ಪುಣೆ: ಪುಣೆಯಲ್ಲಿ ಬಂಟ ಸಮಾಜ ಬಾಂಧವರು ಬಹುಸಂಖ್ಯೆಯಲ್ಲಿ ವಿವಿಧ ಪ್ರದೇಶಗಳಲ್ಲಿ ನೆಲೆಸಿದ್ದು ಅವರೆಲ್ಲರನ್ನು ಸಂಘದೊಂದಿಗೆ ಬೆಸೆಯಲು, ಸಾಂಘಿಕ ವ್ಯಾಪ್ತಿಯಲ್ಲಿ ಸೇರಿಸಲು ಬಂಟ್ಸ್ ಅಸೋಸಿಯೇಶನ್ ಅನಿವಾರ್ಯವಾಗಿತ್ತು. ಪ್ರದೇಶ, ವ್ಯಾಪ್ತಿ ವಿಸ್ತಾರವಾದಂತೆ ಕಾಲಕಾಲಕ್ಕೆ ಸಾಂಘಿಕ ವ್ಯವಸ್ಥೆಯನ್ನು ಸಮತೋಲನಗೊಳಿಸಲು, ಸಮಾಜ ಉತ್ತಮ ವ್ಯವಸ್ಥೆಯಲ್ಲಿ ನಡೆಯಬೇಕೆಂಬ ಉದ್ದೇಶವನ್ನು ಈಡೇರಿಸುವಲ್ಲಿ ಸಂಸ್ಥೆಗಳ ಪಾತ್ರ ದೊಡ್ಡದಾಗಿದೆ. ಪುಣೆಯಲ್ಲಿ ಪಿಂಪ್ರಿ ಚಿಂಚಾÌಡ್ ಬಂಟರ ಸಂಘವಿರಲಿ, ಬಂಟ್ಸ್ ಅಸೋಸಿಯೇಶನ್ ಇರಲಿ ಇಲ್ಲಿರುವ ಬಂಟರಾದ ನಾವೆಲ್ಲರೂ ಒಗ್ಗಟ್ಟಿನಿಂದ ಯಾವುದೇ ಭೇದ-ಭಾವವಿಲ್ಲದೆ ಗೌರವಯುತವಾಗಿ ಭಾವೈಕ್ಯದಿಂದ ಒಗ್ಗಟ್ಟಾಗಿದ್ದೇವೆ ಎಂಬುದು ಇಲ್ಲಿ ಮುಖ್ಯವಾಗಿದೆ. ಪುಣೆಯಲ್ಲಿರುವ ಬಂಟ ಬಾಂಧವರು ಉದ್ಯೋಗ, ವ್ಯವಹಾರಗಳೊಂದಿಗೆ ಉತ್ತಮ ಸಾಧನೆಗೈದು ಗೌರವಾನ್ವಿತರಾಗಿ, ಆದರ್ಶರಾಗಿ ಗುರುತಿಸಿಕೊಂಡಿರುತ್ತಾರೆ. ಬಹಳ ವರ್ಷದಿಂದ ಪುಣೆಯ ಸಮಾಜ ಬಾಂಧವರಿಗೆ ತಮ್ಮದೇ ಆದ ಸಮಾಜದ ಸಾಂಸ್ಕೃತಿಕ ಕೇಂದ್ರವೊಂದರ ಅಗತ್ಯವನ್ನು ಮನಗಂಡು ನಮ್ಮ ಹಿರಿಯರು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರು. ಆದರೆ ಇದೀಗ ಅಂತಹ ಕನಸು ಈಡೇರಿ ನಮ್ಮದೇ ಅಭಿಮಾನದ ಬಂಟರ ಭವನ ನಿರ್ಮಾಣಗೊಂಡು ಎಪ್ರಿಲ್ 7ಹಾಗೂ 8 ರಂದು ಲೋಕಾರ್ಪಣೆಗೊಳ್ಳುತ್ತಿರುವುದು ಸಮಸ್ತ ಜನತೆಗೆ ಹೆಮ್ಮೆಯ ವಿಷಯವಾಗಿದೆ. ಎರಡು ದಿನಗಳು ನಡೆಯುವ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ ಬಂಟ್ಸ್ ಅಸೋಸಿಯೇಶನ್‌ನ ಎಲ್ಲ ಪದಾಧಿಕಾರಿಗಳು, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸರ್ವ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಬೇಕು. ಅಂತೆಯೇ ಪ್ರತಿಯೋರ್ವ ಸಮಾಜ ಬಾಂಧವರನ್ನೂ ಸಮಾರಂಭಕ್ಕೆ ಆಮಂತ್ರಿಸುವ ಕಾರ್ಯ ಆಗಬೇಕು ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ನುಡಿದರು.
ಅವರು ಮಾ. 24ರಂದು ನಗರದ ಅಲ್ಪಾಬಚತ್ ಸಾಂಸ್ಕೃತಿಕ ಭವನದ ಕಾನ್ಫರೆನ್ಸ್ ಹಾಲ್‌ನಲ್ಲಿ ಬಂಟ್ಸ್ ಅಸೋಸಿಯೇಶನ್ ಆಯೋಜಿಸಿದ ಪುಣೆ ಬಂಟರ ಭವನದ ಉದ್ಘಾಟನಾ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದು ಆಮಂತ್ರಣ ಪತ್ರ ನೀಡಿ ಮಾತನಾಡಿದ ಇವರು, ಭವನದ ನಿರ್ಮಾಣಕ್ಕೆ ಎಲ್ಲೆಡೆಯಿಂದ ಉತ್ತಮ ಸಹಕಾರ, ದೇಣಿಗೆ ಸಿಕ್ಕಿರುವಂತೆಯೇ ಬಂಟ್ಸ್ ಅಸೋಸಿಯೇಶನ್ ಪದಾಧಿಕಾರಿಗಳ ಹಾಗೂ ಈ ಪರಿಸರದ ಸಮಾಜ ಬಾಂಧವರು ಹೃದಯ ಶ್ರಿಮಂತಿಕೆಯಿಂದ ಭವನಕ್ಕೆ ದೇಣಿಗೆ ನೀಡಿ ಬೆಂಬಲಿಸಿದ್ದಾರೆ. ಅದಕ್ಕಾಗಿ ಈ ಸಂದರ್ಭದಲ್ಲಿ ನಿಮ್ಮೆಲ್ಲರ ಸಮಾಜದ ಮೇಲಿನ ಅಭಿಮಾನಕ್ಕೆ, ಪ್ರೀತಿಗೆ, ಹೃದಯವಂತಿಕೆಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದರು.
ಬಂಟ್ಸ್ ಅಸೋಸಿಯೇಶನ್ ಪುಣೆ ಅಧ್ಯಕ್ಷರಾದ ನಾರಾಯಣ ಕೆ. ಶೆಟ್ಟಿ ಅವರು ಉಪಸ್ಥಿತರಿದ್ದು ಮಾತನಾಡಿ ಸಂತೋಷ್ ಶೆಟ್ಟಿಯವರ ಅದ್ಭುತ ಕಾರ್ಯವೈಖರಿಯೊಂದಿಗೆ, ಅವಿರತ ಶ್ರಮದೊಂದಿಗೆ ನಮ್ಮ ಹೆಮ್ಮೆಯ ಬಂಟರ ಭವನ ಉದ್ಘಾಟನಾ ಹಂತಕ್ಕೆ ಬಂದು ನಿಂತಿರುವುದಕ್ಕೆ ನಿಜವಾಗಿಯೂ ಅಭಿಮಾನವಾಗುತ್ತಿದೆ. ನಮ್ಮ ಪುಣೆ ಬಂಟರ ಏಕತೆಗೆ ಸಾಕ್ಷಿಯಾಗಿ ಈ ಭವನ ತಲೆಯೆತ್ತಿದ್ದು ನಮ್ಮೆಲ್ಲರ ಭಾಗ್ಯವಾಗಿದೆ. ಪುಣೆಯಲ್ಲಿರುವ ಪ್ರತಿಯೊಬ್ಬ ತುಳು ಕನ್ನಡಿಗರಿಗೂ ಇದರ ಪ್ರಯೋಜನ ಸಿಗಲಿದೆ. ಇದರ ಉದ್ಘಾಟನಾ ಸಮಾರಂಭಕ್ಕೆ ನಾವೆಲ್ಲರೂ ಭಾಗವಹಿಸಿ ನಾವು ಅತಿಥಿಗಳೆಂದು ಭಾವಿಸದೆ ಬಂದ ಅತಿಥಿಗಣ್ಯರ ಸ್ವಾಗತಕ್ಕೆ ಆದ್ಯತೆ ನೀಡಬೇಕಾಗಿದೆ. ಈ ಸಂಭ್ರಮದ ಕಾರ್ಯಕ್ರಮವು ನಮ್ಮ ಮನೆಯ ಕಾರ್ಯಕ್ರಮವೆಂದು ಭಾವಿಸಿ ಸಹಕಾರ ನೀಡಬೇಕಾಗಿದೆ. ನಮ್ಮ ಸಮಾಜದ ಮೇಲಿನ ಆಸ್ಥೆ, ಪ್ರೀತಿಯ ಭಾವನೆ, ಬಂಧುತ್ವದ ಭಾವ ಸದಾ ನಮ್ಮಲ್ಲಿರಲಿ. ಬಂಟರ ಭವನದ ಲೋಕಾರ್ಪಣಾ ಸಮಾರಂಭ ಶಿಸ್ತುಬದ್ಧತೆಯಿಂದ ಸುಂದರ ಕಾರ್ಯಕ್ರಮವಾಗಿ ದಾಖಲುಗೊಳ್ಳಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪುಣೆ ಬಂಟರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಕೆ. ಹೆಗ್ಡೆ, ಗೌರವ ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಭವನದ ಉದ್ಘಾಟನಾ ಸಮಾರಂಭದ ಸಮಿತಿ ರಚನಾ ಉಸ್ತುವಾರಿ ಚಂದ್ರಶೇಖರ ಶೆಟ್ಟಿ ನಿಟ್ಟೆ, ಪದಾಧಿಕಾರಿಗಳಾದ ಸತೀಶ್ ಶೆಟ್ಟಿ, ಗಣೇಶ್ ಹೆಗ್ಡೆ, ವಿವೇಕಾನಂದ ಶೆಟ್ಟಿ ಆವರ್ಸೆ, ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷರಾದ ಜಯ ಶೆಟ್ಟಿ ಮಿಯ್ನಾರು, ಉಪಾಧ್ಯಕ್ಷರಾದ ಮಿಯ್ನಾರು ಆನಂದ್ ಶೆಟ್ಟಿ, ನ್ಯಾಯವಾದಿ ಸುರೇಶ್ ಶೆಟ್ಟಿ, ಸಂಘದ ಸದಸ್ಯರಾದ ಉಷಾ ಕುಮಾರ್ ಶೆಟ್ಟಿ, ಸಂಕಯ್ಯ ಶೆಟ್ಟಿ, ಭಾಸ್ಕರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ತಾರಾನಾಥ ರೈ ಸೂರಂಬೈಲ್, ಸತೀಶ್ ಶೆಟ್ಟಿ ಎರವಾಡ, ನಾಗರಾಜ್ ಶೆಟ್ಟಿ, ಪ್ರಫುಲ್ ಶೆಟ್ಟಿ, ನಿಖೀಲ್ ಎನ್. ಶೆಟ್ಟಿ, ಪ್ರದೀಪ್ ಶೆಟ್ಟಿ, ಅಕ್ಷಿತ್ ರೈ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರಾದ ಸುಜಾತಾ ಎಸ್. ಹೆಗ್ಡೆ, ಸುಧಾ ನಾರಾಯಣ ಶೆಟ್ಟಿ, ಸರೋಜಿನಿ ಜಯ ಶೆಟ್ಟಿ, ಕಾರ್ಯಾಧ್ಯಕ್ಷೆ ಮಲ್ಲಿಕಾ ಆನಂದ್ ಶೆಟ್ಟಿ, ಉಷಾ ಯು. ಶೆಟ್ಟಿ, ಪ್ರಫುಲ್ಲಾ ವಿ. ಶೆಟ್ಟಿ, ದೀಪಾ ಎ. ರೈ, ಉಷಾ ಎಸ್. ಶೆಟ್ಟಿ, ಶರ್ಮಿಳಾ ಟಿ. ರೈ, ಪುಷ್ಪಾ ಆರ್. ಶೆಟ್ಟಿ, ಪ್ರಸಾದಿನಿ ಎಸ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು