Advertisement

ವ್ಯವಹಾರವೇ ನಿಜವಾದ ಜ್ಞಾನ

12:22 PM Jan 05, 2019 | |

ಶಿವಮೊಗ್ಗ: ಅಕ್ಷರ ಜ್ಞಾನವಿದೆ ಆದರೆ ಆದರೆ ವ್ಯವಹಾರ ಜ್ಞಾನ ಇಲ್ಲ ಎಂದಾದರೆ ಅಂತಹ ಜ್ಞಾನ ಗೌರವಿಸುವಂತದ್ದಲ್ಲ. ಓದುವುದು ಬರೆಯುವುದಷ್ಟೇ ಜ್ಞಾನವಲ್ಲ ವ್ಯವಹಾರವೇ ಜ್ಞಾನ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.

Advertisement

ನಗರದ ಎನ್‌ಇಎಸ್‌ ಮೈದಾನದಲ್ಲಿ ಶುಕ್ರವಾರ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಸ್ವ-ಸಹಾಯ ಸಂಘದ ಬಹಳಷ್ಟು ಮಹಿಳೆಯರಿಗೆ ಓದಲು ಬರೆಯಲು ಬರುವುದಿಲ್ಲ. ಆದರೆ 1 ಸಾವಿರ ಹಣ ಎಣಿಕೆ ಮಾಡಬಲ್ಲರು. ಸಂಘದ ಮೂಲಕ ವ್ಯವಹಾರ ಜ್ಞಾನ ಪಡೆದಿದ್ದಾರೆ. ಜಿಲ್ಲೆಯಲ್ಲಿ 11607 ಸಂಘಗಳಿವೆ, 105000 ಸದಸ್ಯರಿದ್ದಾರೆ. 68 ಕೋಟಿ ಉಳಿತಾಯ ಹಣ ಇದೆ. 2626 ಕೋಟಿ ವ್ಯವಹಾರ ನಡೆಸಲಾಗಿದೆ. ಇದೆಲ್ಲ ಸಾಧ್ಯವಾಗಿದ್ದು ಮಹಿಳೆಯರ ಪರಿಶ್ರಮದಿಂದ ಎಂದರು.

ಸರಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಯಶಸ್ಸಿನ ಮೆಟ್ಟಿಲುಗಳನ್ನು ಹತ್ತಬೇಕಿದೆ. ಯಾವುದೇ ಯೋಜನೆಗಳ ಹಣ ಸದ್ಭಳಕೆಯಾದರೆ ಯಶಸ್ಸು ಸಿಗಲಿದೆ. ಉತ್ತಮ ಯೋಚನೆ, ಯೋಜನೆ, ಕಾರ್ಯಕ್ರಮಗಳಿಂದ ಉತ್ತಮವಾದದ್ದನ್ನು ಪಡೆಯಬಹುದು. 

ಮೂಢನಂಬಿಕೆಗಳನ್ನು ಬಿಡಿ ಶುಭ ಚಿಂತನೆಗಳನ್ನು ಮಾಡಿ ಉತ್ತಮ ಆರೋಗ್ಯ ಬರುತ್ತದೆ. ಮನೆಯಲ್ಲಿರುವ ಎಲ್ಲ ಮಕ್ಕಳನ್ನು ಸಮನಾಗಿ ಕಾಣುವ ಕೆಲಸವನ್ನು ತಾಯಂದಿರು ಮಾಡಬೇಕು ಎಂದರು.

Advertisement

 ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್‌ .ಯಡಿಯೂರಪ್ಪ ಮಾತನಾಡಿ, ಪ್ರಧಾನಿ
ನರೇಂದ್ರ ಮೋದಿ ಹಾಗೂ ಡಾ| ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿ ಒಂದೇ ಆಗಿದೆ. ಕುಡಿತ ಬಿಡಿಸುವ ಕೆಲಸ, ವಿದ್ಯಾದಾನ, ಅನ್ನ ದಾಸೋಹ, ಪ್ರಕೃತಿ ಚಿಕಿತ್ಸೆ ಹೀಗೆ ಅನೇಕ ಸಾಮಾಜಿಕ, ಕೌಟುಂಬಿಕ ಕಳಕಳಿ ಕೆಲಸ ಮಾಡುತ್ತಾ ಸರಕಾರ ಮಾಡಬೇಕಾದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.

ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಹಿಂದಿನಿಂದಲೂ ಸ್ತ್ರೀ ಸಮಾನತೆ, ಸಬಲೀರಣಕ್ಕಾಗಿ ಸವಾಲುಗಳನ್ನು
ಎದುರಿಸಿಕೊಂಡು ಬಂದಿದ್ದೇವೆ. 12ನೇ ಶತಮಾನದಲ್ಲಿ ಬಸವಣ್ಣನವರು ಸ್ತ್ರೀ ಸಮಾನತೆಗಾಗಿ ಶರಣರು ಹೋರಾಡಿದರು. ಪ್ರಸ್ತುತ ಸ್ತ್ರೀ ಸಬಲೀಕರಣಕ್ಕೆ ವೀರೇಂದ್ರ ಹೆಗ್ಗಡೆ ಅವರು ಬಲ ತುಂಬಿದ್ದಾರೆ ಎಂದರು.

 ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಮಾತನಾಡಿ, ಹೆಣ್ಣಿನಲ್ಲಿ ಎಲ್ಲ ಕೆಲಸಗಳನ್ನು ಮಾಡುವ ಶಕ್ತಿ ಇದೆ. ಆದರೆ ಮಾರ್ಗದರ್ಶನ ತೋರುವ ಕೆಲಸವನ್ನು ಪುರುಷರು ಮಾಡುತ್ತಿಲ್ಲ. ಸ್ವಾತಂತ್ರ್ಯಾ ಬಂದು 76 ವರ್ಷವಾದರೂ ಹೆಣ್ಣಿನ ಮೇಲೆ ಶೋಷಣೆ ನಿಂತಿಲ್ಲ. ಪ್ರಸ್ತುತ ನಾವೆಲ್ಲ ವಿದ್ಯಾವಂತರಾಗಿದ್ದೇವೆ. ಆದರೆ ಬದುಕುವ ಕಲೆ ಗೊತ್ತಿಲ್ಲ. ಬದುಕುವ ಕಲೆಯನ್ನು ವೀರೇಂದ್ರ ಹೆಗ್ಗಡೆ ಅವರು ಕಲಿಸುತ್ತಿದ್ದಾರೆ ಎಂದರು.

ಮಹಿಳಾ ಆಯೋಗದಲ್ಲಿ ದಾಖಲಾಗುತ್ತಿರುವ ಬಹುತೇಕ ಪ್ರಕರಣಗಳು ಫೇಸ್‌ಬುಕ್‌, ವಾಟ್ಸಾಪ್‌ಗೆ ಸಂಬಂಧಿಸಿದ್ದಾಗಿದೆ. ಗಂಡ, ಹೆಂಡತಿಯರ ನಡುವೆ ಅನುಮಾನ ಮೂಡಲು ಕಾರಣವಾಗುತ್ತಿದೆ. ಈ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು ಎಂದರು.  ಎಲ್‌.ಎಚ್‌. ಮಂಜುನಾಥ್‌, ಮೇಯರ್‌ ಲತಾ ಗಣೇಶ್‌, ಉಪಮೇಯರ್‌ ಚನ್ನಬಸಪ್ಪ, ಪಾಲಿಕೆ ಸದಸ್ಯರಾದ ನಾಗರಾಜ್‌ ಕಂಕಾರಿ, ಯೋಗೇಶ್‌, ಸುನಿತಾ ಅಣ್ಣಪ್ಪ, ವಿಶ್ವನಾಥ್‌, ರೇಖಾ ರಂಗನಾಥ್‌, ರೇಖಾ ಚಂದ್ರಶೇಖರ್‌, ಉದಯ್‌ಕುಮಾರ್‌ ಶೆಟ್ಟಿ, ಚಂದ್ರೇಗೌಡ, ಸುರೇಶ್‌ ಬಾಳೆಗುಂಡಿ, ರಮೇಶ್‌, ಮಹಾವೀರ ಅಜ್ರಿ, ವಿಜಯ್‌ಕುಮಾರ್‌ ದಿನಕರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next