ಬಳ್ಳಾರಿ: ಕೋವಿಡ್ ಸೋಂಕು, ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರಿಗೆ ಮಾಸಿಕ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ರಾಜ್ಯ ಕಟ್ಟಡ ಕಾರ್ಮಿಕರ ಸಂಘವು ನಗರದ ಡಿಸಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಕೋವಿಡ್ ಸೋಂಕು ಮೊದಲನೇ ಅಲೆಗಿಂತ ಎರಡನೇ ಅಲೆಯಲ್ಲಿ ಸಾಕಷ್ಟು ಸಾವು-ನೋವು ಸಂಭವಿಸಿದ್ದು, ಸೋಂಕಿಗೆ ಸಿಲುಕಿದ ಹಲವರು ನಿರುದ್ಯೋಗಿಗಳಾಗಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ನೋಂದಾಯಿತ/ವಲಸೆ ಕಾರ್ಮಿಕರ, ಕಟ್ಟಡ ಕಾರ್ಮಿಕ ಕುಟುಂಬಗಳಿಗೆ ಮೂರು ತಿಂಗಳಿಗೆ ಮಾಸಿಕ 10 ಸಾವಿರ ರೂ. ಸಹಾಯಧನ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು
ರಾಜ್ಯಾದ್ಯಂತ ನಿರ್ಮಾಣ ವಲಯದ ಕಾರ್ಮಿಕರು ಅನೇಕ ಹೋರಾಟ ನಡೆಸಿದ್ದರೂ ಸರ್ಕಾರ ಕೇವಲ ರೂ. 3000 ಪರಿಹಾರ ಘೋಷಿಸಿದೆ. ಇದು ರಾಜ್ಯದ ಲಕ್ಷಾಂತರ ನಿರ್ಮಾಣ ವಲಯದ ಕಾರ್ಮಿಕರನ್ನು ಅಸಮಾಧಾನ ಗೊಳಿಸಿದೆ. ಈ ತೀರ್ಮಾನವನ್ನು ತಾವು ಕೂಡಲೇ ಮಾರ್ಪಡಿಸಿಕೂಡಲೇ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮೂರು ತಿಂಗಳಿಗೆ ಮಾಸಿಕ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ಎಐಯುಟಿಯುಸಿ ಸಂಯೋಜಿತ ಕೇಂದ್ರ ಕಾರ್ಮಿಕ ಸಂಘಟನೆ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕ ಸಂಘವು ಆಗ್ರಹಿಸಿದೆ.
ಕಟ್ಟಡ ಕಾರ್ಮಿಕರಿಗೆ 3 ಸಾವಿರ ರೂ. ಪರಿಹಾರ ನೀಡಲು ಮಂಡಲಿ ಆದೇಶ ಹೊರಡಿಸಿ ಒಂದು ತಿಂಗಳು ಕಳೆದರೂ ಬಹುತೇಕ ಕಟ್ಟಡ ಕಾರ್ಮಿಕರ ಖಾತೆಗೆ ಇದುವರೆಗೂ ಪರಿಹಾರದ ಹಣ ಸೇರಿಲ್ಲ. ಆದ್ದರಿಂದ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರ ಖಾತೆಗೆ ಪರಿಹಾರ ನಿಧಿ ಕೂಡಲೇ ತಲುಪಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕ್ಲೇಮ್ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹ ಫಲಾನುಭವಿಗಳ ಖಾತೆಗೆ ಕೂಡಲೇ ಹಣ ಪಾವತಿಸಬೇಕು. ಎಲ್ಲ ಕಟ್ಟಡ ಕಾರ್ಮಿಕರಿಗೂ ಗುಣಮಟ್ಟದ ಆಹಾರ ಪದಾರ್ಥಗಳ ಕಿಟ್‌ನ್ನು ನೀಡಬೇಕು. ಆಹಾರ ಪದಾರ್ಥಗಳ ಕಿಟ್ಟನ್ನುಪಡೆದಿರುವ ಸಾಕಷ್ಟು ಕಟ್ಟಡ ಕಾರ್ಮಿಕರಿಂದ ಆಹಾರ ಪದಾರ್ಥಗಳ ಗುಣಮಟ್ಟದ ಕುರಿತು ದೂರು ನೀಡಲಾಗಿದೆ. ಕಳಪೆ ಆಹಾರ ಪದಾರ್ಥಗಳ ಕಿಟ್‌ನ್ನು ಪಡೆದವರಿಗೆ ಮತ್ತೆ ಗುಣಮಟ್ಟದ ಆಹಾರ ಪದಾರ್ಥಗಳ ಕಿಟ್‌ನ್ನು ನೀಡಬೇಕು. ಕಟ್ಟಡ ಕಾರ್ಮಿಕರಿಗೆ ನೀಡಲು ಉತ್ತೇಜಿಸಿರುವ ಆಹಾರ ಪದಾರ್ಥಗಳ ಕಿಟ್‌ಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿರುವ ದೂರುಗಳು ಬಂದಿರುವುದರಿಂದ ಕೂಡಲೇ ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಬಳಿಕ ಜಿಲ್ಲಾಡಳಿತದ ಮೂಲಕಕಾರ್ಮಿಕ ಸಚಿವ ಶಿವರಾಮ್ ಹೆಬ್ಟಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಎಐಯುಟಿಯುಸಿ ಮುಖಂಡರಾದ ಸುರೇಶ್.ಜಿ, ಕಟ್ಟಡ ಕಾರ್ಮಿಕರಾದ ಎಚ್. ನೀಲಪ್ಪ, ಜಯರಾಜ್, ಜಗದೀಶ್, ವಿಜಯಕುಮಾರ್, ಚಂದ್ರಪ್ಪ, ಓಬಳೇಶ್, ಶೇಖರ್ ಸೇರಿ ಹಲವರು ಇದ್ದರು.