ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ದೈನಂದಿನ ಪರಿಷ್ಕರಣೆಯಿಂದ ನಷ್ಟ ಉಂಟಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಪೆಟ್ರೋಲಿಯಂ ಡೀಲರ್ ಸಂಘ ಜು.5ರಂದು ತೈಲ ಕಂಪನಿಗಳಿಂದ ಖರೀದಿ ಸ್ಥಗಿತಗೊಳಿಸಿ ಹೋರಾಟ ನಡೆಸಲು ನಿರ್ಧರಿಸಿದೆ.
ಆದರೆ ಸಂಘದ ಹೋರಾಟಕ್ಕೆ ಅಖೀಲ ಕರ್ನಾಟಕ ಪೆಟ್ರೋಲ್ ಬಂಕ್ ಮಾಲೀಕರ ಸಂಘ ಬೆಂಬಲ ಸೂಚಿಸದ ಕಾರಣ ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಇತರೆಡೆ ಜು.5ರಂದು ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಕಡಿಮೆ.
ಅಂತಾರಾಷ್ಟ್ರೀಯ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ತೀವ್ರ ನಷ್ಟವಾಗುತ್ತಿದೆ. ಆರಂಭದಲ್ಲಿ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗದು ಎಂಬ ಭರವಸೆ ನೀಡಿ 15 ದಿನಕ್ಕೊಮ್ಮೆ ದರ ಪರಿಷ್ಕರಣೆ ವ್ಯವಸ್ಥೆ ಬದಲಾಯಿಸಿಕೊಳ್ಳಲು ಸೂಚಿಸಿತ್ತು.
ಆದರೆ ಈಗ ನಿತ್ಯ ನಷ್ಟ ಉಂಟಾಗುತ್ತಿದೆ. ಆ ಹಿನ್ನೆಲೆಯಲ್ಲಿ ಜು.5ರಂದು ರಾಜ್ಯಾದ್ಯಂತ ಬಂಕ್‌ಗಳಿಗೆ ತೈಲ ಖರೀದಿಸದಿರಲು ನಿರ್ಧರಿಸಲಾಗಿದೆ. ಆ ದಿನ ಲಭ್ಯವಿರುವ ದಾಸ್ತಾನು ಪೂರೈಸಲಾಗುವುದು ಎಂದು ಕರ್ನಾಟಕ ರಾಜ್ಯ ಪೆಟ್ರೋಲಿಯಂ ಡೀಲರ್ ಸಂಘದ ಅಧ್ಯಕ್ಷ ಎಚ್.ಎಸ್.ಮಂಜಪ್ಪ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ ಜು.12ರಂದು ಖರೀದಿ ಹಾಗೂ ವಿತರಣೆ ಸ್ಥಗಿತಗೊಳಿಸಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಕೂಡಲೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ವಿತರಕರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹೋರಾಟವಿಲ್ಲ: ದೈನಂದಿನ ದರ ಪರಿಷ್ಕರಣೆ ವಿರುದ್ಧ ಜು.5ರಂದು ಯಾವುದೇ ರೀತಿಯ ಹೋರಾಟ ನಡೆಸುತ್ತಿಲ್ಲ ಎಂದು ಅಖೀಲ ಕರ್ನಾಟಕ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ರವೀಂದ್ರನಾಥ್ ತಿಳಿಸಿದ್ದಾರೆ.