Advertisement

ಮುಖ್ಯ ರಸ್ತೆಯಲ್ಲೇ ಅಪಾಯಕಾರಿ ರೀತಿ ಬಸ್ಸುಗಳ ನಿಲುಗಡೆ

09:27 PM Dec 05, 2020 | mahesh |

ಕೋಟ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಬಸ್ಸುಗಳು ನಿಲುಗಡೆ ಸಂದರ್ಭ ಸರ್ವೀಸ್‌ ರಸ್ತೆ ಅಥವಾ ಬಸ್‌ ವೇ ಗಳಿಗೆ ಕಡ್ಡಾಯವಾಗಿ ಪ್ರವೇಶಿಸಬೇಕು ಎನ್ನುವ ನಿಯಮವಿದೆ. ಆದರೆ ಜಿಲ್ಲೆಯಲ್ಲಿ ಈ ನಿಯಮ ಉಲ್ಲಂಘನೆಯಾಗುತ್ತಿದ್ದು ಅಪಾಯಕಾರಿ ರೀತಿಯಲ್ಲಿ ಮುಖ್ಯ ರಸ್ತೆಯಲ್ಲೇ ನಿಲ್ಲಿಸಿ ಪಿಕಪ್‌-ಡ್ರಾಪ್‌ ಮಾಡಲಾಗುತ್ತಿದೆ. ಇದರಿಂದಾಗಿ ಪ್ರಯಾಣಿಕರಿಗೆ ಹಾಗೂ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

Advertisement

ಎಲ್ಲೆಲ್ಲಿ ಸಮಸ್ಯೆ?
ಕೋಟ, ಬ್ರಹ್ಮಾವರ, ಸಂತೆಕಟ್ಟೆ, ಉಡುಪಿ, ಕೋಟೇಶ್ವರ, ಬೀಜಾಡಿ, ಅಂಕದಕಟ್ಟೆ, ಕುಂದಾಪುರ, ಕಾಪು, ಕಟಪಾಡಿ, ಪಡುಬಿದ್ರೆ ಮುಂತಾದ ಕಡೆಗಳಲ್ಲಿ ಸರ್ವಿಸ್‌ ರಸ್ತೆ ಇದ್ದು ಬಹುತೇಕ ಎಲ್ಲ ಕಡೆಗಳಲ್ಲಿ ಮುಖ್ಯ ರಸ್ತೆಯಲ್ಲೇ ಬಸ್ಸುಗಳ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುವ ವಾಹನ ಸವಾರರು ಗೊಂದಲಕ್ಕೊಳ ಗಾಗುತ್ತಾರೆ. ಜತೆಗೆ ಅಪಘಾತ ಸಾಧ್ಯತೆಯೂ ಹೆಚ್ಚಾಗಿದೆ. ಬಸ್ಸಿನಿಂದ ಇಳಿದು ಸರ್ವೀಸ್‌ ರಸ್ತೆ ದಾಟಿ ತೆರಳಬೇಕಿರುವುದರಿಂದ ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರಿಗೆ ಸಮಸ್ಯೆಯಾಗುತ್ತಿದೆ. ಬಸ್ಸುಗಳ ಈ ಧೋರಣೆಯಿಂದ ಪ್ರಯಾಣಿಕರು ಡಿವೈಡರ್‌ಗಳ ಮೇಲೆ ನಿಂತು ಕಾಯ ಬೇಕಾದ ಸ್ಥಿತಿ ಇದೆ.

ಕಡಿವಾಣ ಅಗತ್ಯ
ಹೆಚ್ಚಿನ ಕಡೆಗಳಲ್ಲಿ ಸರ್ವೀಸ್‌ ರಸ್ತೆಯಲ್ಲಿ ವಾಹನಗಳ ಪಾರ್ಕಿಂಗ್‌ ಮಾಡಲಾಗುತ್ತಿದೆ ಮತ್ತು ಸಂತೆ ಕೂಡ ನಡೆಯುತ್ತದೆ. ಹೀಗಾಗಿ ಸರ್ವೀಸ್‌ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಆದ್ದರಿಂದ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಕ್ರಮಕೈಗೊಳ್ಳಬೇಕಿದೆ.

ಹಿಂದೊಮ್ಮೆ ಆದೇಶವಾಗಿತ್ತು
ಸುಮಾರು ಎರಡು ವರ್ಷದ ಹಿಂದೆ ಸಾರ್ವಜನಿಕರೋರ್ವರು ಎಸ್‌.ಪಿ. ಪೋನ್‌-ಇನ್‌ ಕಾರ್ಯಕ್ರಮದಲ್ಲಿ ಸಮಸ್ಯೆಯ ಕುರಿತು ಗಮನಸೆಳೆದ ಮೇರೆಗೆ ಎಲ್ಲ ಬಸ್ಸುಗಳು ಕಡ್ಡಾಯವಾಗಿ ಸರ್ವೀಸ್‌ ರೋಡ್‌ ಪ್ರವೇಶಿಸಬೇಕು ಎನ್ನುವ ಆದೇಶವನ್ನು ಜಿಲ್ಲಾಡಳಿತ ಹೊರಡಿಸಿತ್ತು. ಆಗ ಸ್ವಲ್ಪ ಸಮಯ ಮಾತ್ರ ಇದು ಪಾಲನೆಯಾಗಿತ್ತು.

ಕ್ರಮ ಕೈಗೊಳ್ಳಲಿದ್ದೇವೆ
ಸರ್ವೀಸ್‌ ರಸ್ತೆ ಪ್ರವೇಶಿಸದಿರುವುದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹಾಗೂ ಕಡ್ಡಾಯವಾಗಿ ಸರ್ವೀಸ್‌ ರಸ್ತೆ, ಬಸ್‌ ವೇ ಪ್ರವೇಶಿಸುವಂತೆ ಸೂಚನೆ ನೀಡಲಾಗುವುದು.
-ಜೆ.ಪಿ.ಗಂಗಾಧರ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ ಉಡುಪಿ

Advertisement
Advertisement

Udayavani is now on Telegram. Click here to join our channel and stay updated with the latest news.

Next