ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬಸ್‌ನಲ್ಲಿ ಮಲಗಿದ್ದ ನಿರ್ವಾಹಕ ಸಜೀವ ದಹನವಾಗಿರುವ ದುರ್ಘಟನೆ ಬೆಂಗಳೂರಿನ ಲಿಂಗಧೀರನಹಳ್ಳಿ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಳ್ಳಾರಿ ಮೂಲದ ಮುತ್ತಯ್ಯ ಸ್ವಾಮಿ (45) ಮೃತಪಟ್ಟಿರುವ ಬಿಎಂಟಿಸಿ ನಿರ್ವಾಹಕ. ಸುಮನಹಳ್ಳಿ ಡಿಪೋಗೆ ಸೇರಿದ ಬಿಎಂಟಿಸಿ ಬಸ್ ಇದಾಗಿದ್ದು, ಚಾಲಕ ಪ್ರಕಾಶ್ ಗುರುವಾರ ರಾತ್ರಿ 10.30ಕ್ಕೆ ಕರ್ತವ್ಯ ಮುಗಿಸಿ ಲಿಂಗಧೀರನಹಳ್ಳಿ ಡಿ ಗ್ರೂಪ್ ಲೇಔಟ್ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಮಾಡಿದ್ದರು. ಬಳಿಕ ಅವರು ನಿಲ್ದಾಣದಲ್ಲಿರುವ ರೂಂಗೆ ಹೋಗಿ ಮಲಗಿದ್ದರು. ಇತ್ತ ನಿರ್ವಾಹಕ ಮುತ್ತಯ್ಯ ಸ್ವಾಮಿ ಬಸ್‌ನಲ್ಲೇ ಮಲಗಿದ್ದರು. ಶುಕ್ರವಾರ ಮುಂಜಾನೆ 4.45ಕ್ಕೆ ಏಕಾಏಕಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆ ಇಡೀ ಬಸ್‌ಗೆ ಆವರಿಸಿಕೊಂಡಿತ್ತು. ಪರಿಣಾಮ ಬಸ್‌ನಲ್ಲಿ ನಿದ್ದೆಗೆ ಜಾರಿದ್ದ ಮುತ್ತಯ್ಯ ಸ್ವಾಮಿ ಬೆಂಕಿಗೆ ಸಿಲುಕಿ ಸಜೀವ ದಹನವಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಬಸ್ ನಿಲುಗಡೆ ಮಾಡಿದ್ದ ಪ್ರದೇಶದ ಮುಂದಿನ ಮನೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೆಂಕಿಯಿಂದ ಉಂಟಾದ ಶಬ್ದ ಕೇಳಿ ಎಚ್ಚರ ಗೊಂಡು ನೋಡಿದಾಗ ಬಸ್‌ಗೆ ಬೆಂಕಿ ಹೊತ್ತಿ ಕೊಂಡಿರುವುದು ಕಂಡು ಬಂದಿತ್ತು. ಕೂಡಲೇ ಜೋರಾಗಿ ಕೂಗಿಕೊಂಡು ಸ್ಥಳೀಯರನ್ನು ಕರೆದು ಬಸ್ ಮೇಲೆ ಬಕೆಟ್‌ನಿಂದ ನೀರು ಚೆಲ್ಲಿ ಬೆಂಕಿ ನಂದಿಸಲು ಯತ್ನಿಸಿದ್ದರು. ಆ ವೇಳೆ ಬೆಂಕಿಗೆ ಬಸ್‌ನ ಗ್ಲಾಸುಗಳು ಒಡೆಯಲು ಆರಂಭವಾದ ಹಿನ್ನೆಲೆಯಲ್ಲಿ ಆತಂಕಗೊಂಡ ಸ್ಥಳೀಯರು ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಇದಾದ ಕೆಲ ಹೊತ್ತಿನಲ್ಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಬಸ್‌ನೊಳಗೆ ಸಿಲುಕಿದ್ದ ಮುತ್ತಯ್ಯ ಸ್ವಾಮಿ ಮೃತದೇಹ ಹೊರ ತೆಗೆದಿದ್ದಾರೆ.
ಶೇ.80ರಷ್ಟು ಸುಟ್ಟ ದೇಹ: ಮುತ್ತಯ್ಯ ಸ್ವಾಮಿ ಶವವನ್ನು ಬಸ್‌ನಿಂದ ಹೊರ ತೆಗೆಯುವ ವೇಳೆ ಅವರ ದೇಹವು ಶೇ.80ರಷ್ಟು ಸುಟ್ಟು ಹೋಗಿತ್ತು. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಫ್ಎಸ್‌ಎಲ್ ಅಧಿಕಾರಿಗಳು, ಬಿಎಂಟಿಸಿ ಅಧಿಕಾರಿಗಳು ಭೇಟಿ ನೀಡಿದ್ದು, ಬಸ್‌ನಲ್ಲಿ ಏಕಾಏಕಿ ಬೆಂಕಿ ಉಂಟಾಗಲು ಕಾರಣವೇನು ಎಂಬ ಬಗ್ಗೆ ಪರಿಶೀಲಿಸಿದ್ದಾರೆ.
Related Articles
ತಂಗಲು ಸ್ಥಳವಿದ್ದರೂ ಬಸ್‌ನಲ್ಲಿ ನಿದ್ದೆ: ಲಿಂಗದೇವರಹಳ್ಳಿ ಬಸ್ ನಿಲ್ದಾಣದಲ್ಲಿ ಚಾಲನಾ ಸಿಬ್ಬಂದಿ ರಾತ್ರಿ ತಂಗಲು ಅಲ್ಲಿಯೇ ಸ್ಥಳವಿದ್ದು, ಚಾಲಕ ತಂಗುವ ಸ್ಥಳದಲ್ಲಿ ಮಲಗಿರುತ್ತಾರೆ. ಆದರೆ ನಿರ್ವಾಹಕ ತಾವು ಬಸ್ ನಲ್ಲಿಯೇ ಮಲ ಗುವುದಾಗಿ ತಿಳಿಸಿರುವುದಾಗಿ ಚಾಲಕ ಹೇಳಿಕೆ ನೀಡಿದ್ದಾರೆ. ಬೆಂಕಿ ಹತ್ತಿರುವ ಸಮಯದಲ್ಲಿ ಚಾಲಕ ತಂಗುವ ಸ್ಥಳದಲ್ಲಿ ಮಲಗಿದ್ದ ಕಾರಣ ಗಮನಕ್ಕೆ ಬಂದಿರುವುದಿಲ್ಲ ಎಂದು ಚಾಲಕ ಹೇಳಿದ್ದಾರೆ. ಮುತ್ತಯ್ಯ ಸ್ವಾಮಿ ಸಾವಿಗೆ ಸಂಸ್ಥೆಯು ತೀವ್ರ ಸಂತಾಪವನ್ನು ಸೂಚಿಸುತ್ತದೆ. ಬೆಂಕಿ ಅವಘಡಕ್ಕೀಡಾದ ಬಸ್ 2017ರಲ್ಲಿ ಸಂಸ್ಥೆಗೆ ಸೇರ್ಪಡೆಯಾಗಿದ್ದು, 3.75 ಲಕ್ಷ ಕಿ.ಮೀ. ಕ್ರಮಿಸಿದೆ ಎಂದು ತಿಳಿಸಿದೆ.
ರೂಟ್ ಬದಲಾವಣೆ: ಶುಕ್ರವಾರ ಬೆಳಗ್ಗೆ 5 ಗಂಟೆಗೆ ಲಿಂಗಧೀರನಹಳ್ಳಿಯಿಂದ ಈ ಬಸ್ ಕೆ. ಆರ್.ಮಾರ್ಕೆಟ್‌ಗೆ ತೆರಳಬೇಕಿತ್ತು. ಇಷ್ಟು ದಿನ ಮೆಜೆಸ್ಟಿಕ್‌ಗೆ ತೆರಳುತ್ತಿದ್ದ ಈ ಬಸ್ಸು ಶುಕ್ರವಾರದ ಮಟ್ಟಿಗೆ ಮಾರ್ಕೆಟ್‌ಗೆ ರೂಟ್ ಬದಲಿಸಲಾಗಿತ್ತು ಎಂದು ತಿಳಿದು ಬಂದಿದೆ.
ಬಸ್ ಸುಟ್ಟ ದೃಶ್ಯ ಸಿಸಿ : ಕ್ಯಾಮೆರಾದಲ್ಲಿ ಸೆರೆ ಪ್ರಕರಣದ ನಡೆದ ಕೆಲ ಹೊತ್ತಿನ ಬಳಿಕ ಅನುಮಾನದ ಮೇರೆಗೆ ಪೊಲೀಸರು ಸ್ಥಳೀಯ ಕ್ಯಾಮೆರಾ ಪರಿಶೀಲಿಸಿದ್ದಾರೆ. ಅದರಲ್ಲಿ ಬಸ್ ಏಕಾಏಕಿ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋಗಿರುವ ದೃಶ್ಯ ಕಂಡು ಬಂದಿದೆ. ಯಾರೂ ಬಸ್ ಬಳಿ ಓಡಾಡುವುದಾಲಿ, ಬಸ್‌ಗೆ ಬೆಂಕಿ ಹಚ್ಚುವುದಾಗಲಿ ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಡಕ್ಟರ್ ಮುತ್ತಯ್ಯ ಸ್ವಾಮಿಗೆ ಬೆಂಕಿ ಬೀಳುವ ಮುನ್ನ ಪ್ರಜ್ಞೆ ತಪ್ಪಿರುವ ಸಾಧ್ಯತೆ : ನಿರ್ವಾಹಕ ಮುತ್ತಯ್ಯ ಸ್ವಾಮಿ ಚಾಲಕನ ಸೀಟಿನ ಪಕ್ಕದಲ್ಲಿರುವ ಎಂಜಿನ್ ಸಮೀಪ ಮಲಗಿದ್ದ. ಆತ ಸಿಗರೇಟ್ ಸೇದಿ ಅಲ್ಲೇ ಎಸೆದಿರುವ ಸಾಧ್ಯತೆಗಳಿವೆ. ಸೊಳ್ಳೆ ಬತ್ತಿ ಉರಿಸಿ ಅದರಿಂದ ಅಲ್ಲಿರುವ ವೈಯರ್‌ಗಳಿಗೆ ತಾಗಿ ಬೆಂಕಿ ಉಂಟಾಗಿರಬಹದು. ವೈಯರುಗಳು ಬೆಂಕಿಗೆ ಸುಟ್ಟು ಹೋದ ಬಳಿಕ ಹೊರ ಬರುವ ಹೊಗೆಯು ಹೆಚ್ಚಿನ ಪ್ರಮಾಣದಲ್ಲಿ ದೇಹದೊಳಗೆ ಸೇರಿದರೆ ಕೆಲವೊಮ್ಮೆ ವ್ಯಕ್ತಿ ಪ್ರಜ್ಞೆತಪ್ಪಿಸುವ ಉದಾಹರಣೆಗಳಿವೆ. ಇವರೂ ಪ್ರಜ್ಞೆ ಕಳೆದುಕೊಂಡು ಬಿದ್ದಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.
ನಿರ್ವಾಹಕನ ಪತ್ನಿಗೆ ನೌಕರಿ ಆದೇಶ :
ಬೆಂಗಳೂರು: ಲಿಂಗದೀರನಹಳ್ಳಿ ಬಸ್ ಬೆಂಕಿ ಪ್ರಕರಣದಲ್ಲಿ ಮೃತಪಟ್ಟ ಬಿಎಂಟಿಸಿ ನಿರ್ವಾಹಕ ಮುತ್ತಯ್ಯ ಅವರ ಕುಟುಂಬದ ನೆರವಿಗೆ ಧಾವಿಸಿರುವ ಸಂಸ್ಥೆ, ಮುತ್ತಯ್ಯ ಅವರ ಪತ್ನಿಗೆ ಅನುಕಂಪದ ಆಧಾರದಲ್ಲಿ ನೌಕರಿ ನೀಡುವುದರ ಜತೆಗೆ ಕುಟುಂಬಕ್ಕೆ ವಿಶೇಷ ಪ್ರಕರಣವೆಂದು ಪರಿಗಣಿಸಿ 5 ಲಕ್ಷ ರೂ. ಪರಿಹಾರ ಘೋಷಿಸಿದೆ.
ಸಂಸ್ಥೆಯ ಸಿಬ್ಬಂದಿ ಮೃತಪಟ್ಟ ದಿನವೇ ಆ ಕುಟುಂಬದ ಅವಲಂಬಿತರೊಬ್ಬರಿಗೆ ಅನುಕಂಪದ ಆಧಾರದಲ್ಲಿ ನೌಕರಿ ಆದೇಶ ನೀಡುತ್ತಿರುವುದು ಇದೇ ಮೊದಲ ಪ್ರಕರಣ ಎಂದು ಹೇಳಲಾಗುತ್ತಿದ್ದು, ಮುತ್ತಯ್ಯ ಅವರ ಪತ್ನಿ ಮಂಜುಳಾ ಅವರಿಗೆ ಉದ್ಯೋಗ ನೀಡಲಾಗುತ್ತಿದೆ. ಮೃತರಿಗೆ 14 ವರ್ಷದ ಮಗಳು ಇದ್ದಾಳೆ. ಇದಲ್ಲದೆ 3 ಲಕ್ಷ ರೂ. ಇಲಾಖಾ ಗುಂಪು ವಿಮಾ ಪರಿಹಾರ ಮೊತ್ತದ ಹಣ ಮತ್ತು 15 ಸಾವಿರ ರೂ. ಎಕ್ಸ್ ಗ್ರೇಷಿಯಾ ನೀಡಲಾಗುತ್ತಿದೆ.
ಸಿಬ್ಬಂದಿ ಬಸ್‌ನಲ್ಲಿ ಬೆಂಕಿಗಾಹುತಿಯಾಗಿದ್ದು ಇದೇ ಮೊದಲ ಪ್ರಕರಣವಾಗಿದ್ದು, ಈ ರೀತಿಯ ಅವಘಡಗಳನ್ನು ನಿಯಂತ್ರಿಸಲು ಹಾಗೂ ಸಂಸ್ಥೆಯ ಚಾಲನಾ ಸಿಬ್ಬಂದಿ ಸುರಕ್ಷತೆ ಮತ್ತಷ್ಟು ಹೆಚ್ಚಿಸಲು, ಎಲ್ಲ ರಾತ್ರಿ ತಂಗುವ ಬಸ್‌ಗಳ ಸ್ಥಳಗಳನ್ನು ಸಮೀಕ್ಷೆ ನಡೆಸಿ, ಪರಿಶೀಲನೆ ಮಾಡಿ ಅಗತ್ಯ ಸುಧಾರಣಾ ಕ್ರಮಗಳ ಕುರಿತು ಮಾರ್ಗಸೂìಚಿ ಹೊರಡಿಸಲಾಗುವುದು. ಅಲ್ಲದೆ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.