Advertisement

ಟಿಕೆಟ್‌ ನೀಡದಿದ್ದರೆ ಬಸ್‌ ಪರ್ಮಿಟ್‌ ಅಮಾನತು: ಎಚ್ಚರಿಕೆ 

11:00 AM Mar 03, 2018 | |

ಮಹಾನಗರ: ಬಸ್‌ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್‌ ನೀಡದಿರುವ ಪ್ರಕರಣಗಳನ್ನು ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ಅವರು ಗಂಭೀರವಾಗಿ ಪರಿಗಣಿಸಿದ್ದು, ಅಂತಹ ಬಸ್‌ ಗಳನ್ನು ಮುಟ್ಟುಗೋಲು ಹಾಕಿಕೊಂಡು ಪರ್ಮಿಟ್‌ ಅಮಾನತುಗೊಳಿಸುವುದಾಗಿ
ಎಚ್ಚರಿಕೆ ನೀಡಿದ್ದಾರೆ.

Advertisement

ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬಂದ ದೂರುಗಳನ್ನು ಸ್ವೀಕರಿಸಿ ಅವರು ಈ ವಿಷಯ ತಿಳಿಸಿದರು. ಪಡೀಲ್‌ನ ವ್ಯಕ್ತಿಯೊಬ್ಬರು ಕರೆ ಮಾಡಿ ಬಜಾಲ್‌ ಕಡೆಗೆ ಹೋಗುವ 9 ನಂಬ್ರದ ನರ್ಮ್ ಬಸ್‌ ಹೊರತು ಪಡಿಸಿ ಉಳಿದಂತೆ ಯಾವುದೇ ಖಾಸಗಿ ಬಸ್‌ ಗಳಲ್ಲಿ ಟಿಕೆಟ್‌ ನೀಡುವುದಿಲ್ಲ ಎಂದು ದೂರು ನೀಡಿದರು.

ಕಠಿನ ಕ್ರಮ
ಖಾಸಗಿ ಬಸ್‌ಗಳಲ್ಲಿ ಟಿಕೆಟ್‌ ನೀಡದಿರುವ ಬಗ್ಗೆ ಕಳೆದ ಹಲವಾರು ಸಮಯದಿಂದ ಫೋನ್‌ ಇನ್‌ ಕಾರ್ಯಕ್ರಮಗಳಲ್ಲಿ ದೂರುಗಳು ಬರುತ್ತಲೇ ಇವೆ. ಈ ಬಗ್ಗೆ ಬಸ್‌ ಮಾಲಕರಿಗೆ ಹಲವು ಬಾರಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಬಸ್‌ ಸಿಬಂದಿಗೆ ಎರಡು ದಿನಗಳ ತರಬೇತಿಯನ್ನು ಏರ್ಪಡಿಸಿ ಈ ಕುರಿತಂತೆ ತಿಳಿವಳಿಕೆ ನೀಡಿದರೂ ಇನ್ನೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಆದ್ದರಿಂದ ಇನ್ನು ಮುಂದೆ ವಿಶೇಷ ಕಾರ್ಯಾಚರಣೆ ನಡೆಸಿ ಟಿಕೆಟ್‌ ನೀಡದಿರುವ ಬಸ್‌ಗಳನ್ನು ಪತ್ತೆ ಹಚ್ಚಿ ಅವುಗಳ ಪರ್ಮಿಟ್‌ ಅಮಾನತಿನಂತಹ ಕಠಿನ ಕ್ರಮ ಜರಗಿಸಲಾಗುವುದು ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು.

ಕೆಲವು ಸಿಟಿ ಬಸ್‌ ಚಾಲಕರು ಬಸ್‌ ಗಳನ್ನು ರಸ್ತೆ ಮಧ್ಯೆ ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ ಎಂಬ ದೂರಿಗೆ ಸ್ಪಂದಿಸಿದ ಕಮಿಷನರ್‌ ಈ ಬಗ್ಗೆ ತಪಾಸಣೆ ನಡೆಸಿ ಕ್ರಮ ಜರಗಿಸಲಾಗುವುದು ಎಂದರು.

ಮೂಡಬಿದಿರೆಯಲ್ಲಿ ಸಂಚಾರಕ್ಕೆ ತಡೆ
ಮೂಡಬಿದಿರೆಯಲ್ಲಿ ರಸ್ತೆಯ ಎರಡೂ ಬದಿ ವಾಹನಗಳನ್ನು ನಿಲ್ಲಿಸುವುದರಿಂದ ಇತರ ವಾಹನಗಳ ಸಂಚಾರಕ್ಕೆ ತಡೆ ಉಂಟಾಗುತ್ತಿದೆ ಎಂದು ಹಲವು ದೂರುಗಳು ಬಂದವು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್‌ ಆಯುಕ್ತರು ಮೂಡಬಿದಿರೆಯಲ್ಲಿ ಟ್ರಾಫಿಕ್‌ ಪೊಲೀಸ್‌ ಇಲ್ಲ; ಅಲ್ಲಿನ ಠಾಣೆಯ ಪೊಲೀಸರನ್ನು ಟ್ರಾಫಿಕ್‌ ನಿರ್ವಹಣೆಗೆ ನಿಯೋಜಿಸಲಾಗುವುದು ಎಂದು ತಿಳಿಸಿದರು.

Advertisement

ಇಬ್ಬರು ಪೊಲೀಸರ ನಿಯೋಜನೆ
ನಗರದ ಅತ್ರೆಬೈಲ್‌ಗೆ ಇನ್ನೂ ಕೆಲವು ಬಸ್‌ಗಳು ಸಂಚರಿಸುತ್ತಿಲ್ಲ ಎಂದು ಕೆಲವು ಮಂದಿ ದೂರು ನೀಡಿದರು. ಇದಕ್ಕೆ ಉತ್ತರಿಸಿದ ಕಮಿಷನರ್‌, ಅತ್ರೆಬೈಲ್‌ ನಲ್ಲಿ ಪೊಲೀಸ್‌ ಸಿಬಂದಿಯನ್ನು ನೇಮಿಸಲಾಗಿದೆ ಎಂದರು. ಪೊಲೀಸ್‌ ಸಿಬಂದಿಯನ್ನು ನೇಮಿಸಿದ್ದರೂ ಮಧ್ಯಾಹ್ನದ ವೇಳೆ ಅವರು ಊಟಕ್ಕೆ ಹೋಗುವ ವೇಳೆ ಬಸ್‌ನವರು ಅತ್ರೆಬೈಲ್‌ಟ್ರಿಪ್‌ ಕಟ್‌ ಮಾಡುತ್ತಿದ್ದಾರೆ ಎಂದು ದೂರುದಾರರು ತಿಳಿಸಿದರು. ಇನ್ನು ಮುಂದೆ ಅಲ್ಲಿ ಇಬ್ಬರು ಪೊಲೀಸರನ್ನು ನಿಯೋಜನೆ ಮಾಡಲಾಗುವುದು ಎಂದು ಕಮಿಷನರ್‌ ವಿವರಿಸಿದರು.

ಕೊಡಿಯಾಲಬೈಲ್‌ನಲ್ಲಿ ಜೈಲು ಪರಿಸರದಲ್ಲಿ ಜಾಮರ್‌ ಅಳ ವಡಿಸಿರುವುದರಿಂದ ಕೆಲವು ಬಾರಿ ದೂರವಾಣಿ ಸಂಪರ್ಕ ಸಿಗುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ದೂರು ಸಲ್ಲಿಸಿದರು. ಜೈಲು ಸ್ಥ ಳಾಂತರಗೊಂಡ ಬಳಿಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕ ಬಹುದೆಂದು ಕಮಾಷನರ್‌ ತಿಳಿಸಿದರು. ಇದು 73ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 34 ಕರೆಗಳು ಬಂದವು. ಡಿಸಿಪಿ ಉಮಾ ಪ್ರಶಾಂತ್‌, ಎಸಿಪಿಗಳಾದ ಮಂಜುನಾಥ ಶೆಟ್ಟಿ ಮತ್ತು ವೆಲೆಂಟೈನ್‌ ಡಿ’ಸೋಜಾ, ಟ್ರಾಫಿಕ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಮಂಜುನಾಥ್‌, ಹೆಡ್‌ಕಾನ್ಸ್‌ಟೆ ಬಲ್‌ ಪುರುಷೋತ್ತಮ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next