ಕುಷ್ಟಗಿ: ತಾಲೂಕಿನ ತಳವಗೇರಾ ಆದರ್ಶ ವಿದ್ಯಾಲಯಕ್ಕೆ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಹಿನ್ನೆಲೆಯಲ್ಲಿ ಕೂಡಲೇ ಪ್ರತ್ಯೇಕವಾಗಿ ಕುಷ್ಟಗಿ-ಹನುಮಸಾಗರ ಮಾರ್ಗವಾಗಿ ಹೆಚ್ಚುವರಿ ಬಸ್ ಸೇವೆ ಕಲ್ಪಿಸಲು ಘಟಕ ವ್ಯವಸ್ಥಾಪಕ ಜಡೇಶ್ ಅವರಿಗೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಸೂಚಿಸಿದರು.
ಶಾಸಕ ಬಯ್ಯಾಪೂರ ಶುಕ್ರವಾರ ಬೆಳಗ್ಗೆ ವಿವಿಧ ವಾರ್ಡಗಳಿಗೆ ಭೇಟಿ ಸಂದರ್ಭದಲ್ಲಿ 4 ಕೋಟಿ ರೂ. ಅಂದಾಜು ವೆಚ್ಚದ ಬಸ್ ನಿಲ್ದಾಣ ನವೀಕೃತ ಕಾಮಗಾರಿ ಪರಿಶೀಸುತ್ತಿದ್ದರು. ಇದೇ ವೇಳೆ ತಳವಗೇರಾ ಆದರ್ಶ ವಿದ್ಯಾಲಯಕ್ಕೆ ಹೋಗಲು ಬಸ್ ನಿರೀಕ್ಷೆಯಲ್ಲಿದ್ದ ಮಕ್ಕಳು, ಶಾಸಕ ಬಯ್ಯಾಪೂರ ಅವರನ್ನು ತಳವಗೇರಾಕ್ಕೆ ನಿತ್ಯ ಬಸ್ ಸಮಸ್ಯೆ ಎದುರಿಸುತ್ತಿರುವುದನ್ನು ಪ್ರಸ್ತಾಪಿಸಿದರು.
ಪ್ರತಿ ದಿನ ಕುಷ್ಟಗಿಯಿಂದ ಹನುಮಸಾಗರ ಮಾರ್ಗವಾಗಿ ಬದಾಮಿ ಬಸ್ ಸೇವೆ ರದ್ದುಗೊಳಿಸಿದೆ. ಶನಿವಾರ ಶಾಲೆ 12-30ಕ್ಕೆ ಶಾಲೆ ಬಿಡುತ್ತಿದ್ದು ಆ ವೇಳೆಗೆ ಬಸ್ ಇಲ್ಲ. 3 ಗಂಟೆಯವರೆಗೂ ಹನುಮಸಾಗರದಿಂದ ಬರುವ ಬಸ್ ಗೆ ಕಾಯಬೇಕು. ಈ ಒಂದು ಬಸ್ ನಲ್ಲಿ ಎರಡು ಬಸ್ ನಷ್ಟು ವಿದ್ಯಾರ್ಥಿಗಳನ್ನು ತುಂಬಿಕೊಂಡು ಬರುತ್ತಿದ್ದು, ತಳವಗೇರಾ ದಿಂದ ಕುಷ್ಟಗಿ ವರೆಗೆ 15 ನಿಮಿಷದ ಪ್ರಯಾಣ ಹಿಂಸೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಬಸ್ ಗೆ ಕಾಯದೇ ಖಾಸಗಿ ವಾಹನ ಹತ್ತಿಕೊಂಡು ಬರುವಂತಾಗಿದೆ ಎಂದು ಬಸ್ ನ ವಾಸ್ತವ ಸಮಸ್ಯೆ ಬಿಚ್ಚಿಟ್ಟರು.
ಶಾಸಕ ಬಯ್ಯಾಪೂರ ಅವರು ವಿದ್ಯಾರ್ಥಿಗಳ ಅಹವಾಲು ಆಲಿಸಿ, ಘಟಕ ಬಸ್ ವ್ಯವಸ್ಥಾಪಕ ಜಡೇಶ್ ಅವರಿಗೆ ಬಸ್ಸುಗಳ ಕೊರತೆಯ ಬಗ್ಗೆ ಪ್ರಶ್ನಿಸಿದರು. ಘಟಕ ವ್ಯವಸ್ಥಾಪಕರು ಬಸ್ಸುಗಳಿವೆ, ಆದರೆ ಸಿಬ್ಬಂದಿ ಕೊರತೆಯಾಗಿದೆ ಎಂದಾಗ ಕೂಡಲೇ ಸಿಬ್ಬಂದಿ ಕೊರತೆಯಾಗಿರುವ ಬಗ್ಗೆ ಮೇಲಾಧಿಕಾರಿಗಳಿಗೆ ಅಗತ್ಯ ಇರುವ ಹುದ್ದೆಗಳ ಬಗ್ಗೆ ಪತ್ರ ಬರೆಯಿರಿ. ಅದರ ಪ್ರತಿ ನಮಗೆ ನೀಡಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರೊಂದಿಗೆ ಚರ್ಚಿಸುವೆ ಎಂದ ಅವರು, ತಳವಗೇರಾ ಆದರ್ಶ ವಿದ್ಯಾಲಯಕ್ಕೆ ಖುದ್ದು ಭೇಟಿ ನೀಡಿ ಯಾವ ಸಮಯಕ್ಕೆ ಬಸ್ ಅಗತ್ಯತೆ ತಿಳಿದುಕೊಂಡು ಹೆಚ್ಚುವರಿ ಬಸ್ ಸೇವೆ ಕಲ್ಪಿಸಲು ಸೂಚಿಸಿದರು.
ಇದನ್ನೂ ಓದಿ:ಮಂಗಳೂರು: ಸ್ಕೂಟರ್ ಶೋ ರೂಮ್ ಬೆಂಕಿಗಾಹುತಿ
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಬಿ.ಟಿ. ಬಂಡಿವಡ್ಡರ, ಸದಸ್ಯರಾದ ಸಯ್ಯದ್ ಖಾಜಾ ಮೈನುದ್ದೀನ್ ಮುಲ್ಲಾ,ಮಹಿಬೂಬು ಕಮ್ಮಾರ, ವಸಂತ ಮೇಲಿನಮನಿ ಸೇರಿದಂತೆ ಮಂಜುನಾಥ ಕಟ್ಟಿಮನಿ, ಶೌಕತ್ ಕಾಯಿಗಡ್ಡಿ, ಮಹೇಶ ಕೋಳೂರು, ಉಸ್ಮಾನ ಕಲಬುರಗಿ, ಪುರಸಭೆ ಸಿಬ್ಬಂದಿ ಇದ್ದರು.