Advertisement

ಕಳೆದ ಬಾರಿಗೆ ಹೋಲಿಸಿದರೆ ವ್ಯಾಪಾರ ಕಡಿಮೆ

12:24 PM Oct 06, 2022 | Team Udayavani |

ಬೆಂಗಳೂರು: ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬಕ್ಕೆ ಪ್ರತಿ ವರ್ಷವೂ ಹಣ್ಣು, ಹೂವು, ತರಕಾರಿ ಖರೀದಿಗೆ ಮುಗಿ ಬೀಳುತ್ತಿದ್ದ ಗ್ರಾಹಕರಿಗೆ ಈ ಬಾರಿ ದರ ಏರಿಕೆ ಬಿಸಿ ತಟ್ಟಿದ್ದು, ಪರಿಣಾಮ ವ್ಯಾಪಾರ- ವಹಿವಾಟಿನಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ.

Advertisement

ಕೊರೊನಾದಿಂದಾಗಿ ಕಳೆದ 2 ವರ್ಷ ಆಯುಧ ಪೂಜೆ-ವಿಜಯದಶಮಿ ವೇಳೆ ಮಾರಾಟ ಕುಸಿದಿತ್ತು. ಈ ಬಾರಿ ಹೆಚ್ಚಿನ ಬೇಡಿಕೆ ಇರಬಹುದು ಎಂದುಕೊಂಡು ಅಧಿಕ ಪ್ರಮಾಣದಲ್ಲಿ ಹಣ್ಣು, ಹೂವುಗಳನ್ನು ಮಾರುಕಟ್ಟೆಯಲ್ಲಿ ತಂದಿಡಲಾಗಿತ್ತು. ಆದರೆ, ಬೆಲೆ ಏರಿಕೆ ವ್ಯಾಪಾರದ ಮೇಲೂ ಪರಿಣಾಮ ಬೀರಿದೆ.

ಕೆ.ಆರ್‌. ಮಾರುಕಟ್ಟೆ, ಯಶವಂತಪುರ, ಗಾಂಧಿ ಬಜಾರ್‌, ಮಲ್ಲೇಶ್ವರ, ಮಡಿವಾಳ, ದಾಸರಹಳ್ಳಿ, ವಿಜಯನಗರ, ಜಯನಗರ ಸೇರಿ ರಾಜಧಾನಿಯ ಬಹುತೇಕ ಮಾರುಕಟ್ಟೆಗಳು ಹಬ್ಬ ಮುಗಿದರೂ ಹೂವು, ಹಣ್ಣು, ಬೂದುಗುಂಬಳಕಾಯಿ, ನಿಂಬೆ ಹಾಗೂ ಪೂಜಾ ಸಾಮಗ್ರಿಗಳಿಂದ ತುಂಬಿವೆ. ಬುಧವಾರ ಮಾರುಕಟ್ಟೆಗೆ ಬರುವ ಗ್ರಾಹಕರ ಪ್ರಮಾಣ ಕಡಿಮೆಯಿತ್ತು. ವಿಜಯದಶಮಿ ಹಬ್ಬಕ್ಕಾಗಿ ತಂದಿದ್ದ ಹೂವು, ಹಣ್ಣುಗಳ ಪೈಕಿ ವ್ಯಾಪಾರವಾಗದೇ ಉಳಿದ ವಸ್ತುಗಳನ್ನು ಕೆ.ಆರ್‌.ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಬುಧವಾರ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ದೃಶ್ಯವೂ ಕಂಡು ಬಂತು.

9 ದಿನಗಳ ವಿಜಯದಶಮಿ ಹಬ್ಬದ ರಂಗಿಗೆ ತೆರೆ ಬಿದ್ದಿದ್ದು, ಪ್ರತಿ ವರ್ಷಕ್ಕೆ ಹೋಲಿಸಿದರೆ ಕೋವಿಡ್‌ ಬಳಿಕ ಈ ಬಾರಿಯೂ ಖರೀದಿ ಭರಾಟೆ ಕಡಿಮೆಯಾಗಿರುವುದು ಕಂಡು ಬಂತು. ಕೋವಿಡ್‌ ನಂತರವೂ ಜನ ಸಾಮಾನ್ಯರು ಖರೀದಿಗೆ ಹಿಂದಿನ ಉತ್ಸಾಹ ತೋರುತ್ತಿಲ್ಲ ಎಂದು ಮಲ್ಲೇಶ್ವರ ಮಾರುಕಟ್ಟೆಯ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.

ಬೂದು ಕುಂಬಳಕ್ಕೂ ಹೆಚ್ಚಿದ ದರ: ಪ್ರತಿ ವರ್ಷ ಆಯುಧ ಪೂಜೆಗೆ ತಮಿಳುನಾಡು, ಆಂಧ್ರಪ್ರದೇಶ ದಿಂದ ರಾಶಿಗಟ್ಟಲೆ ಬೂದು ಗುಂಬಳಕಾಯಿ ಮಾರು ಕಟ್ಟೆಗೆ ಪೂರೈಕೆಯಾಗುತ್ತಿತ್ತು. ಆದರೆ, ಈ ಬಾರಿ ಸುರಿದ ಮಳೆಗೆ ಬೆಳೆ ಹಾಳಾಗಿ ಕಡಿಮೆ ಪ್ರಮಾಣದಲ್ಲಿ ಬೂದು ಗುಂಬಳ ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಬೇಡಿಕೆ ಹೆಚ್ಚಾಗಿ ಬೆಲೆಯೂ ಗಗನಕ್ಕೇರಿದೆ. ಉಳಿದಂತೆ ತರಕಾರಿ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ನಿಂಬೆ ಹಣ್ಣು ಸೇರಿ ಇತರೆ ಹಣ್ಣು, ಹೂವುಗಳ ದರ ಹೆಚ್ಚಳವಾಗಿದೆ. ಬೂದು ಕುಂಬಳಕ್ಕೆ ಸಗಟು ದರದಲ್ಲಿ ಕೆ.ಜಿ.ಗೆ 30-40 ರೂ. ಇದ್ದರೆ, ಚಿಲ್ಲರೆ ದರದಲ್ಲಿ ಒಂದು ಕೆ.ಜಿ. 40 ರೂ. ಇದೆ. ಚಿಲ್ಲರೆ ವ್ಯಾಪಾರದಲ್ಲಿ ಕೆ.ಜಿ.ಗೆ ಬದಲು ಕಾಯಿಯ ಗಾತ್ರದ ಮೇಲೆ ಚಿಕ್ಕ ಕಾಯಿಗೆ 100-150, ದೊಡ್ಡ ಕಾಯಿಗೆ 200-250 ರೂ. ವರೆಗೂ ಮಾರಾಟ ಮಾಡು ತ್ತಿದ್ದಾರೆ. ಇನ್ನು ಬಾಳೆ ಕಂದು ಜೋಡಿಗೆ 50- 200ರೂ. ವರೆಗೆ ಮಾರಾಟವಾದರೆ, ನಿಂಬೆ ಹಣ್ಣು ಒಂದಕ್ಕೆ 5 ರೂ. ನಿಗದಿಪಡಿಸಲಾಗಿತ್ತು. ಹಣ್ಣುಗಳ ಪೈಕಿ ಪ್ರತಿ ವರ್ಷದಂತೆ ಆಪಲ್‌, ಮೂಸುಂಬಿಗೆ ಹೆಚ್ಚಿನ ಬೇಡಿಕೆ ಉಂಟಾಗಿತ್ತು. ಆಪಲ್‌ ಕೆಜಿಗೆ 80 ರಿಂದ 100 ರೂ. ಹಾಗೂ ಮೂಸುಂಬಿಗೆ ಕೆಜಿಗೆ 50 ರಿಂದ 70 ರೂ. ಇದೆ.

Advertisement

ಹೂವುಗಳಿಗೆ ಭಾರಿ ಬೇಡಿಕೆ

ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದು ತೋಟಗಳಲ್ಲಿ ಹೂವಿನ ಬೆಳೆ ಹಾಳಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೂವುಗಳ ದರದಲ್ಲಿ ಏರಿಕೆ ಕಂಡು ಬಂದಿದೆ. ಈ ಹಬ್ಬಕ್ಕೆ ವಾಹನಗಳು, ಮಳಿಗೆಗಳು ಸೇರಿ ಪೂಜೆಗಳಿಗೆ ಹೂವಿನ ಬಳಕೆ ಹೆಚ್ಚಾಗಿದ್ದ ಕಾರಣ ಹೂವಿಗೆ ಬೇಡಿಕೆ ಜಾಸ್ತಿಯಾಗಿತ್ತು. ಸೇವಂತಿ ಹೂವು ಕೆ.ಜಿ.ಗೆ 100 ರಿಂದ 200 ರೂ., ಕನಕಾಂಬರ ಮಾರು 500 ರೂ., ಚೆಂಡು ಹೂವು ಕೆ.ಜಿ.ಗೆ 60 ರಿಂದ 80 ರೂ., ಕಾಕಡ ಕೆ.ಜಿ. 600 ರೂ., ಸುಗಂಧರಾಜ ಕೆ.ಜಿ. 200 ರೂ., ಮಲ್ಲಿಗೆ ಮೊಗ್ಗು ಕೆ.ಜಿ.ಗೆ 5000 ರೂ. ಇವೆ. ಬಹುತೇಕ ಹೂವು ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿವೆ. ನವರಾತ್ರಿ ವೇಳೆ ಒಂಭು¤ ದಿನಗಳ ಕಾಲ ದೇವಾಲಯಗಳಲ್ಲಿ ವಿಶೇಷ ಪೂಜೆ, ಮನೆಗಳಲ್ಲೂ ಪೂಜಾ ಕೈಂಕರ್ಯಗಳು ನಡೆದಿದ್ದು, ಹೀಗಾಗಿ ಕಳೆದ 10 ದಿನಗಳಿಂದಲೂ ಸೇವಂತಿಗೆ, ಗುಲಾಬಿ, ಸುಗಂಧರಾಜ, ಚೆಂಡು ಹೂವು, ಮಲ್ಲಿಗೆ ಮತ್ತು ಕನಕಾಂಬರ ಹೂವು ಖರೀದಿ ಜೋರಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next