ಬೆಂಗಳೂರು: ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಬಾಗಲೂರು ಕ್ರಾಸ್ ಬಳಿ ರಸ್ತೆ ಬದಿ ಪಾರ್ಕಿಂಗ್ ಮಾಡಲಾಗಿದ್ದ ಕಾರಿನಲ್ಲಿ ಹತ್ಯೆ ಯಾದ ಸ್ಥಿತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಶವ ಪತ್ತೆಯಾಗಿದೆ.
ಆಂಧ್ರ ಪ್ರದೇಶ ಮೂಲದ ಮಾರುತಿ ನಗರದ ನಿವಾಸಿ ಕೃಷ್ಣಯಾದವ್ (55) ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ.
ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ ಕೃಷ್ಣ ಯಾದವ್ ಸೋಮವಾರ ಸಂಜೆ 6.30ರಲ್ಲಿ ಕೆಲಸದ ನಿಮಿತ್ತ ತಮ್ಮ ಸ್ವಿಫ್ಟ್ ಕಾರನ್ನು ತೆಗೆದುಕೊಂಡು ಹೊರಗೆ ಹೋಗಿದ್ದರು. ರಾತ್ರಿಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಬೆಳಗ್ಗೆ ಬಾಗಲೂರು ಕ್ರಾಸ್‌ನ ಫುಟ್ ಪಾತ್ ಬಳಿ ಅನುಮಾನಸ್ಪದವಾಗಿ ಕಾರು ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ, ವ್ಯಕ್ತಿಯ ಶವ ಕಂಡು ಬೆಚ್ಚಿ ಬಿದ್ದಿದ್ದರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದು ಯಲಹಂಕ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಕಾರಿನ ಮುಂಭಾಗದ ಸೀಟಿನಲ್ಲಿ ಕೊಲೆ ಮಾಡಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ರಿಯಲ್ ಎಸ್ಟೇಟ್ ಉದ್ಯಮಿ ಕೃಷ್ಣಯಾದವ್ ಎಂಬುದು ದೃಢಪಟ್ಟಿತ್ತು. ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ದುಷ್ಕರ್ಮಿಗಳು ಚೂರಿಯಿಂದ ಕತ್ತು, ಎದೆ ಭಾಗಕ್ಕೆ ಇರಿದು ಕೊಲೆ ಮಾಡಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ.
ಕೊಲೆಗೆ ಕಾರಣ ನಿಗೂಢ: ಮೃತದೇಹದ ಮೇಲೆ ಗಾಯದ ಕುರುಹುಗಳು ಕಂಡು ಬಂದಿದೆ. ದುಷ್ಕರ್ಮಿಗಳು ಚೂರಿಯಿಂದ ಕತ್ತು, ಎದೆ ಭಾಗಕ್ಕೆ ಇರಿದು ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಣಕಾಸಿನ ವಿಚಾರ ಅಥವಾ ಹಳೆಯ ವೈಷಮ್ಯಕ್ಕೆ ಪರಿಚಿತರೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಬೇರೆಡೆ ಹತ್ಯೆ ಮಾಡಿ ಕಾರಿನಲ್ಲಿ ಶವವಿಟ್ಟಿರುವ ಸಾಧ್ಯತೆವೂ ಇದೆ ಎನ್ನಲಾಗಿದೆ.
ಸದ್ಯ ಕುಟುಂಬಸ್ಥರಿಂದ ಕೃಷ್ಣಯಾದವ್ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ಕೃತ್ಯ ನಡೆದ ಆಸು- ಪಾಸಿನಲ್ಲಿರುವ ಸಿಸಿ ಕ್ಯಾಮೆರಾ ಪರಿಶೀಲಿಸಲು ಮುಂದಾಗಿರುವ ಪೊಲೀಸರು ಎಲ್ಲ ಆಯಾಮಗಳಲ್ಲೂ ತಾಂತ್ರಿಕ ಕಾರ್ಯಾಚರಣೆ ಕೈಗೊಂಡಿದ್ದಾರೆ. ಹಂತಕರು ಪತ್ತೆಯಾದ ಬಳಿಕವೇ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.