ರೇವಾ: ಟ್ರಾಲಿ ಟ್ರಕ್ ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 30ರಲ್ಲಿ ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ 35 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೆಲವು ದಾರಿಹೋಕರು ಘಟನೆಯ ಬಗ್ಗೆ ತಮಗೆ ಮಾಹಿತಿ ನೀಡಿದ್ದು, ಸೊಹಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಕೂಡಲೇ ಬಸ್ ನೊಳಗೆ ಸಿಲುಕಿದ್ದ ಪ್ರಯಾಣಿಕರನ್ನು ಹೊರತೆಗೆಯುವ ಕೆಲಸಕ್ಕೆ ಮುಂದಾದರು. ಮೂರರಿಂದ ನಾಲ್ಕು ಮಂದಿ ಬಸ್ ಕ್ಯಾಬಿನ್ ಒಳಗೆ ಸಿಲುಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:‘ ಗಂಧದ ಗುಡಿ ‘ ಮುಂದಿನ ಪೀಳಿಗೆಗೆ ದಂತಕತೆಯಾಗಲಿದೆ: ಮುಖ್ಯಮಂತ್ರಿ ಬೊಮ್ಮಾಯಿ ವಿಶ್ವಾಸ
ಬಸ್ ಉತ್ತರ ಪ್ರದೇಶದ ಜಬಲ್ಪುರದಿಂದ ರೇವಾ ಮೂಲಕ ಪ್ರಯಾಗ್ ರಾಜ್ ಗೆ ಹೋಗುತ್ತಿತ್ತು. ದೀಪಾವಳಿ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಯಾಣಿಕರು ಮನೆಗೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ರೇವಾ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಭಾಸಿನ್ ಹೇಳಿದ್ದಾರೆ.