Advertisement

ಪ್ರೊ ಕಬಡ್ಡಿ: ಬುಲ್ಸ್‌, ಮುಂಬಾ ಸೆಮಿಗೆ ಲಗ್ಗೆ

10:35 AM Oct 16, 2019 | sudhir |

ಅಹ್ಮದಾಬಾದ್‌: ಪವನ್‌ ಸೆಹ್ರಾವತ್‌ ಅವರ ಬೆಂಕಿ-ಬಿರುಗಾಳಿಯಂತಹ ರೈಡಿಂಗ್‌ನಿಂದಾಗಿ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ 7ನೇ ಆವೃತ್ತಿ ಪ್ರೊ ಕಬಡ್ಡಿ ಕೂಟದ ಸೆಮಿಫೈನಲ್‌ಗೆ ಲಗ್ಗೆ ಇರಿಸಿದೆ.

Advertisement

ಸೋಮವಾರ ನಡೆದ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಬುಲ್ಸ್‌ 48-45 ಅಂಕಗಳ ರೋಚಕ ಹೋರಾಟದಲ್ಲಿ ಯುಪಿ ಯೋಧಾ ತಂಡಕ್ಕೆ ನೀರು ಕುಡಿಸಿತು. ಪೂರ್ಣಾವಧಿಯಲ್ಲಿ ಪಂದ್ಯ 36-36 ಅಂಕಗಳಿಂದ ಟೈ ಆಗಿತ್ತು. ಅನಂತರದ ತಲಾ 3 ನಿಮಿಷಗಳ ಹೆಚ್ಚುವರಿ ಅವಧಿಯಲ್ಲಿ ಬೆಂಗಳೂರು ಬುಲ್ಸ್‌ ಗೆ ಅದೃಷ್ಟ ಕೈ ಹಿಡಿಯಿತು. ಈ ವಿಜಯದೊಂದಿಗೆ ಬೆಂಗಳೂರು ಬುಲ್ಸ್‌ ಅ. 16ರಂದು ನಡೆಯಲಿರುವ ಸೆಮಿಫೈನಲ್‌ನಲ್ಲಿ ಬಲಿಷ್ಠ ದಬಾಂಗ್‌ ಡೆಲ್ಲಿ ತಂಡವನ್ನು ಎದುರಿಸಲಿದೆ.

ದಿನದ ದ್ವಿತೀಯ ಎಲಿಮಿನೇಟರ್‌ನಲ್ಲಿ ಯು ಮುಂಬಾ 46-38 ಅಂತರದಿಂದ ಹರ್ಯಾಣ ಸ್ಟೀಲರ್ಗೆ ಸೋಲುಣಿಸಿ ದ್ವಿತೀಯ ಸೆಮಿಫೈನಲ್‌ಗೆ ಅಣಿಯಾಯಿತು. ಇಲ್ಲಿ ಮುಂಬಾ ತಂಡ ಬೆಂಗಾಲ್‌ ವಿರುದ್ಧ ಸೆಣಸಲಿದೆ.

ಪವನ್‌ ಆಕ್ರಮಣಕ್ಕೆ ಸಾಟಿಯಿಲ್ಲ
ಪವನ್‌ ಸೆಹ್ರಾವತ್‌ ಎಂದಿನ ಶೈಲಿಯಲ್ಲೇ ಅಬ್ಬರದ ರೈಡಿಂಗ್‌ ಪ್ರದರ್ಶಿಸಿದರು. ಇವರ ಸಾಹಸಮಯ ರೈಡಿಂಗ್‌ನಿಂದಾಗಿಯೇ ತಂಡ ಗೆಲುವು ಸಾಧಿಸಿಕೊಂಡಿತು. ಒಟ್ಟಾರೆ 25 ರೈಡಿಂಗ್‌ ನಡೆಸಿದ ಪವನ್‌ ಸೆಹ್ರಾವತ್‌ 18 ಟಚ್‌ ಪಾಯಿಂಟ್‌, 2 ಬೋನಸ್‌ ಸೇರಿದಂತೆ ಒಟ್ಟು 20 ರೈಡಿಂಗ್‌ ಅಂಕ ಕಲೆಹಾಕಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಸೆಹ್ರಾವತ್‌ ಅತ್ಯಾಕರ್ಷಕ ರೈಡಿಂಗ್‌, ಕೆಚ್ಚೆದೆಯ ಹೋರಾಟದಿಂದ ಅಭಿಮಾನಿಗಳ ಗಮನ ಸೆಳೆದರು.

ಸುಮಿತ್‌ ಸಿಂಗ್‌ (7 ಅಂಕ) ಅದ್ಭುತ ಟ್ಯಾಕಲ್‌ ನಡೆಸಿ ರಕ್ಷಣಾ ವಿಭಾಗದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದರು. ಉಳಿದಂತೆ ಮಹೇಂದ್ರ ಸಿಂಗ್‌ (4 ಟ್ಯಾಕಲ್‌ ಅಂಕ), ಸೌರವ್‌ ನಂದಲ್‌ (2 ಟ್ಯಾಕಲ್‌ ಅಂಕ) ಹಾಗೂ ಅಮಿತ್‌ ಶೆರಾನ್‌ (2 ಟ್ಯಾಕಲ್‌ ಅಂಕ) ಗಮನ ಸೆಳೆದರು. ಆದರೆ ತಾರಾ ಆಟಗಾರ ರೋಹಿತ್‌ ಕುಮಾರ್‌ ಬದಲಿ ಆಟಗಾರನಾಗಿ ಕಣಕ್ಕಿಳಿದು 3 ರೈಡಿಂಗ್‌ ಅಂಕ ಪಡೆದರು.

Advertisement

ರಿಷಾಂಕ್‌, ಶ್ರೀಕಾಂತ್‌ ಹೋರಾಟ ವ್ಯರ್ಥ
ಯುಪಿ ಯೋಧಾ ಅಪ್ರತಿಮ ಆಟ ಪ್ರದರ್ಶಿಸಿ ಎರಡು ಮೂರು ಸಲ ಒಟ್ಟಾರೆ ಅಂಕದಲ್ಲಿ ಬೆಂಗಳೂರಿಗಿಂತ ಹೆಚ್ಚು ಅಂಕ ಸಂಪಾದಿಸಿ ಮುನ್ನಡೆಯಲ್ಲಿತ್ತು. ಆದರೆ ಬುಲ್ಸ್‌ ಪರ ಪವನ್‌ ಸೆಹ್ರಾವತ್‌ ಪ್ರಚಂಡ ರೈಡಿಂಗ್‌ ನಡೆಸಿ ಯುಪಿಗೆ ಸಿಂಹಸ್ವಪ್ನರಾಗಿ ಪರಿಣಮಿಸಿದರು. ಯುಪಿ ಪರ ರಿಷಾಂಕ್‌ ದೇವಾಡಿಗ (11 ರೈಡಿಂಗ್‌ ಅಂಕ), ಶ್ರೀಕಾಂತ್‌ ಜಾಧವ್‌ (9 ರೈಡಿಂಗ್‌ ಅಂಕ) ಅಪ್ರತಿಮ ಹೋರಾಟ ನಡೆಸಿದರೂ ಗೆಲುವು ದಕ್ಕಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next