Advertisement

ಹೊತ್ತಿ ಉರಿದ ಬಿಎಂಟಿಸಿ ಬಸ್‌

11:53 AM Jan 22, 2022 | Team Udayavani |

ಬೆಂಗಳೂರು: ಎರಡು ಪ್ರತ್ಯೇಕ ಘಟನೆಯಲ್ಲಿ ಬಿಎಂಟಿಸಿ ಬಸ್‌ ಸೇರಿ ಎರಡು ವಾಹನಗಳು ಬ್ಯಾಟರಿ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿಹೊತ್ತಿಕೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

Advertisement

ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸ್ಥಳದಲ್ಲಿ ಕೆಲ ಹೊತ್ತು ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ಚಾಮರಾಜಪೇಟೆಯ ಮಕ್ಕಳ ಕೂಟ ಬಳಿ ಬೆಳಗ್ಗೆ ನಡೆದಿದೆ.

ಮೆಜೆಸ್ಟಿಕ್‌ನಿಂದ ಚಾಮರಾಜಪೇಟೆ ಕಡೆ ಹೋಗುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಬೆಳಗ್ಗೆ11.30ರ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಚಾಲಕ ಮತ್ತು ನಿರ್ವಾಹಕ ಬಸ್‌ನಲ್ಲಿದ್ದ 40 ಮಂದಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ನಂತರ ನೋಡ ನೋಡುತ್ತಿದ್ದಂತೆ ಬಸ್‌ ಧಗಧಗನೆಹೊತ್ತಿ ಉರಿದಿದೆ. ಪರಿಣಾಮ ಬಸ್‌ ಶೇ.70ರಷ್ಟು ಸುಟ್ಟು ಹೋಗಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ವಿ.ವಿ.ಪುರಂ ಪೊಲೀಸರು ದೌಡಾಯಿಸಿ ಪರಿಶೀಲಿಸಿದರು. ಚಾಲಕನಪ್ರಕಾರ ಬ್ಯಾಟರಿಯ ಶಾರ್ಟ್‌ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ ಎಂದು ಪೊಲೀಸರು ಹೇಳಿದರು.

ಟಾಟಾ ಏಸ್‌ ವಾಹನಕ್ಕೆ ಬೆಂಕಿ: ರಸ್ತೆ ಬದಿ ನಿಲ್ಲಿಸಿದ್ದ ಟಾಟಾ ಏಸ್‌ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಸಂಪಿಗೆಹಳ್ಳಿ ಠಾಣೆಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

Advertisement

ಥಣಿಸಂದ್ರ ಸಮೀಪದ ಅಮರ ಜ್ಯೋತಿನಗರದ ಸರ್ಕಾರಿ ಶಾಲೆ ಹಿಂಭಾಗದ ರಸ್ತೆಯಲ್ಲಿ ಇಮ್ರಾನ್‌ ಎಂಬುವರು ಗುರುವಾರ ರಾತ್ರಿ ತಮ್ಮ ಟಾಟಾ ಏಸ್‌ ವಾಹನ ನಿಲ್ಲಿಸಿ ಹೋಗಿದ್ದರು. ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ವಾಹನದ ಬ್ಯಾಟರಿಯಲ್ಲಿ ಉಂಟಾದ ಕಿಡಿಯಿಂದ ಶಾರ್ಟ್‌ ಸರ್ಕ್ನೂಟ್‌ ಆಗಿ ಇಡೀ ವಾಹನ ಸುಟ್ಟು ಕರಕಲಾಗಿದೆ ಎನ್ನಲಾಗಿದೆ.

ಘಟನೆ ಸಂಬಂಧ ಇಮ್ರಾನ್‌ ದೂರು ನೀಡಿದ್ದಾರೆ. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಮೇಲ್ನೋಟಕ್ಕೆ ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿಹೊತ್ತಿಕೊಂಡಿದೆ ಎಂದು ಹೇಳಲಾಗಿದೆ ಎಂದುಪೊಲೀಸರು ಹೇಳಿದರು. ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ ನೀಡಲು ಬಿಎಂಟಿಸಿ ಸೂಚನೆ :

ಬೆಂಗಳೂರು: ನಗರದ ಚಿಕ್ಕಪೇಟೆ ಪೊಲೀಸ್‌ ಸಿಗ್ನಲ್‌ ಬಳಿ ಸಂಭವಿಸಿದ ಬಸ್‌ ಬೆಂಕಿ ಅನಾಹುತಕ್ಕೆ ಕಾರಣವಾದ ಅಂಶಗಳ ಬಗ್ಗೆ ವಿವರ ವರದಿ ಸಲ್ಲಿಸುವಂತೆ ಬಿಎಂಟಿಸಿಯು ತನ್ನ ಮುಖ್ಯ ಮೆಕಾನಿಕಲ್‌ ಎಂಜಿನಿಯರ್‌ ಮತ್ತು ತಂಡಕ್ಕೆ ಸೂಚಿಸಿದೆ.

ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಿಂದ ದೀಪಾಂಜಲಿನಗರಕ್ಕೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಬಸ್‌ (ಕೆಎ-57 ಎಫ್-1592)ನಲ್ಲಿ ಚಿಕ್ಕಪೇಟೆ ಪೊಲೀಸ್‌ ಸಿಗ್ನಲ್‌ ಬಳಿ ಬೆಂಕಿ ಕಾಣಿಸಿಕೊಂಡಿದೆ. ಸಮಯಪ್ರಜ್ಞೆ ಮೆರೆದ ಚಾಲಕ, ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ನಂತರ ಬಸ್‌ ಮುಂಭಾಗಕ್ಕೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಹಾನಿಯನ್ನು ನಿಯಂತ್ರಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ಘಟನೆ ಕಾರಣವಾದ ಅಂಶಗಳ ಬಗ್ಗೆ ವಿವರ ವರದಿ ಸಲ್ಲಿಸುವಂತೆ ಸಂಸ್ಥೆಯ ಮುಖ್ಯ ಮೆಕಾನಿಕಲ್‌ ಎಂಜಿನಿಯರ್‌ ಮತ್ತು ತಂಡಕ್ಕೆ ಸೂಚಿಸಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next