ಮಹಾನಗರ: ಪ್ರಯಾಣಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ನಗರದ ಕೆಲವು ಕಡೆಗಳಲ್ಲಿ ಬಸ್ ತಂಗುದಾಣ ಇದ್ದರೂ, ಪ್ರಯಾಣಿಕರು ಮಾತ್ರ ಬಸ್‌ಗಾಗಿ ರಸ್ತೆ ಬದಿ ಕಾಯುತ್ತಾರೆ. ಪರಿಣಾಮ ಬಸ್ ತಂಗುದಾಣ ಇಲ್ಲದಿದ್ದರೂ ರಸ್ತೆ ಮಧ್ಯೆಯೇ ಬಸ್ ನಿಲ್ಲಿಸ ಲಾಗುತ್ತಿದೆ. ಪಾದಚಾರಿಗಳಿಗೆ, ಸಾರ್ವಜನಿಕರಿಗೆ ಇದರಿಂದ ಬಹು ತೊಂದರೆ ಉಂಟಾಗುತ್ತಿದೆ.
ನಗರದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಬಂಟ್ಸ್‌ಹಾಸ್ಟೆಲ್ ರಸ್ತೆಯಲ್ಲಿ ಬಸ್ ತಂಗುದಾಣ ಇಲ್ಲ. ಆದರೆ ದಿನನಿತ್ಯ ಹಲವು ಮಂದಿ ಪ್ರಯಾಣಿಕರು ರಸ್ತೆ ಬದಿ ಬಸ್‌ಗಾಗಿ ಕಾಯುತ್ತಾರೆ. ನವಭಾರತ ವೃತ್ತದಲ್ಲಿ ಬಸ್ ತಂಗುದಾಣ ಇದ್ದರೂ ಕೆಲವು ಮಂದಿ ಬಸ್‌ಗಾಗಿ ಪಿವಿಎಸ್ ಜಂಕ್ಷನ್ ಬಳಿ ಬರುತ್ತಾರೆ. ಬಂಟ್ಸ್‌ಹಾಸ್ಟೆಲ್‌ನಿಂದ-ಪಿವಿಎಸ್ ಜಂಕ್ಷನ್ ರಸ್ತೆಯಲ್ಲೂ ಬಸ್ ತಂಗುದಾಣ ಇಲ್ಲ. ಕೆಲವೆಡೆ ಬಸ್ ತಂಗುದಾಣದ ಬದಲಿಗೆ ಬಸ್‌ಲೇನ್ ವ್ಯವಸ್ಥೆ ಮಾಡಲಾಗಿದೆ. ಬಸ್ ಬೇ ನಿರ್ಮಾಣಕ್ಕೆ ಸ್ಥಳಾವಕಾಶದ ಕೊರತೆಯ ಕಾರಣ ಲೇನ್‌ಗಳಾಗಿ ನಿರ್ಮಾಣ ಮಾಡಲಾಗಿದೆ. ಆದರೆ, ಬಹುತೇಕ ಬಸ್ ಲೇನ್ ಒಳಗೆ ಬರುತ್ತಿಲ್ಲ. ಬದಲಾಗಿ ರಸ್ತೆಯಲ್ಲೇ ನಿಲ್ಲುತ್ತಿವೆ. ಇನ್ನು, ಬಸ್ ಲೇನ್‌ಗಳಲ್ಲಿ ಬಸ್ ಹೊರತುಪಡಿಸಿ ಇತರ ವಾಹನಗಳೂ ಸಂಚರಿಸುತ್ತಿವೆ. ಇದೀಗ ಮತ್ತೆ ಹೊಸದಾಗಿ ಬಸ್ ಬೇ ನಿರ್ಮಾಣಕ್ಕೆ ಸ್ಥಳೀಯಾಡಳಿತ ಮುಂದಾಗಿದೆ. ಹೀಗಿದ್ದಾಗ ಹೊಸದಾಗಿ ಬಸ್ ಬೇ ನಿರ್ಮಾಣಕ್ಕೂ ಮುನ್ನ ಈ ರೀತಿಯ ಸಮಸ್ಯೆಗಳ ಬಗ್ಗೆಯೂ ಸ್ಥಳೀಯಾಡಳಿತ ಗಮನ ನೀಡಬೇಕಾಗಿದೆ.
ಬಸ್ ತಂಗುದಾಣ ಕೆಡಹಿದರು !
ನಗರದ ಪಿವಿಎಸ್ ಜಂಕ್ಷನ್ ಬಳಿ ನಾಲ್ಕು ದಿನಗಳ ಹಿಂದೆ ಬಸ್ ತಂಗುದಾಣ ಇತ್ತು. ರಾತೋರಾತ್ರಿ ತಂಗುದಾಣ ಕೆಡಹಲಾಗಿದೆ. ನಗರದ ಬಂಟ್ಸ್‌ಹಾಸ್ಟೆಲ್, ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಪಂಪ್‌ವೆಲ್, ಬಲ್ಮಠ, ಸ್ಟೇಟ್‌ಬ್ಯಾಂಕ್ ಸಹಿತ ಹಲವು ಕಡೆಗಳಿಗೆ ತೆರಳುವ ಖಾಸಗಿ, ಸಿಟಿ, ಸರಕಾರಿ ಬಸ್‌ಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತದೆ.
ಇದರಿಂದಾಗಿ ಪ್ರತೀ ದಿನ ಹಲವು ಮಂದಿ ಇದೇ ಬಸ್ ತಂಗುದಾಣದಲ್ಲಿ ನಿಲ್ಲುತ್ತಿದ್ದರು. ಆದರೆ, ಸದ್ಯ ಈ ಬಸ್ ತಂದುದಾಣ ಇಲ್ಲದ ಪರಿಣಾಮ ಬಿಸಿಲಿನಲ್ಲಿಯೇ ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎಚ್ಚರಿಕೆ ಇದ್ದರೂ ಬಸ್ ನಿಲ್ಲುತ್ತೆ
ನಗರದಲ್ಲಿ ಲಾಲ್‌ಬಾಗ್ ಕಡೆಗೆ ಹೋಗುವ ರಸ್ತೆಯಲ್ಲಿ ಬೆಸೆಂಟ್ ಕಾಲೇಜು, ಹಂಪನಕಟ್ಟೆ ಸಿಗ್ನಲ್ ಬಳಿ ಬಸ್ ನಿಲ್ಲಿಸಬಾರದು ಎಂದು ಮಂಗಳೂರು ಸಂಚಾರ ಪೊಲೀಸರು ಈಗಾಗಲೇ ಬಸ್ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ, ಅಲ್ಲಿ ಸದ್ಯ ಬಸ್ ನಿಲ್ಲಿಸಲಾಗುತ್ತಿದೆ. ಬೆಸೆಂಟ್ ಅಕ್ಕಪಕ್ಕ ಕೆಲವೊಂದು ಕಾಲೇಜುಗಳಿದ್ದು, ಶಾಲಾ-ಕಾಲೇಜು ಬಿಡುವ ವೇಳೆ ಇಲ್ಲಿ ನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಅಲ್ಲೇ ಪಕ್ಕದಲ್ಲಿ ಟಿಎಂಎ ಪೈ ಕನ್ವೆನ್ಶನ್ ಸೆಂಟರ್ ಬಳಿ ಈಗಾಗಲೇ ಬಸ್ ತಂಗುದಾಣ ಇದ್ದು, ಬೆಸೆಂಟ್ ಬದಲು ಅಲ್ಲೇ ಬಸ್ ನಿಲ್ಲಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
Related Articles
ಕಾನೂನು ಕ್ರಮ
ಬೆಸೆಂಟ್ ಕಾಲೇಜು ಬಳಿ, ಹಂಪನಕಟ್ಟೆ ಸಹಿತ ನಗರದ ಕೆಲವೊಂದು ಕಡೆಗಳಲ್ಲಿ ಬಸ್ ನಿಲ್ಲಿಸಬಾರದು ಎಂದು ಈಗಾಗಲೇ ಸೂಚನೆ ನೀಡಿದ್ದೇವೆ. ಆದರೂ ಕೆಲವೆಡೆ, ಅದರಲ್ಲೂ ಜಂಕ್ಷನ್, ಸಿಗ್ನಲ್ ಬಳಿ ಪ್ರಯಾಣಿಕರನ್ನು ಬಸ್‌ಗೆ ಹತ್ತಿಸುವುದು, ಇಳಿಸುವುದು ಗಮನಕ್ಕೆ ಬಂದಿದೆ. ಈ ರೀತಿ, ನಿಯಮ ಉಲ್ಲಂಘಿಸುತ್ತಿರುವ ಬಸ್‌ಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ.
– ಎಂ.ಎ. ನಟರಾಜ್, ಟ್ರಾಫಿಕ್ ಎಸಿಪಿ ಮಂಗಳೂರು