ಕಾಸರಗೋಡು: ಬಂಟರ ಸಂಘದ ಮಧೂರು ಪಂಚಾಯತ್ ಸಮಾವೇಶ ಸಿರಿಬಾಗಿಲು ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ವಠಾರದಲ್ಲಿ ಕುತ್ತಾರುಗುತ್ತು ರಾಮಕೃಷ್ಣ ಆಳ್ವ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಸದಾನಂದ ರೈ ಅವರು ಬಂಟರು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ನಮ್ಮ ಸಮಾಜದ ಸಂಸ್ಕೃತಿ, ಪರಂಪರೆಗಳನ್ನು ಸಂರಕ್ಷಿಸಲು ಮುಂದಾಗಬೇಕು.
ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಟ್ಟ ಬಳಿಕ ಬಂಟ ಸಮಾಜವು ಕಾಸರಗೋಡಿನಲ್ಲಿ ಅನೇಕ ಕಷ್ಟ ನಷ್ಟಗಳು ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಬಂಟರ ಜನ ಸಂಖ್ಯೆಯಲ್ಲಿ ಕೂಡಾ ಗಣನೀಯವಾಗಿ ಕಡಿತವುಂಟಾಗಿದೆ. ಹೆಚ್ಚಿನವರು ಕಾಸರಗೋಡಿನಿಂದ ವಲಸೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಟ ಸಮಾಜ ಬಾಂಧವರು ಸಂಘಟಿತರಾಗಿ ನಮ್ಮ ಹಕ್ಕುಗಳಿಗೆ ಹೋರಾಟ ಮಾಡಬೇಕಾಗಿದೆ.
ನಮ್ಮ ಸಂಸ್ಕೃತಿ, ಆಚಾರ, ವಿಚಾರ ಅನುಷ್ಠಾನಗಳನ್ನು ಉಳಿಸಿಕೊಳ್ಳುವಲ್ಲಿ ಬಂಟರ ಸಂಘಗಳ ಮೂಲಕ ನಾವೆಲ್ಲರೂ ಒಂದು ಗೂಡಿ ಕಾರ್ಯವೆಸಗಬೇಕಾಗಿದೆ ಎಂದರು. ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಜಿ.ಕೆ.ಶೆಟ್ಟಿ ಬೊಳ್ನಾಡುಗುತ್ತು ಮಾತನಾಡಿ ನಮ್ಮಲ್ಲಿ ಒಗ್ಗಟ್ಟಿದ್ದರೆ ಮಾತ್ರವೇ ಸಮಸ್ಯೆಗಳನ್ನು ಎದುರಿಸಲು ಸಾಧ್ಯವೆಂದರು.
ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು ಪ್ರಾಸ್ತಾವಿಕ ಮಾತನಾಡಿ ಸಮಾವೇಶದ ಔಚಿತ್ಯ ಹಾಗು ಮಧೂರು ಪಂಚಾಯತ್ ಬಂಟರ ಸಂಘದ ಘಟಕವನ್ನು ಪುನಶ್ಚೇತನಗೊಳಿಸಲು ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಪಂಚಾಯತ್ ಘಟಕದ ಕಾರ್ಯದರ್ಶಿ ಮೋಹನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮಹಾಬಲ ರೈ ಕಣ್ಣೂರುಗುತ್ತು, ರವೀಂದ್ರ ರೈ ಶಿರಿಬಾಗಿಲು, ಅಶೋಕ ರೈ ಸೂರ್ಲು, ರಾಮ ಶೆಟ್ಟಿ ಮಾಸ್ಟರ್, ರಮೇಶ್ ಶೆಟ್ಟಿ ಕಾಳ್ಯಂಗಾಡು, ಪುರಂದರ ಶೆಟ್ಟಿ ಮಾಯಿಪ್ಪಾಡಿ, ನಾರಾಯಣ ರೈ ಕುಂದಿಲ, ಪುಳ್ಕೂರು ಶ್ರೀ ಮಹಾದೇವ ಕ್ಷೇತ್ರದ ಅಧ್ಯಕ್ಷ ಶೀನ ಶೆಟ್ಟಿ ಕಜೆ, ರೋಹಿತಾಕ್ಷಿ ಬಿ.ರೈ ಕೂಡ್ಲು, ಶುಭಾ ಶೆಟ್ಟಿ ಮಧೂರು ಮೊದಲಾದವರು ಮಾತನಾಡಿದರು.
ಮಧೂರು ಪಂಚಾಯತ್ ಬಂಟರ ಸಂಘದ ಸಂಚಾಲಕ ಗಣೇಶ್ ರೈ ನಾಯಕ್ಕೋಡು ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.