ಗದಗ: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿರುವ ಹಲವೆಡೆ ರಾಜಕಾಲುವೆಗಳು ಒತ್ತುವರಿಯಾಗಿವೆ. ಕೆಲವರು ರಾಜಕಾಲುವೆಗಳ ಮೇಲೆ ಮನೆ ನಿರ್ಮಿಸಿಕೊಂಡಿದ್ದರೆ, ಮತ್ತಿತರೆಡೆ ವಾಣಿಜ್ಯ ಕಟ್ಟಡಗಳು ತಲೆ ಎತ್ತಿವೆ. ಪರಿಣಾಮ ರಾಜಕಾಲುವೆಗಳ ಸ್ವಚ್ಛತೆಗೆ ತೊಡಕಾಗಿದ್ದು, ಹತ್ತಾರು ಸಮಸ್ಯೆಗಳಿಗೆ ದಾರಿಯಾಗುತ್ತಿದೆ.
ಅವಳಿ ನಗರದ ವಿವಿಧೆಡೆ ರಾಜಕಾಲುವೆಗಳ ಒತ್ತುವರಿಯಾಗಿವೆ. ಇದರಿಂದಾಗಿ ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಸಾಗದೇ ತಗ್ಗು ಪ್ರದೇಶಗಳಮನೆ ಹಾಗೂ ಬಡಾವಣೆಗಳಿಗೆ ನೀರು ನುಗ್ಗಿ, ಜನ ಜೀವನ ಅಸ್ತವ್ಯಸ್ತವನ್ನಾಗಿಸುತ್ತಿದೆ.
ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ರಾಜ ಕಾಲುವೆಗಳ ಮೇಲೆ ನಾನಾ ರೀತಿಯ ಕಟ್ಟಡಗಳು ತಲೆ ಎತ್ತಿವೆ. ರಾಜಕಾಲುವೆಗಳ ಸ್ವಚ್ಛತೆಗೂಪೌರಕಾರ್ಮಿಕರೂ ಪರದಾಡುವಂತಾಗಿದೆ. ಕೆಲವೆಡೆ ಕಾಲುವೆಯಲ್ಲಿ ಇಳಿಯಲು ಜಾಗವಿಲ್ಲ. ಮತ್ತೆಲ್ಲಿಂದಲೋ ರಾಜಕಾಲುವೆಯಲ್ಲೇ ನಡೆದು ಬರುವಂತಾಗುತ್ತದೆ. ರಾಜಕಾಲುವೆಯಲ್ಲಿ ಕಸ, ಹೂಳು ಹೊತ್ತುಕೊಂಡೇ ಮತ್ತದೇ ಸ್ಥಳಕ್ಕೆ ಸಾಗಿಸಬೇಕು. ಹೀಗಾಗಿ ರಾಜಕಾಲುವೆಗಳ ಸ್ವಚ್ಛತೆ ಮತ್ತು ನಿರ್ವಹಣೆ ಸಮರ್ಪಕವಾಗಿ ನಡೆಯದೇ, ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ. ಇಂತಹ ಕಟ್ಟಡಗಳು ಬಹುತೇಕ ಪ್ರಭಾವಿಗಳಿಗೆ ಸಂಬಂಧಿಸಿದ್ದರಿಂದ ಅಧಿಕಾರಿಗಳು ಚಕಾರವೆತ್ತುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ. ಸರ್ಕಾರಿ ಸ್ವತ್ತು, ಅನ್ಯರಿಗೆ ಸಂಪತ್ತು: ಗದಗ-ಬೆಟಗೇರಿ ಅವಳಿ ನಗರದಲ್ಲಿ ಸುಮಾರು 5 ಕಿ.ಮೀ ಉದ್ದದ ಹಲವು ರಾಜ ಕಾಲುವೆಗಳಿದ್ದು, ನಗರದ ತ್ಯಾಜ್ಯ ನೀರು ನರಸಾಪುರ ಕೆರೆಗೆ ಸಂಪರ್ಕ ಕಲ್ಪಿಸುತ್ತಿವೆ. ಈ ಪೈಕಿ ಭೀಷ್ಮ ಕೆರೆಯಿಂದ ಮಾರುಕಟ್ಟೆ ಪ್ರದೇಶದಲ್ಲಿ ಹಾದು ಹೋಗುವ ರಾಜಕಾಲುವೆ, ಟ್ಯಾಗೋರ್ ರೋಡ್, ಕೆ.ಸಿ. ರಾಣಿ ರಸ್ತೆ, ವಕೀಲ ಚಾಳ ಮಾರ್ಗವಾಗಿ ಹರಿಯುವ ದೊಡ್ಡ ಗಟಾರಗಳು ಸಾಕಷ್ಟು ಕಡೆ ಒತ್ತುವರಿಯಾಗಿವೆ.
ಮನೆ ಹಾಗೂ ವಾಣಿಜ್ಯ ಮಳಿಗೆಗಳು ತಲೆ ಎತ್ತಿವೆ. ಅದರಂತೆ ಅವಳಿ ನಗರದ ಬಹುತೇಕರಾಜಕಾಲುವೆಗಳು ಮೂಲ ಸ್ಥಿತಿಯಲ್ಲಿ ಉಳಿದಿಲ್ಲ. ಕೆಲವರು ತಮ್ಮ ಮನೆಗಳಿಗೆ ರಾಜ ಕಾಲುವೆಯನ್ನೇ ಅಡಿಪಾಯವನ್ನಾಗಿಸಿಕೊಂಡರೆ, ಇನ್ನೂ ಕೆಲವರು, ರಾಜಕಾಲುವೆ ಮೇಲೆ ಸುಮಾರು 30 ಅಡಿ ಉದ್ದದಷ್ಟು ಕಾಂಕ್ರೀಟ್‌ನಿಂದ ಬೆಡ್ ಹಾಕಿ, 1 ಬಿಎಚ್‌ಕೆ ಮನೆ ಹಾಗೂ ವಾಣಿಜ್ಯ ಮಳಿಗೆ ನಿರ್ಮಿಸಿಕೊಂಡಿದ್ದಾರೆ. ಮುಖ್ಯ ರಸ್ತೆಯಲ್ಲಿರುವ ಮನೆ- ವಾಣಿಜ್ಯ ಮಳಿಗೆಗಳಿಂದ ಮಾಸಿಕ ಸಾವಿರಾರು ರೂ. ಬಾಡಿಗೆ ಹಣ ಅನಾಯಾಸವಾಗಿ ಜೇಬಿಗಿಳಿಸುತ್ತಿದ್ದಾರೆ ಎನ್ನಲಾಗುತ್ತದೆ.
ಪಾಲನೆಯಾಗದ ಡಿಸಿ ಆದೇಶ: ರಾಜಕಾಲುವೆಗಳ ಒತ್ತುವಾರಿ ಆರೋಪ ವ್ಯಾಪಕವಾಗಿ ಕೇಳಿ ಬಂದಿದ್ದರಿಂದ ಸ್ವತಃ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಸ್ಪಂದಿಸಿದ್ದರು. ಜು.8ರಂದು ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳ ಸಭೆ ನಡೆಸಿ, ಶೀಘ್ರವೇ ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದ್ದರು. ಆದರೆ, ನಾಲ್ಕು ತಿಂಗಳು ಕಳೆದರೂ ಆದೇಶ ಪಾಲನೆಯಾಗದಿರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.
ರಾಜಕಾಲುವೆಗಳು ಎಲ್ಲೆಲ್ಲಿ ಒತ್ತುವರಿಯಾಗಿವೆ ಎಂಬುದುಇನ್ನಷ್ಟೇ ಗುರುತಿಸಬೇಕಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಒತ್ತುವರಿ ತೆರವುಗೊಳಿಸಲು ಕ್ರಮವಹಿಸುತ್ತೇವೆ. –
ರಮೇಶ್ ಜಾಧವ್, ನಗರಸಭೆ ಪೌರಾಯುಕ್ತ
ನಗರದ ಮಾರುಕಟ್ಟೆ ಪ್ರದೇಶದಲ್ಲಿ ರಾಜಕಾಲುವೆ ಬಹುತೇಕ ಅತಿಕ್ರಮಣಗೊಂಡಿದೆ. ಅನ ಧಿಕೃತ ಕಟ್ಟಡಗಳು ಬಹುತೇಕ ಪ್ರಭಾವಿಗಳು, ನಗರಸಭೆ ಮಾಜಿ ಸದಸ್ಯರು ಹಾಗೂ ಸ್ಥಳೀಯ ರಾಜಕಾರಣಿಗಳಿಗೆ ಸಂಬಂಧಿ ಸಿವೆ. ಹೀಗಾಗಿ ಯಾರೊಬ್ಬರೂ ಕ್ರಮ ಕೈಗೊಳ್ಳುತ್ತಿಲ್ಲ. ಇದನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ರಾಜಕಾಲುವೆಗಳ ಅತಿಕ್ರಮ ತೆರವಿಗೆ ಕ್ರಮ ಜರುಗಿಸಬೇಕು.
-ಮುತ್ತಣ್ಣ ಭರಡಿ, ಸಾಮಾಜಿಕ ಹೋರಾಟಗಾರ