Advertisement

Udupi ನಗರದಲ್ಲಿ ಮತ್ತೆ ಕಳ್ಳತನ; ಬುಡ್ನಾರು ಬಳಿಯ ಮನೆಗೆ ನುಗ್ಗಿದ ಕಳ್ಳರು

11:01 PM Aug 04, 2024 | Team Udayavani |

ಉಡುಪಿ: ಖಾಲಿ ಮನೆಗಳನ್ನೇ ಗುರುತಿಸಿಕೊಂಡು ಕಳ್ಳತನ ನಡೆಸುವ ಘಟನೆ ಉಡುಪಿ ನಗರದಲ್ಲಿ ಮತ್ತೆ ಮುಂದುವರಿದಿದೆ.

Advertisement

ನಗರದ ಬುಡ್ನಾರಿನಲ್ಲಿ ಶನಿವಾರ ತಡರಾತ್ರಿ ಖಾಲಿ ಮನೆಗೆ ನುಗ್ಗಿದ ಕಳ್ಳರು ಲ್ಯಾಪ್‌ಟಾಪ್‌, ಟ್ಯಾಬ್‌, ಸುಮಾರು ಅಂದಾಜು 1.5 ಲ.ರೂ. ನಗದು, ಚಿನ್ನಾಭರಣಗಳು ಕಳವು ನಡೆದಿರುವ ಸಾಧ್ಯತೆಗಳಿವೆ ಎಂದು ಮನೆಯ ಸಂಬಂಧಿಕರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದು, ಕದ್ದ ಸೊತ್ತುಗಳ ನಿಖರ ಮೌಲ್ಯ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ನಗರ ಠಾಣೆಯ ಪೊಲೀಸ್‌ ನಿರೀಕ್ಷಕರು ತಿಳಿಸಿದ್ದಾರೆ.

ಸಂಬಂಧಿಕರ ಮನೆಗೆ ತೆರಳಿದ್ದರು
ದಿ| ಕೆ. ಮೊಹಮ್ಮದ್‌ ಅವರಿಗೆ ಸೇರಿದ ಡ್ರೀಮ್‌ ಹೌಸ್‌ನಲ್ಲಿ ಈ ಘಟನೆ ನಡೆದಿದೆ. ಕಳವು ನಡೆದ ಮನೆಯಲ್ಲಿ ತಾಯಿ ಹಾಗೂ ಮಗಳು ಇಬ್ಬರೇ ವಾಸಮಾಡಿಕೊಂಡಿದ್ದರು. ಕೆ. ಮೊಹಮ್ಮದ್‌ ಅವರು 6 ತಿಂಗಳ ಹಿಂದೆಯಷ್ಟೇ ನಿಧನ ಹೊಂದಿದ್ದರು. ಶನಿವಾರ ಸಂಜೆ ತಾಯಿ ಹಾಗೂ ಮಗಳು ಮಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಯವರು ನಾವಿಲ್ಲದಿದ್ದರೂ ಹೊರ ಭಾಗದಲ್ಲಿ ಸ್ವಚ್ಛ  ಮಾಡುವಂತೆ ತಿಳಿಸಿದ ಮೇರೆಗೆ ಕೆಲಸದಾಕೆ ರವಿವಾರ ಬೆಳಗ್ಗೆ ಬಂದಿದ್ದಾಗ ಬಾಗಿಲು ಒಡೆದಿತ್ತು. ಕೂಡಲೇ ಕೆಲಸದಾಕೆ ಈ ವಿಚಾರವನ್ನು ಪಕ್ಕದ ಮನೆಯವರ ಬಳಿ ತಿಳಿಸಿದ ಮೇರೆಗೆ ಈ ಘಟನೆ ಬೆಳಕಿಗೆ ಬಂದಿದೆ.

ಕಳ್ಳರು ಮನೆಯ ಚಿಲಕ ತೆಗೆದು ಒಳಭಾಗದಲ್ಲಿದ್ದ ಕಪಾಟಿನಲ್ಲಿ ಇಟ್ಟಿದ್ದ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನ ಲಾಗುತ್ತಿದೆ. ಮನೆಯಲ್ಲಿ ಇಟ್ಟಿರುವ ಹಣದ ಪ್ರಮಾಣ ಎಷ್ಟು ಹಾಗೂ ಇತರ ವಸ್ತುಗಳು ಏನಿತ್ತು ಎಂಬುವುದರ ಬಗ್ಗೆ ರವಿವಾರ ತಡರಾತ್ರಿಯವರೆಗೂ ಪೊಲೀಸರು ಮಾಹಿತಿ ಸಂಗ್ರಹಿಸಿದರು. ಸಂಪೂರ್ಣ ಮಾಹಿತಿ ಲಭಿಸಿದ ಬಳಿಕ ಎಫ್ಐಆರ್‌ ದಾಖಲಿಸ ಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಶ್ವಾನ ದಳ, ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಮುಸುಕುಧಾರಿಗಳ ಕೃತ್ಯವೇ?
ಬ್ರಹ್ಮಗಿರಿಯಲ್ಲಿ ಕಳ್ಳತನ ನಡೆಸಿದ ಮುಸುಕುಧಾರಿಗಳೇ ಈ ಕೃತ್ಯ ಎಸಗಿದಂತೆ ಕಾಣುತ್ತಿಲ್ಲ ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಒಂದು ಅಥವಾ ಇಬ್ಬರು ಕಳ್ಳರು ಸೇರಿ ಈ ಕೃತ್ಯ ಎಸಗಿರುವ ಸಾಧ್ಯತೆಗಳಿವೆ ಎಂಬುವುದು ಪೊಲೀಸರ ಅಭಿಪ್ರಾಯ. ಸ್ಥಳೀಯವಾಗಿ ಈ ಭಾಗದಲ್ಲಿ ಯಾವುದೇ ಸಿಸಿಟಿವಿ ದೃಶ್ಯಾವಳಿಗಳು ಇಲ್ಲದ ಕಾರಣ ಪೊಲೀಸರು ಹೆದ್ದಾರಿ ಬದಿಯಲ್ಲಿರುವ ಅಂಗಡಿ ಹಾಗೂ ಸನಿಹದಲ್ಲಿರುವ ಇತರ ಅಂಗಡಿ, ಮನೆಗಳ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಕಳ್ಳರ ಚಲನವಲನ ಗುರುತಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

Advertisement

ಅನುಮಾನಾಸ್ಪದ ವ್ಯಕ್ತಿ ಪತ್ತೆ?
ಘಟನೆ ನಡೆಯುವ ಮುನ್ನ ಶನಿವಾರ ಹಗಲಿನಲ್ಲಿ ವ್ಯಕ್ತಿಯೋರ್ವ ಸ್ಕೂಟರ್‌ನಲ್ಲಿ ಬಂದು ಅನುಮಾನಸ್ಪದವಾಗಿ ವರ್ತಿಸುತ್ತಿದ್ದ ಬಗ್ಗೆ ಪಕ್ಕದ ಮನೆಯ ಸಿಸಿ ಟಿವಿ ಕೆಮರಾದಲ್ಲಿ ದಾಖಲಾಗಿದೆ. ಟಾರ್ಚ್‌ಲೈಟ್‌ ಹಿಡಿದು ಒಬ್ಬನೇ ವ್ಯಕ್ತಿ ಕೃತ್ಯ ನಡೆಸಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಇನ್ನೂ ಸಿಗದ ಮುಸುಕುಧಾರಿಗಳ ಸುಳಿವು!
ಬ್ರಹ್ಮಗಿರಿ ಬಳಿಯ 3 ಅಪಾರ್ಟ್‌ಮೆಂಟ್‌ಗಳಿಗೆ ನುಗ್ಗಿದ ಮುಸುಕುದಾರಿಗಳ ಪತ್ತೆ ಕಾರ್ಯ ಇನ್ನೂ ನಡೆದಿಲ್ಲ. ಆ. 31ರ ತಡರಾತ್ರಿ ಈ ಘಟನೆ ನಡೆದಿದ್ದು, ವಿವಿಧ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಅಚ್ಚರಿ ಕಾದಿತ್ತು. ಕಳ್ಳರು ಬ್ರಹ್ಮಗಿರಿ ಸರ್ಕಲ್‌ನತ್ತಲೂ ಹೋಗಿಲ್ಲ. ಅಂಬಲಪಾಡಿ ಜಂಕ್ಷನ್‌ಗೂ ತೆರಳಿಲ್ಲ. ಇತ್ತ ಮಾರುತಿ ಟ್ರೂ ವ್ಯಾಲ್ಯೂ ಭಾಗಕ್ಕೂ ಕಾಲಿಟ್ಟಿಲ್ಲ. ಆದರೆ ಅವರು ಯಾವ ಮಾರ್ಗದಲ್ಲಿ ಎಸ್ಕೇಪ್‌ ಆಗಿರಬಹುದು ಎಂಬವುದೇ ಪೊಲೀಸರಿಗೆ ಗೊಂದಲ ಶುರುವಾಗಿದೆ.

ಫ್ಲ್ಯಾಟ್‌ ಹಿಂಭಾಗದ ಮೂಲಕ ಶ್ಯಾಮಿಲಿ ಹಾಲ್‌ನ ಬಳಿಯಿಂದ ಕರಾವಳಿ ಬೈಪಾಸ್‌ ಅಥವಾ ಕೆಎಸ್ಸಾರ್ಟಿಸಿ ಬಸ್‌ ತಂಗುದಾಣದ ಮೂಲಕ ಹಾದು ಹೋಗಿದ್ದಾರೆಯೇ ಎಂಬ ಅನುಮಾನಗಳೂ ಹುಟ್ಟಿಕೊಂಡಿವೆ. ಪೊಲೀಸರು ಈ ನಿಟ್ಟಿನಲ್ಲಿಯೂ ವಿವಿಧ ಅಂಗಡಿ, ಮನೆಗಳ ಸಿಸಿ ಟಿವಿ ದೃಶ್ಯಾವಳಿಗಳ ತಪಾಸಣೆಯಲ್ಲಿ ನಿರತರಾಗಿದ್ದಾರೆ. ಕಳ್ಳರು ಭಾರೀ ಯೋಜನೆ ರೂಪಿಸಿಕೊಂಡೇ ಚಾಣಾಕ್ಷತನದಿಂದ ಕೃತ್ಯ ನಡೆಸಿರುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next