Advertisement

ಸರ್ಕಾರದ ಬೆಳೆಗೆ ಬಂಪರ್‌ ಬೆಲೆ

06:00 AM Jun 04, 2018 | |

ಬೆಂಗಳೂರು: ರೈತರು ತಮ್ಮ ಹೊಲದಲ್ಲಿ ಏನು ಬೆಳೆಯಬೇಕು? ಯಾವ ಪ್ರದೇಶದ ರೈತರು ಯಾವ ಬೆಳೆ ಬೆಳೆಯಬೇಕು? ಮತ್ತು ಯಾವ ಪ್ರಮಾಣದಲ್ಲಿ ಬೆಳೆಯಬೇಕು ಎಂಬ ಬಗ್ಗೆ ಇನ್ನು ರಾಜ್ಯ ಸರ್ಕಾರವೇ ಮಾಹಿತಿ ನೀಡಲಿದೆ. ಅಷ್ಟೇ ಅಲ್ಲ, ಬೆಳೆಯನ್ನು ಬೆಳೆಯುವ ಮೊದಲೇ ರೈತರಿಗೆ ಕನಿಷ್ಠ ಬೆಲೆಯೂ ಖಾತರಿಯಾಗಲಿದೆ!

Advertisement

ವಿದೇಶಗಳಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಉತ್ಪಾದನೆ ಕೋಟಾ ಪದ್ಧತಿ ಅಥವಾ ಕೂಪನ್‌ ಪದ್ಧತಿಯನ್ನು ರಾಜ್ಯದ ಕೃಷಿ ಕ್ಷೇತ್ರದಲ್ಲೂ ಜಾರಿಗೆ ತರುವ ಚಿಂತನೆ ನಡೆದಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಾಲ ಮನ್ನಾದ ಭರವಸೆ ನೀಡಿದ ಬೆನ್ನಲ್ಲೇ ಸರ್ಕಾರದ ಕಡೆಯಿಂದ ವಿನೂತನ ಕೃಷಿ ಪದ್ಧತಿ ಜಾರಿಗೊಳಿಸುವ ಆಲೋಚನೆ ಹೊರಬಿದ್ದಿದೆ. ರಾಜ್ಯ ಕೃಷಿ ಬೆಲೆ ಆಯೋಗ ಈ ನಿಟ್ಟಿನಲ್ಲಿ ಯೋಜನೆ ಸಿದ್ಧಪಡಿಸುತ್ತಿದೆ.

ಈಗ ಆಗುತ್ತಿರುವ ಸಮಸ್ಯೆ ಏನು?
ವಾಣಿಜ್ಯ ಬೆಳೆಗಳಾದ, ಕಬ್ಬು, ಮಾವು, ಟೊಮೆಟೊ, ಈರುಳ್ಳಿ ಬೆಳೆಯುವ ಪ್ರಮಾಣ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಆದರೆ, ಆಹಾರ ಭದ್ರತೆಗೆ ಅಗತ್ಯವಿರುವ ಭತ್ತ, ರಾಗಿ, ಜೋಳದಂತಹ ಬೆಳೆಗಳ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಅಲ್ಲದೆ ಏಕಕಾಲಕ್ಕೆ ಒಂದೇ ಬೆಳೆ ನಿರೀಕ್ಷೆಗೂ ಮೀರಿ ಮಾರುಕಟ್ಟೆಗೆ ಬರುವ ಪರಿಣಾಮ, ಬೆಲೆ ಇಲ್ಲದೇ ರೈತರು ಉತ್ಪನ್ನ ಬೀದಿಗೆ ಸುರಿಯುತ್ತಾರೆ.

ಕಂಡುಕೊಂಡ ಪರಿಹಾರ ಏನು?
ಕೃಷಿ ಬೆಲೆ ಆಯೋಗ ರಾಜ್ಯವನ್ನು 10 ಕೃಷಿ ಪರಿಸರ ವಲಯಗಳನ್ನಾಗಿ ವಿಂಗಡಿಸಿದೆ. ಈ ವಲಯಗಳಲ್ಲಿನ ಮಳೆಯ ಪ್ರಮಾಣ, ಹವಾಮಾನ ಆಧರಿಸಿ ಯಾವ ಪ್ರದೇಶದಲ್ಲಿ ಯಾವ ಮಾದರಿಯ ಬೆಳೆ ಬೆಳೆಯುವುದು ಸೂಕ್ತ ಎಂಬ ಕುರಿತು ಅಧ್ಯಯನ ನಡೆಸಿದೆ. ಆಯಾ ವಲಯಕ್ಕೆ ಸರಿಹೊಂದುವ ಬೆಳೆಗಳ ಬಗ್ಗೆ ರೈತರಿಗೆ ಸೂಚಿಸಲು ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಕಾರ್ಯ ನಿರ್ವಹಣಾಧಿಕಾರಿ ನೇತೃತ್ವದಲ್ಲಿ ರೈತರನ್ನೊಳಗೊಂಡ ತಜ್ಞರ ಸಮಿತಿ ರಚಿಸಲು ಯೋಜನೆ ರೂಪಿಸಿದೆ. ನೀರಾವರಿ ಇರುವ ಪ್ರದೇಶದಲ್ಲಷ್ಟೇ ಕಬ್ಬು, ಹಣ್ಣು, ತರಕಾರಿ ಬೆಳೆ ಬೆಳೆಯಲು ರೈತರಿಗೆ ಸೂಚಿಸಲಾಗುತ್ತದೆ. ಹೊಸ ಕೂಪನ್‌ ಪದ್ಧತಿಯಡಿ ಆಯಾ ವಲಯಗಳಲ್ಲಿನ ಬೆಳೆಗಳ ಉತ್ಪಾದನೆ ಪ್ರಮಾಣ ಹಾಗೂ ಕನಿಷ್ಠ ಬೆಲೆಯನ್ನು ಸರ್ಕಾರ ಮೊದಲೇ ನಿಗದಿಪಡಿಸುತ್ತದೆ.

Advertisement

ರೈತರು ಸರ್ಕಾರ ಸೂಚಿಸುವ ಬೆಳೆ ಬೆಳೆದಾಗ ಮಾರುಕಟ್ಟೆಯಲ್ಲಿ ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ಬೆಲೆ ಚಾಲ್ತಿಯಲ್ಲಿದ್ದರೆ, ಸರ್ಕಾರವೇ ಬೆಂಬಲ ಬೆಲೆ ನೀಡಿ ಖರೀದಿ ಮಾಡಲಿದೆ. ಹೆಚ್ಚಿನ ಬೆಲೆಯಿದ್ದರೆ ರೈತರು ಮಾರುಕಟ್ಟೆಗೆ ನೇರವಾಗಿ ಮಾರಾಟ ಮಾಡಬಹುದಾಗಿರುತ್ತದೆ.

ರಾಜ್ಯ ಸರ್ಕಾರ ಜಿಲ್ಲಾವಾರು ಬೆಳೆ ನಿಗದಿ ಮಾಡಲು ತೀರ್ಮಾನಿಸಿರುವುದು ಉತ್ತಮ ಬೆಳವಣಿಗೆ. ಈಗಾಗಲೇ ಕೃಷಿ ಬೆಲೆ ಆಯೋಗ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಆಯಾ ಪ್ರದೇಶದ ಹವಾಮಾನ ಮತ್ತು ಮಣ್ಣಿನ ಗುಣದ ಆಧಾರದಲ್ಲಿ ಬೆಳೆ ಬೆಳೆಯುವುದರಿಂದ ರೈತರಿಗೂ ಹೆಚ್ಚಿನ ಅನುಕೂಲವಾಗಲಿದೆ. ಅಲ್ಲದೇ ಸರ್ಕಾರವೇ ಬಿತ್ತನೆಗೆ ಸೂಚನೆ ನೀಡುವುದರಿಂದ ಬೆಲೆ ಕುಸಿತ ತಡೆಯಲು ಅನುಕೂಲವಾಗುತ್ತದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಟಿ.ಎನ್‌. ಪ್ರಕಾಶ್‌ ಕಮ್ಮರಡಿ ಹೇಳುತ್ತಾರೆ.

ಯಾವ ವಲಯದಲ್ಲಿ ಯಾವ ಬೆಳೆ?
– ಈಶಾನ್ಯ ವಲಯ (ಬೀದರ್‌, ಕಲಬುರಗಿ ಜಿಲ್ಲೆಯ ಕೆಲವು ಭಾಗ)- ಜೋಳ, ಕಡಲೆ, ತೊಗರಿ, ಸೂರ್ಯಕಾಂತಿ
– ಈಶಾನ್ಯ ಭಾಗ ಒಣ ಪ್ರದೇಶ (ರಾಯಚೂರು ಮತ್ತು ಕಲಬುರಗಿ ಜಿಲ್ಲೆ) -ಹೈಬ್ರಿàಡ್‌ ಜೋಳ, ಬಟಾಣಿ, ಸೂರ್ಯಕಾಂತಿ
– ಉತ್ತರ ಒಣ ವಲಯ (ವಿಜಯಪುರ, ಬಳ್ಳಾರಿ ಜಿಲ್ಲೆಗಳು, ಹಾವೇರಿ, ಬೆಳಗಾವಿ, ಧಾರವಾಡ, ರಾಯಚೂರು ಜಿಲ್ಲೆಯ ಕೆಲವು ಭಾಗ) – ಸಜ್ಜೆ, ಸೇಂಗಾ, ಹೆಸರು, ಬಟಾಣಿ, ಜೋಳ, ಏಲಕ್ಕಿ
– ಕೇಂದ್ರ ಒಣ ಪ್ರದೇಶ (ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಕೆಲವು ಭಾಗ) – ರಾಗಿ, ಬಟಾಣಿ, ಸೇಂಗಾ, ಹೈಬ್ರಿàಡ್‌ ಜೋಳ
-ಪೂರ್ವ ಒಣ ವಲಯ ( ಕೋಲಾರ, ಬೆಂಗಳೂರು, ರಾಮನಗರ ಜಿಲ್ಲೆ) -ರಾಗಿ, ಸೀಸಮ್‌, ಹುರುಳಿ,ಗೋವಿನಜೋಳ,  ಸೇಂಗಾ, ಬಟಾಣಿ
-ದಕ್ಷಿಣ ಒಣ ಪ್ರದೇಶ (ಮಂಡ್ಯ ಜಿಲ್ಲೆ, ಹಾಸನ, ಮೈಸೂರು, ತುಮಕೂರು ಕೆಲವು ಭಾಗ) -ರಾಗಿ, ಸೇಂಗಾ, ಬಟಾಣಿ, ಹೈ ಬ್ರಿàಡ್‌ ಜೋಳ, ಸೂರ್ಯಕಾಂತಿ
– ದಕ್ಷಿಣ ಪರಿವರ್ತನ ವಲಯ (ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು ಜಿಲ್ಲೆಯ ಕೆಲವು ಭಾಗ) -ಆಲೂಗಡ್ಡೆ, ರಾಗಿ, ಮೆಣಸಿನಕಾಯಿ, ಹೈ ಬ್ರಿàಡ್‌ ಹತ್ತಿ,ಹೆಸರು, ಹುರುಳಿ
– ಉತ್ತರ ಪರಿವರ್ತನ ವಲಯ (ಧಾರವಾಡ, ಬೆಳಗಾವಿ ಜಿಲ್ಲೆ ) -ಭತ್ತ, ಗೋಧಿ, ಜೋಳ, ಸೂರ್ಯಕಾಂತಿ, ಕಡಲೆ, ಹತ್ತಿ, ಮೆಣಸಿನಕಾಯಿ, ಈರುಳ್ಳಿ
–  ಪರ್ವತ ಪ್ರದೇಶ (ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ಬೆಳಗಾವಿ, ಹಾಸನ, ಪಶ್ಚಿಮ ಘಟ್ಟ ಮತ್ತು ಮಲೆನಾಡು ಪ್ರದೇಶ ) – ಭತ್ತ, ಅಡಿಕೆ, ಮೆಣಸು, ಬಾಳೆ, ಏಲಕ್ಕಿ, ಹೈಬ್ರಿàಡ್‌ ಜೋಳ.
– ಕರಾವಳಿ ವಲಯ (ದಕ್ಷಿಣ ಕನ್ನಡ, ಉತ್ತರ ಕನ್ನಡ) – ಭತ್ತ, ಏಲಕ್ಕಿ, ಕೊಕೊ, ಸೀಸಮ್‌, ಬಾಳೆ, ಮೆಣಸು, ತೆಂಗು

ರೈತರ ಬೆಳೆಗೆ ಸರ್ಕಾರ ಸೂಕ್ತ ಬೆಲೆ ನೀಡುವುದಾದರೆ, ಸರ್ಕಾರವೇ ಬೆಳೆ ನಿಗದಿ ಮಾಡುವುದರ ಬಗ್ಗೆ ಆಕ್ಷೇಪವಿಲ್ಲ. ಆದರೆ, ಸರ್ಕಾರದ ಉದ್ದೇಶ ರೈತರ ಪರವಾಗಿದೆಯೋ ಅಥವಾ ಉದ್ದಿಮೆದಾರರ ಅನುಕೂಲಕ್ಕಾಗಿ ಮಾಡುತ್ತಿದ್ದಾರೋ ಎನ್ನುವುದನ್ನೂ ನೋಡಬೇಕು. ರೈತರ ಬೆಳೆಗೆ ಬೆಲೆ ನಿಗದಿ ಮಾಡುವ ಹೆಸರಿನಲ್ಲಿ ಖಾಸಗಿ ಕಂಪನಿಗಳ ಹಿತಾಸಕ್ತಿ ಕಾಯುವುದಾದರೆ, ನಮ್ಮ ವಿರೋಧವಿದೆ.
– ಕೋಡಿಹಳ್ಳಿ ಚಂದ್ರಶೇಖರ್‌, ರೈತ ಮುಖಂಡ

ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮಾಡುವುದು ಒಳ್ಳೆಯ ಆಲೋಚನೆ. ಆದರೆ, ಅದಕ್ಕೆ ಸಾಕಷ್ಟು ಶ್ರಮ ಪಡಬೇಕು. ಸರ್ಕಾರ ಪುಸ್ತಕದಲ್ಲಿ ಯೋಜನೆ ರೂಪಿಸುವ ಬದಲು ತಳ ಮಟ್ಟದಲ್ಲಿ ರೈತರಿಗೆ ಸೂಕ್ತ ಮಾಹಿತಿ ನೀಡಬೇಕು. ರೈತರ ಬೆಳೆ ಹಾನಿಯಾಗದಂತೆ ವೈಜ್ಞಾನಿಕ ರೀತಿಯಲ್ಲಿ ಸಂಗ್ರಹ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು. ಈ ಯೋಜನೆ ಸರಿಯಾಗಿ ಅನುಷ್ಠಾನಗೊಂಡರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.
– ಡಾ.ಎಸ್‌.ಎ. ಪಾಟೀಲ್‌, ನಿವೃತ್ತ ಕುಲಪತಿ,

ಏನಿದು ಕೂಪನ್‌ ಪದ್ಧತಿ?
ಉತ್ಪಾದನಾ ಕೋಟಾ ಅಥವಾ ಕೂಪನ್‌ ಪದ್ಧತಿ ದಶಕಗಳಿಂದ ವಿದೇಶಗಳಲ್ಲಿ ಕೃಷಿ, ತೈಲ, ಹಾಲು, ಮೀನುಗಾರಿಕೆ, ಕುಕ್ಕುಟೋದ್ಯಮ ಕ್ಷೇತ್ರಗಳಲ್ಲಿ ಚಾಲ್ತಿಯಿದೆ. ಸರ್ಕಾರ ಅಥವಾ ಸಂಸ್ಥೆಯು ನಿಗದಿಪಡಿಸಿದ ಗುರಿಗೆ ತಕ್ಕಂತೆ ಉತ್ಪಾದನೆ ನಡೆಸುವುದೇ ಉತ್ಪಾದನಾ ಕೋಟಾ. ಇದು ಸರ್ಕಾರ ತನಗೆ ಅಗತ್ಯವಿರುವ ವಸ್ತುವಿನ ಉತ್ಪಾದನೆ ಹೆಚ್ಚಿಸಲು ಪ್ರೋತ್ಸಾಹಿಸಬಹುದು, ಇನ್ನು ಕೆಲವು ವಸ್ತುಗಳ ಉತ್ಪಾದನೆಗೆ ಮಿತಿಯನ್ನೂ ಹೇರಲು ಅವಕಾಶವಿರುತ್ತದೆ. ಜತೆಗೆ ಬೆಲೆಯ ಮಟ್ಟ ಕುಸಿಯದಂತೆ ಬೆಂಬಲವನ್ನು ಸರ್ಕಾರ ನೀಡಲಿದೆ. ಇದರಿಂದಾಗಿ ಅನಗತ್ಯವಾಗಿ ಹೆಚ್ಚುವರಿ ಉತ್ಪಾದನೆಯಾಗುವುದಿಲ್ಲ. ಕೊರತೆಯೂ ಉಂಟಾಗುವುದಿಲ್ಲ. ಬೆಲೆಯ ಏರಿಳಿತ ನಿಯಂತ್ರಣಕ್ಕೆ ಬರುತ್ತದೆ. ಭಾರತದಲ್ಲಿ ತಂಬಾಕು ಬೆಳೆಯನ್ನು ನಿಗ್ರಹಿಸುವ ಸಲುವಾಗಿ ಬಹಳ ಹಿಂದೆಯೇ ಕೋಟಾ ಪದ್ಧತಿ ಜಾರಿಗೆ ತರಲಾಗಿದೆ. ಸೀಮಿತ ಪ್ರದೇಶಗಳಲ್ಲಷ್ಟೇ ತಂಬಾಕು ಬೆಳೆಯಲು ನಮ್ಮಲ್ಲಿ ಅವಕಾಶ ನೀಡಲಾಗಿದೆ.

ವಿದೇಶಗಳಲ್ಲಿ ಎಲ್ಲೆಲ್ಲಿದೆ?
ಗಲ್ಫ್ ರಾಷ್ಟ್ರಗಳ ಒಪೆಕ್‌ ಒಕ್ಕೂಟ ತೈಲ ಉತ್ಪಾದನೆಯನ್ನು ಇದೇ ಪದ್ಧತಿಯಡಿ ನಡೆಸುತ್ತದೆ. ನೆದರ್ಲ್ಯಾಂಡ್‌, ನ್ಯೂಜಿಲ್ಯಾಂಡ್‌, ಕೆನಡಾ ಮತ್ತು ಅಮೆರಿಕದಂತಹ ದೇಶಗಳಲ್ಲಿ ಮೀನುಗಾರಿಕೆಯೂ ಇದೇ ಮಾದರಿಯಲ್ಲಿ ನಡೆಯುತ್ತದೆ. ಇಸ್ರೇಲ್‌, ಚೀನಾ, ಐರೋಪ್ಯ ಒಕ್ಕೂಟಗಳು ಕೃಷಿಯಲ್ಲಿ ಕೋಟಾ ಪದ್ಧತಿಯನ್ನು ಅಳವಡಿಸಿಕೊಂಡಿವೆ. ಕೃಷಿಯೊಂದಿಗೆ ಹಾಲು, ಕುಕ್ಕುಟೋದ್ಯಮಕ್ಕೂ ವಿಸ್ತರಿಸಿಕೊಂಡಿರುವ ಐರೋಪ್ಯ ಒಕ್ಕೂಟ ಇದನ್ನು ಕಾಮನ್‌ ಅಗ್ರಿಕಲ್ಚರ್‌ ಪಾಲಿಸಿ (ಸಿಎಪಿ) ಎಂದು ಕರೆಯುತ್ತದೆ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next