವಿಚಾರಣೆ ವೇಳೆ, ಮಲ್ಯರಿಂದ ಮೋಸ ಹೋಗಿರುವ ಐಡಿಬಿಐ ಬ್ಯಾಂಕ್‌ ಸೇರಿದಂತೆ ಇತರ ಭಾರತೀಯ ಬ್ಯಾಂಕುಗಳ ಪ್ರತಿನಿಧಿಗಳು ಹಾಜರಿದ್ದರು.

ಮಲ್ಯ ಅವರು ಬ್ಯಾಂಕುಗಳಿಗೆ 62,033,503,879.45 ರೂ.ಗಳು ಹಾಗೂ ಬಡ್ಡಿಯನ್ನು ಪಾವತಿಸಲು ಬಾಕಿಯಿದ್ದು, ಅದನ್ನು ಅವರು ಮರುಪಾವತಿಸಲೇಬೇಕು ಎಂದು ಕರ್ನಾಟಕದ ಸಾಲ ವಸೂಲು ನ್ಯಾಯಾಧಿಕರಣ(ಡಿಆರ್‌ಟಿ) ಈ ಹಿಂದೆ ತೀರ್ಪು ನೀಡಿತ್ತು. ಎಸ್‌ಬಿಐ, ಬ್ಯಾಂಕ್‌ ಆಫ್ ಬರೋಡಾ, ಕಾರ್ಪೊರೇಷನ್‌ ಬ್ಯಾಂಕ್‌, ಫೆಡರಲ್‌ ಬ್ಯಾಂಕ್‌, ಐಡಿಬಿಐ, ಪಿಎನ್‌ಬಿ, ಸ್ಟೇಟ್‌ಬ್ಯಾಂಕ್‌ ಆಫ್ ಮೈಸೂರು, ಯೂಕೋ ಬ್ಯಾಂಕ್‌ ಸೇರಿದಂತೆ 13 ಬ್ಯಾಂಕುಗಳ ಒಕ್ಕೂಟವು ಮಲ್ಯ ವಿರುದ್ಧ ಲಂಡನ್‌ನಲ್ಲಿ ಕಾನೂನು ಹೋರಾಟ ಮಾಡಿದ್ದು, ಮಂಗಳವಾರದ ಆದೇಶ ಈ ಒಕ್ಕೂಟದ ಪರ ಬಂದಿದೆ.

ಲಾಭವೇನು?
ಲಂಡನ್‌ ಕೋರ್ಟ್‌ನ ಈ ಆದೇಶ ದಿಂದ, ಇಂಗ್ಲೆಂಡ್‌ ಮತ್ತು ವೇಲ್ಸ್‌ ನಲ್ಲಿರುವ ಮಲ್ಯ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಬ್ಯಾಂಕು ಗಳಿಗೆ ನೆರವಾಗಲಿದೆ. ಅಲ್ಲದೆ, ಈ ಆಸ್ತಿಗಳ ಮೇಲೆ ಜಾಗತಿಕ ಮುಟ್ಟುಗೋಲು ಆದೇಶ ಇರುವ ಕಾರಣ, ಮಲ್ಯ ಅವರು ತಮ್ಮ ಯಾವುದೇ ಆಸ್ತಿಯನ್ನು ಮಾರಾಟ ಮಾಡಲು, ಬೇರೆಡೆಗೆ ವರ್ಗಾಯಿ ಸಲು ಸಾಧ್ಯವಾಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next