ಗಂಗೊಳ್ಳಿ: ಖಾಸಗಿ ಬಸ್ಸೊಂದು ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟಿರುವ ಘಟನೆ ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ಬಳಿ ಸೋಮವಾರ (ಸೆ.23ರಂದು) ರಾತ್ರಿ ನಡೆದಿದೆ.
ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ ಅರಾಟೆ ಸೇತುವೆ ಬಳಿ ನಿಲ್ಲಿಸಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇನ್ನೋವಾ ಕಾರು ಚಾಲಕ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಭಟ್ಕಳದ ಮೂಸ ನಗರದ ನಿವಾಸಿ ಮೊಹಮ್ಮದ್ ನಾಸಿರ್ ಸಿದ್ದೀಕ್ವಾ ಮೃತ ಚಾಲಕ ಎಂದು ತಿಳಿದು ಬಂದಿದೆ.
ಕುಂದಾಪುರ ಕಡೆಯಿಂದ ಭಟ್ಕಳದ ಸಂಚಾರ ಮಾಡುತ್ತಿದ್ದ ಇನ್ನೋವಾ ಕಾರಿನ ಚಾಲಕ ಅರಾಟೆ ಸೇತುವೆ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರನ್ನು ನಿಲ್ಲಿಸಿ ಪರೀಕ್ಷಿಸುತ್ತಿದ್ದ ಸಮಯದಲ್ಲಿ ಅದೇ ಮಾರ್ಗದಲ್ಲಿ ಕುಂದಾಪುರದಿಂದ ಗಂಗೊಳ್ಳಿಗೆ ಸಂಚರಿಸುತ್ತಿದ್ದ ಖಾಸಗಿ ಡಿಕ್ಕಿ ಹೊಡೆದಿದೆ. ಕಾರಿನ ಡೋರ್‌ಗೆ ಹಾನಿಯಾಗಿದ್ದು ಕಾರಿನ ಚಾಲಕನಿಗೆ ಗಂಭೀರ ಸ್ವರೂಪದ ಗಾಯವಾಗಿ ಮೃತಪಟ್ಟಿದ್ದಾರೆ.
ಇನ್ನೋವಾ ಕಾರ್‌ನಲ್ಲಿ ಚಾಲಕ, ಒಂದು ಮಗು ಸೇರಿ ಇಬ್ಬರು ಪುರುಷರು, ಇಬ್ಬರು ಮಹಿಳೆಯರು ಪ್ರಯಾಣಿಸುತ್ತಿದ್ದರು. ಗಂಗೊಳ್ಳಿ ಠಾಣೆ ಪಿಎಸ್‌ಐ ಹರೀಶ್ ಆರ್. ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇಬ್ರಾಹಿಂ ಗಂಗೊಳ್ಳಿ ಆಂಬ್ಯುಲೆನ್ಸ್ ಮೂಲಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದ್ದರು.
ಹೆದ್ದಾರಿಯಲ್ಲಿ ಕತ್ತಲಿನ ಪ್ರಯಾಣ: ಕುಂದಾಪುರದಿಂದ ಬೈಂದೂರು ತನಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬಹುತೇಕ ಕಡೆ ಲೈಟ್ ಅಳವಡಿಕೆ ಮಾಡದೇ ಇರುವುದರಿಂದ ವಾಹನ ಸವಾರರು ಹೆದ್ದಾರಿಯಲ್ಲಿ ಕತ್ತಲಲ್ಲೇ ಸಾಗಬೇಕಾದ ಪರಿಸ್ಥಿತಿ ಇದೆ. ವಾಹನದ ಲೈಟ್ ಹಾಕಿದರೂ ಎದುರುಗಡೆ ನಿಂತಿರುವ ವಾಹನ ಅಥವಾ ರಸ್ತೆ ದಾಟುವ ವ್ಯಕ್ತಿಗಳು, ಜಾನುವಾರುಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಇದೇ ಕಾರಣದಿಂದ ಸೋಮವಾರ ರಾತ್ರಿಯೂ ಅಪಘಾತ ನಡೆದಿದೆ ಎಂದು ಸ್ಥಳೀಯರು ಹೇಳುತ್ತಾರೆ.