ಆಳಂದ: ಕೆಲವೊಂದು ಬೆಳೆಗೆ ಸಮಯಕ್ಕೆ ಕುಡಿ ಚಿವುಟುವುದರಿಂದ ಅಧಿ ಕ ಉತ್ಪಾದನೆಗೆ ಸಹಕಾರಿಯಾಗುತ್ತದೆ ಎಂದು ಕೃಷಿ ಪಂಡಿತ ಹಾಲಸುಲ್ತಾನಪುರ ಶರಣಬಸಪ್ಪ ಪಾಟೀಲ ತಿಳಿಸಿದರು. ತಾಲೂಕಿನ ಧಂಗಾಪುರ ಗ್ರಾಮದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಹೊಲದಲ್ಲಿ ತೊಗರಿ ಬೆಳೆಗೆ ಕುಡಿ ಚಿವುಟುವ ಪ್ರಾತ್ಯಕ್ಷಿಕೆಯ ಬಳಿಕ ಗ್ರಾಮದ ಇಂದಿರಾ ಪ್ರಾಥಮಿಕ ಶಾಲಾ ಆವರಣದಲ್ಲಿ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಈ ಕ್ರಮವನ್ನು ದೀರ್ಘಾವಧಿ ಬೆಳೆಯಾದ ತೊಗರಿಯಲ್ಲಿ ಅನುಸರಿಸಿದರೆ ಅಧಿಕ ಇಳುವರಿ ಪಡೆಯಬಹುದು. ತೊಗರಿ ಬಿತ್ತನೆಗೊಂಡ 50 ರಿಂದ 55 ದಿನಗಳ ಬಳಿಕ ಅದರ ಕುಡಿ (ಮೊಗ್ಗೆ) ಚಿವುಟಬೇಕು. ಇದರಿಂದ ಸಸ್ಯದ ಕವಲುಗಳ ಸಂಖ್ಯೆ ಹೆಚ್ಚಾಗಿ ಇಳುವರಿ ಅಡಕವಾಗುತ್ತದೆ ಎಂದರು.
ಈಗಾಗಲೇ ಮೊಗ್ಗೆ ಚಿವುಟುವ ಯಂತ್ರ, ನಳಿ, ನೀರಾವರಿಯಲ್ಲಿ ಕಡಿಮೆ ಖರ್ಚಿನ ಸೋಲಾರ ಯಂತ್ರ, ಹೊಸ ಮಾದರಿಯ ಗೊಬ್ಬರ ಗ್ಯಾಸ್, ದಿಂಡು ಸೇರಿದಂತೆ 21 ಯಂತ್ರಗಳು ಸಿದ್ಧಪಡಿಸಿ ರೈತರಿಗೆ ನೀಡಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ ಮಾತನಾಡಿ, ದುಬಾರಿ ವೆಚ್ಚದಲ್ಲಿ ಕೃಷಿ ಕೈಗೊಳ್ಳುವುದು ರೈತರಿಗೆ ಸಂಕಷ್ಟವಾಗಿದೆ.
ಈ ಮಧ್ಯೆ ತೊಗರಿ ಸೇರಿ ಇನ್ನಿತರ ಬೆಳೆಗೆ ಹೊಸ ತಾಂತ್ರಿಕತೆ ಅಳವಡಿಸಿಕೊಂಡು ಕಡಿಮೆ ಖರ್ಚಿನಲ್ಲಿ ಅಧಿಕ ಉತ್ಪಾದನೆ ಪಡೆಯಲು ಸಾಧ್ಯವಿದೆ. ಅಲ್ಲದೆ ಕೃಷಿಯೊಂದೇ ಬದುಕಿಗೆ ಸಾಕಾಗದು, ಉಪಕಸುಬು ಕೈಗೊಂಡು ಕುಟುಂಬದ ಆರ್ಥಿಕಮಟ್ಟವನ್ನು ಸುಧಾರಿಸಬೇಕು ಎಂದರು. ಇಂದಿರಾ ಸ್ಮಾರಕ ಸೇವಾ ಸಂಸ್ಥೆ ಅಧ್ಯಕ್ಷ ಶಿವಲಿಂಗ ಎಸ್. ತೇಲ್ಕರ್, ಮಲ್ಲಣ್ಣಾ ಗೌಡ ಪಾಟೀಲ, ಕೃಷ್ಣಾ ಮೇಲಕೇರಿ, ಸುಭಾಷ ಕಡಗಂಚಿ, ಶಾಲೆಯ ಮುಖ್ಯ ಶಿಕ್ಷಕಿ ಅಂಬಿಕಾ ಅಷ್ಟಗಿ, ಸಹ ಶಿಕ್ಷಕ ಬಾಬುರಾವ ಆಳಂದ ಹಾಗೂ ಪುತಳಾಬಾಯಿ ತಳವಾರ, ಸಂಗಮ್ಮ ಪುಕ್ಕನ, ಪ್ರೇಮಾಗುಸಾವಿ, ಜಗದೇವಿ ಮೈನಾಳ, ನಾಗಮ್ಮ ಬಟ್ಟರಗಾ ಹಾಗೂ ಗ್ರಾಮದ ರೈತರು ಹಾಜರಿದ್ದರು.