Advertisement

ಎಲ್ಲೆಂದರಲ್ಲಿ ಬಸ್‌ ಸ್ಟಾಪ್‌; ಸಂಚಾರ ಕಿರಿಕಿರಿ ನಾನ್‌ಸ್ಟಾಪ್‌

05:42 PM Nov 23, 2021 | Team Udayavani |

ಹುಬ್ಬಳ್ಳಿ: ನಗರವೊಂದು ನಾಲ್ಕು ನಿಲ್ದಾಣವಾಗಿದ್ದು, ಪ್ರಯಾಣಿಕರ ಪರದಾಟ ದೇವರಿಗೇ ಪ್ರೀತಿ ಎಂಬಂತಾಗಿದೆ. ಅಭಿವೃದ್ಧಿ ಹೆಸರಲ್ಲಿ ನೂರಾರು ಕೋಟಿ ಹಣ ಸುರಿದರೂ ಜನರಿಗೆ ಮಾತ್ರ ಸಮರ್ಪಕ ನಿಲ್ದಾಣ ಇಲ್ಲದಂತಾಗಿದೆ.

Advertisement

ನಗರದಲ್ಲಿ ರಸ್ತೆಯುದ್ದಕ್ಕೂ ಮಳೆ, ಬಿಸಿಲು ಎನ್ನದೆ ಅಲ್ಲಲ್ಲಿ ನಿಂತು ಬಸ್‌ ಹಿಡಿಯುವ ಪಜೀತಿ ಜನರದ್ದಾಗಿದೆ. ಸಿಬಿಟಿ (ನಗರಸಾರಿಗೆ ಬಸ್‌ ನಿಲ್ದಾಣ) ಹೊರತುಪಡಿಸಿದರೆ, ಗೋಕುಲ ರಸ್ತೆ ಹೊಸ ಬಸ್‌ ನಿಲ್ದಾಣ, ಹೊಸೂರು ಪ್ರಾದೇಶಿಕ ಟರ್ಮಿನಲ್‌, ಚನ್ನಮ್ಮ ವೃತ್ತ ಬಳಿ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಮರುನಿರ್ಮಾಣವಾಗುತ್ತಿರುವ ಬಸ್‌ ನಿಲ್ದಾಣಗಳಿವೆ. ಈ ಮೂರೂ ನಿಲ್ದಾಣಗಳಿಗೆ ಮಾರ್ಗಗಳನ್ನು ಹಂಚಿ ಕಾರ್ಯಾಚರಣೆ ನಡೆಸುತ್ತಿರುವುದರಿಂದ
ತಮ್ಮೂರಿಗೆ ಹೋಗಲು ಯಾವ ನಿಲ್ದಾಣ ದಿಂದ ಬಸ್‌ ಹಿಡಿಯಬೇಕು ಎಂಬುದು ಇಂದಿಗೂ ಜಟಿಲ ಸಮಸ್ಯೆಯಾಗಿದೆ.

ನಿಲ್ದಾಣಗಳಿಗೆ ತೆರಳಲು ಸಮರ್ಪಕ ಬಸ್‌ ಗಳಿಲ್ಲ. ಬಸ್‌ಗಳಿದ್ದರೂ ಹೆಚ್ಚುವರಿಯಾಗಿ ಕಿಸೆಗೆ ಒಂದಿಷ್ಟು ಕತ್ತರಿ ಬೀಳಲಿದೆ. ಈ ಎಲ್ಲಾ ಕಾರಣದಿಂದ ಜನರು ನಿಲ್ದಾಣಗಳಿಗೆ ತೆರಳುವ ಬದಲು ಎಲ್ಲೆಂದರಲ್ಲಿ ನಿಂತುಕೊಳ್ಳುತ್ತಿದ್ದಾರೆ. ಪ್ರತಿಯೊಂದು ರಸ್ತೆಯಲ್ಲಿ ನಾಲ್ಕೈದು ಕಡೆ ತಾತ್ಕಾಲಿಕ ಬಸ್‌ ಸ್ಟಾಪ್‌ ನಿರ್ಮಾಣವಾಗಿವೆ. ಪ್ರಯಾಣಿಕರಿಗೆ ಅನಿವಾರ್ಯವಾಗಿ ಸಾರಿಗೆ ಸೇವೆ ನೀಡಬೇಕಾಗಿದ್ದು, ಕೈ ತೋರಿದಲ್ಲಿ ನಿಲ್ಲುವ ಬಸ್‌ಗಳಾಗಿ ಮಾರ್ಪಟ್ಟಿವೆ.

ನಿರ್ವಹಣೆ ಕೊರತೆ: ಹಳೇ ಬಸ್‌ ನಿಲ್ದಾಣ ಕಾಮಗಾರಿ ಆರಂಭವಾಗುತ್ತಿದ್ದಂತೆ ಪ್ರಯಾಣಿಕರ ಅನುಕೂಲಕ್ಕಾಗಿ ಕೆಲ ಮಾರ್ಗಗಳಲ್ಲಿ ಸ್ಥಳ ಗುರುತಿಸಲಾಯಿತು. ಮಾರುಕಟ್ಟೆ ಪ್ರದೇಶ ಒಂದುಕಡೆ ಬಸ್‌ ನಿಲ್ದಾಣ ಇನ್ನೊಂದೆಡೆ ಆಯಿತು. ಇದರಿಂದಾಗಿ ಉಪನಗರ ಹಾಗೂ ಗ್ರಾಮೀಣ ಪ್ರಯಾಣಿಕರಿಗೆ ಸಮಸ್ಯೆಯಾಗುವುದನ್ನು ತಪ್ಪಿಸಲು ತಾತ್ಕಾಲಿಕ ನಿಲ್ದಾಣ ವ್ಯವಸ್ಥೆ ಮಾಡಲಾಗಿದೆ. ಕೆಲವೆಡೆ ಆರಂಭದಲ್ಲಿ ಸಾರಿಗೆ ಸಂಸ್ಥೆ ಸಿಬ್ಬಂದಿ ನಿಯೋಜಿಸಲಾಗಿತ್ತು.

ಆದರೆ ಇದು ನಿರಂತರವಿಲ್ಲದ ಕಾರಣ ಸೂಚಿಸಿದ ಸ್ಥಳಗಳಲ್ಲಿ ನಿಲ್ಲದ ಬಸ್‌ಗಳು ಅಡ್ಡಾದಿಡ್ಡಿಯಾಗಿ ನಿಲ್ಲುವಂತಾಗಿದೆ. ಹಳೇ ಬಸ್‌ ನಿಲ್ದಾಣ ಪೂರ್ಣಗೊಳ್ಳುವವರೆಗಾದರೂ ಈ ಸ್ಥಳಗಳಲ್ಲಿ ಸಂಚಾರ ನಿಯಮ ಪಾಲನೆ ಮಾಡುವ ಕೆಲಸ ಸಾರಿಗೆ ಸಂಸ್ಥೆ ಹಾಗೂ ಸಂಚಾರ ಪೊಲೀಸರಿಂದ ಆಗಬೇಕು. ನಿಯಮ ಪಾಲನೆ ಮಾಡದವರ ಮೇಲೆ ದಂಡ ಪ್ರಯೋಗವಾದರೆ ಒಂದಿಷ್ಟು ಕಡಿವಾಣ ಹಾಕಬಹುದು ಎಂಬುವುದು ಜನರ ಅಭಿಪ್ರಾಯವಾಗಿದೆ.

Advertisement

ಜನರಿಗೆ ತಪ್ಪದ ಗೊಂದಲ
ಅಗತ್ಯವಿಲ್ಲದಿದ್ದರೂ ಹೊಸೂರು ಪ್ರಾದೇಶಿಕ ಬಸ್‌ ನಿಲ್ದಾಣ ಮಾಡಿ ಜನರನ್ನು ಮತ್ತಷ್ಟು ಗೊಂದಲಕ್ಕೆ ತಳ್ಳಿದ್ದಾರೆ. ಈ ನಿಲ್ದಾಣ ಶುರುವಾದಾಗಿನಿಂದ ಹಾಗೂ ಹಳೇ ಬಸ್‌ ನಿಲ್ದಾಣ ಕಾಮಗಾರಿ ಆರಂಭವಾದಾಗಿನಿಂದಲೂ ಪ್ರಯಾಣಿಕರಿಗೆ ಬಸ್‌ ಹತ್ತುವುದು-ಇಳಿಯುವುದು ಜಟಿಲವಾಗಿದೆ.ವಾಹನಗಳು ಓಡಾಡುವುದೇ ದುಸ್ತರವಾಗಿರುವ ನಗರದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಬಸ್‌ಗಳು ನಿಲ್ಲುತ್ತಿರುವುದರಿಂದ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಸಕಾಲಕ್ಕೆ ಶಾಲೆ-ಕಾಲೇಜು ತಲುಪಬೇಕಾದ ವಿದ್ಯಾರ್ಥಿಗಳಿಗಂತೂ ದೊಡ್ಡ ಸಮಸ್ಯೆಯಾಗಿದೆ.

ಪೊಲೀಸರು ಹೈರಾಣ
ಹಳೇ ಬಸ್‌ ನಿಲ್ದಾಣ ಹೊಸೂರ ಬಸ್‌ ನಿಲ್ದಾಣಕ್ಕೆ ಸ್ಥಳಾಂತರಗೊಂಡ ನಂತರ ಸಂಗೊಳ್ಳಿ ರಾಯಣ್ಣ ವೃತ್ತದ ಮುಂಭಾಗ, ಪಿ.ಬಿ. ರಸ್ತೆ ತಿರುವು, ಹಳೇ ಬಸ್‌ ನಿಲ್ದಾಣದ ಮುಂಭಾಗ, ಅಯೋಧ್ಯಾ ಹೋಟೆಲ್‌ ಮುಂಭಾಗ, ವಾಣಿವಿಲಾಸ ವೃತ್ತ, ಗಿರಣಿಚಾಳ ರಸ್ತೆ, ಹೊಸೂರು ವೃತ್ತ, ಗೋಕುಲ ರಸ್ತೆ ಹೀಗೆ ನಗರದ ಹಲವೆಡೆ ಬಸ್‌ ಸ್ಟಾಪ್‌ಗ್ಳು ಆರಂಭಗೊಂಡಿವೆ. ಫ್ಲೆ$çಓವರ್‌ ನಿರ್ಮಾಣ, ರಸ್ತೆ ನಿರ್ಮಾಣ, ಇಕ್ಕಟ್ಟಾದ ವೃತ್ತಗಳ ಪರಿಣಾಮ ಸಂಚಾರ ಅಸ್ತವ್ಯಸ್ತ ಆಗುತ್ತಿದ್ದು, ಸಂಚಾರ ಠಾಣೆ ಪೊಲೀಸರು ಹೈರಾಣಾಗಿದ್ದಾರೆ.

ನಗರದಲ್ಲಿ ಹಲವಾರು ಕಾಮಗಾರಿಗಳು ನಡೆಯುತ್ತಿದ್ದು, ಇದರಿಂದ ಸಂಚಾರ ಅಸ್ತವ್ಯಸ್ತ ಆಗುತ್ತಿದೆ. ಏಕಮುಖ ರಸ್ತೆಯಲ್ಲಿ ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಇಂತಹ ಸ್ಥಳಗಳಲ್ಲಿ ಸಮಸ್ಯೆಯಾಗಿದೆ. ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಪೊಲೀಸರು ಶ್ರಮಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ.
ಆರ್‌.ಬಿ. ಬಸರಗಿ,
ಡಿಸಿಪಿ, ಸಂಚಾರ ಮತ್ತು ಅಪರಾಧ

ಒಂದು ನಗರದಲ್ಲಿ ಮೂರು ನಿಲ್ದಾಣಗಳು ಬೇಕಾಗಿತ್ತಾ? ಜನಪ್ರತಿನಿಧಿಗಳು ಯೋಜನೆಗಾಗಿಯೇ ಇಷ್ಟೊಂದು ನಿಲ್ದಾಣ ಮಾಡಿದ್ದಾರೆಯೇ ಹೊರತು ಜನರಿಗೆ ನಯಾಪೈಸೆ ಅನುಕೂಲವಾಗಿಲ್ಲ. ನಮ್ಮೂರಿಗೆ ಹೋಗಲು ಎಲ್ಲಿಂದ ಬಸ್‌ ಹಿಡಿಯಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ಸಾಮಾನ್ಯ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಆಗಲಿ.
ಚನ್ನವೀರ ಬೆಣ್ಣಿ,
ಇಂಗಳಹಳ್ಳಿ ನಿವಾಸಿ

*ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next