ಧಾರವಾಡ: ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರಿಗೆ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಿಗಬೇಕಾದ ವಿವಿಧ ಸೌಲಭ್ಯ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದಿಂದ ನಗರದ ಡಿಸಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಧಿಕಾರಿ ಮೂಲಕ ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯದಲ್ಲಿ ಉಂಟಾಗಿರುವ ಮರಳು ಅಭಾವದಿಂದ ಕಟ್ಟಡ ಕಾರ್ಮಿಕರು ಕಳೆದ ಕೆಲ ದಿನಗಳಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರು ಯಂತ್ರಗಳ ಮೂಲಕ ಕಟ್ಟಡ ಕಾರ್ಯಕ್ಕೆ ಮುಂದಾಗಿರುವ ಕಾರಣ ಕಾರ್ಮಿಕರು ಆರ್ಥಿಕ ತೊಂದರೆಗೆ ಒಳಗಾಗಿದ್ದಾರೆ.
ಇಂಥ ಸಂದರ್ಭದಲ್ಲಿ ಕಾರ್ಮಿಕರ ನೆರವಿಗೆ ಬರಬೇಕಾದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಸಿಗಬೇಕಾದ ವಿದ್ಯಾರ್ಥಿ ವೇತನ, ವೈದ್ಯಕೀಯ, ಪಿಂಚಣಿ, ಮದುವೆ ಧನಸಹಾಯ ಸೇರಿದಂತೆ ಇತರೆ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. 2016-17ನೇ ಸಾಲಿನ ವಿದ್ಯಾರ್ಥಿ ವೇತನಕ್ಕಾಗಿ ಈಗಾಗಲೇ ಅರ್ಜಿ ಸಲ್ಲಿಸಿ 14 ತಿಂಗಳು ಕಳೆದಿವೆ.
ಶಾಲೆಗಳು ಪ್ರಾರಂಭವಾಗಿದ್ದು, ಇಲಾಖೆ ಅಧಿಕಾರಿಗಳು ಸಕ್ರಮ ಅರ್ಜಿ ವಿಲೇವಾರಿ ಮಾಡಿ ವಿದ್ಯಾರ್ಥಿ ವೇತನದ ಹಣ ಸಂದಾಯಕ್ಕೆ ಮುಂದಾಗುತ್ತಿಲ್ಲ. ಮದುವೆ ಧನಸಹಾಯದ ಅರ್ಜಿಗಳನ್ನು ಅ ಧಿಕಾರಿಗಳು ವಿಲೇವಾರಿ ಮಾಡದೆ ಕಾರ್ಮಿಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಟ್ಟಡ ಕಾರ್ಮಿಕರನ್ನು ಇಎಸ್‌ಐ ವ್ಯಾಪ್ತಿಗೆ ಒಳಪಡಿಸಬೇಕು. ಮನೆ ಇಲ್ಲದ ನೋಂದಾಯಿತ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ನಿವೇಶನ ನೀಡಬೇಕು. ನಿಯಮ 42ರ ಪ್ರಕಾರ ಕಾರ್ಮಿಕರು ಮನೆ ಕಟ್ಟಿಸಿಕೊಳ್ಳಲು ಹಾಗೂ ಜಾಗ ಖರೀದಿಸಲು 50 ಸಾವಿರ ರೂ. ಧನಸಹಾಯ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಸಂಘದ ಕಾರ್ಯದರ್ಶಿ ಜಿ.ಎಸ್. ಕರಿಯಣ್ಣವರ, ಇಸ್ಮಾಯಿಲ್ ದೊಡ್ಡವಾಡ, ಗುಲಾಬಸಾಬ ಸೊಲ್ಲಾಪುರ, ಶಿವಯ್ಯ ಪೂಜಾರಿ, ಲಕ್ಷ್ಮಣ ಮಾಣಿಕ, ವಿರೂಪಾಕ್ಷಿ ಚವ್ಹಾಣ, ಮಹಾದೇವಪ್ಪ ಗೋಳಿಗೌಡ, ಖಲೀಲ ಅಹ್ಮದ್ ಹವಲ್ದಾರ್, ಫಕ್ಕೀರಪ್ಪ ಹುಲ್ಲೂರ, ಶಂಕ್ರಪ್ಪ ಪೂಜಾರ ಇತರರಿದ್ದರು.