Advertisement

ಕುಂದಾಪುರ: ಸರಕಾರಿ ಆಸ್ಪತ್ರೆ ವಾಕ್‌ ಶ್ರವಣ ಕೇಂದ್ರಕ್ಕೆ ಕಟ್ಟಡ ಸಿದ್ಧ

12:43 PM Aug 23, 2022 | Team Udayavani |

ಕುಂದಾಪುರ: ಕೇಂದ್ರ ಸರಕಾರದಿಂದ ಕುಂದಾಪುರ ಸರಕಾರಿ ಉಪವಿಭಾಗ ಆಸ್ಪತ್ರೆಗೆ ಮಂಜೂರಾದ, ಕೇಂದ್ರ ಸರಕಾರದ ಅಖೀಲ ಭಾರತ ವಾಕ್‌ ಶ್ರವಣ ಸಂಸ್ಥೆಯ ಔಟ್‌ರೀಚ್‌ ಸೆಂಟರ್‌ಗೆ ದಾನಿಗಳ ಮೂಲಕ ನಿರ್ಮಾಣವಾದ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಚಿಕಿತ್ಸಾ ಉಪಕರಣಗಳು ಇನ್ನೂ ಪೂರ್ಣ ಅಳವಡಿಕೆಯಾಗದ ಹಿನ್ನೆಲೆಯಲ್ಲಿ ಉದ್ಘಾಟನೆ, ಕೇಂದ್ರದ ಕಾರ್ಯಾರಂಭ ವಿಳಂಬವಾಗುತ್ತಿದೆ. ಇದಕ್ಕೆ ಪ್ರತ್ಯೇಕ ದಾನಿಗಳ ಹುಡುಕಾಟ ನಡೆದಿದೆ.

Advertisement

ಕಟ್ಟಡ

ಪ್ರಸ್ತುತ ಸರಕಾರಿ ಆಸ್ಪತ್ರೆಯು 200 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು ಹೆರಿಗೆ ವಿಭಾಗ ಪ್ರತ್ಯೇಕ ಇದೆ. ನಾಡೋಜ ಡಾ| ಜಿ. ಶಂಕರ್‌ ಅವರು ನೂತನ ಕಟ್ಟಡ ನಿರ್ಮಿಸಿ ನೀಡಿದ್ದಾರೆ. ಈಗ ಮಂಜೂರಾದ ಸೆಂಟರ್‌ಗೆ ಅಗತ್ಯವಿರುವ ಕಟ್ಟಡಕ್ಕೂ ದಾನಿಗಳನ್ನು ಹುಡುಕಲಾಗಿತ್ತು. ಆಸ್ಪತ್ರೆಯಲ್ಲಿ ಸುದೀರ್ಘ‌ ಅವಧಿ ಸೇವೆ ಸಲ್ಲಿಸಿ ನಿವೃತ್ತರಾಗಿ ಅಗಲಿರುವ ದಿ| ವಿಜಯಾ ಬಾಯಿ ಅವರ ಹೆಸರಿನಲ್ಲಿ ಅವರ ಪತಿ, ಮಾಜಿ ಪುರಸಭೆ ಸದಸ್ಯ ಶಿವರಾಮ ಪುತ್ರನ್‌, ಮಕ್ಕಳು ಮತ್ತು ಕುಟುಂಬಿಕರು ಮಹತ್ವದ ಯೋಜನೆಗೆ ಕಟ್ಟಡ ಕೊಡುಗೆಯಾಗಿ ನೀಡುತ್ತಿದ್ದಾರೆ.

ಸುಸಜ್ಜಿತ

ಸಾರ್ವಜನಿಕ ಆಸ್ಪತ್ರೆಯ ಮೊದಲನೇ ಮಾಳಿಗೆಯಲ್ಲಿ ಕಟ್ಟಡ ಕಾಮಗಾರಿ ನಡೆದಿದೆ. ಸುಮಾರು 20 ಲಕ್ಷ ರೂ. ಗಳ ವೆಚ್ಚದಲ್ಲಿ ಉತ್ತಮ ಗುಣಮಟ್ಟದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಈಗಾಗಲೇ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಪ್ಲಾಂಟ್‌, ಅತ್ಯಾಧುನಿಕ ಡಯಾಲಿಸಿಸ್‌ ಘಟಕ, ಅತ್ಯಾಧುನಿಕ ಹೆರಿಗೆ ಆಸ್ಪತ್ರೆ ಇದ್ದು ಇನ್ನೊಂದು ಸೇರ್ಪಡೆಯಾಗಿ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಸೆಂಟರ್‌ ಒದಗಿದೆ. ನೂತನ ಕಟ್ಟಡ ರಚನೆಯಾಗುವುದರಿಂದ ಆಸ್ಪತ್ರೆಯ ಕಟ್ಟಡ ಸೋರುವ ಸಮಸ್ಯೆಯೂ ನಿವಾರಣೆಯಾಗಲಿದೆ. ಸೋರುವ ಭಾಗದ ಮೇಲೆಯೇ ನೂತನ ಕಟ್ಟಡ ರಚನೆಯಾಗಿದೆ. ಲೋಕೋಪಯೋಗಿ ಇಲಾಖೆ ಕಟ್ಟಡದ ಧಾರಣಾ ಸಾಮರ್ಥ್ಯವನ್ನು ಇಲಾಖೇತರ ಎಂಜಿನಿಯರ್‌ ಗಳಿಂದ ಮಾಡಿಸಿ ಪ್ರಮಾಣಪತ್ರ ನೀಡಿದೆ.

Advertisement

ಹಸ್ತಾಂತರವಾಗಿಲ್ಲ

ಎಸಿ, ಸ್ಟ್ರೆಚರ್‌, 6 ಫ್ಯಾನ್‌, ವಯರಿಂಗ್‌, ಮರದ 6 ಬಾಗಿಲು, ಬೋರ್ಡ್‌, ನೆಲಕ್ಕೆ ಟೈಲ್ಸ್‌ ಇತ್ಯಾದಿ ಎಲ್ಲ ಅಳವಡಿಸಿ ಸಿದ್ಧವಾಗಿದೆ. ಆದರೆ ಹಸ್ತಾಂತರವಾಗಿಲ್ಲ.

ಅವಶ್ಯ

ಕಟ್ಟಡ ಪೂರ್ಣವಾಗಿದ್ದರೂ ಅದರೊಳಗೆ ಚಿಕಿತ್ಸಾ ವಿಭಾಗಗಳು, ಡಯಾಗ್ನಸ್ಟಿಕ್‌ ಕೊಠಡಿ, ಹೊರರೋಗಿ ವಿಭಾಗ, ಸೌಂಡ್‌ಟ್ರೀಟೆಡ್‌ ಕೊಠಡಿ ಮೊದಲಾದವುಗಳ ನಿರ್ಮಾಣವಾಗಬೇಕಿದೆ. ಇದನ್ನು ನಿರ್ಮಿಸಿಕೊಡಲು ರೋಟರಿ ಸಂಸ್ಥೆ ಮುಂದೆ ಬಂದಿದೆ. ವಾಕ್‌ ಶ್ರವಣ ಸಂಸ್ಥೆಯಿಂದ ಒಂದಷ್ಟು ಉಪಕರಣಗಳು ಬಂದಿವೆ. ಕಟ್ಟಡದೊಳಗೆ ಎಲ್ಲ ಸಿದ್ಧಗೊಂಡು ಅದಕ್ಕೆ ಅವಶ್ಯವುಳ್ಳ ವಾಕ್‌ಶ್ರವಣ ಚಿಕಿತ್ಸಾ ಉಪಕರಣಗಳನ್ನು ಅಳವಡಿಸಿದ ಬಳಿಕ ಉದ್ಘಾಟನೆಯಾಗಲಿದೆ.

ಮಂಜೂರು

ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಸೆಂಟರ್‌ ಕೇಂದ್ರ ಆರೋಗ್ಯ ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ಆಲ್‌ ಇಂಡಿಯಾ ಇನ್‌ ಸ್ಟಿಟ್ಯೂಟ್‌ ಆಫ್‌ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ಗೆ ಸಾರ್ವಜನಿಕರ ಹಿತಕ್ಕಾಗಿ ಔಟ್ರೀಚ್‌ ಸೇವಾ ಕೇಂದ್ರವನ್ನು ಕುಂದಾಪುರದಲ್ಲಿ ತೆರೆಯಬೇಕು ಎಂದು ಮನವಿ ಮಾಡಲಾಗಿತ್ತು. ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಹಾಗೂ ಕಾರ್ಯಕಾರಿ ಸಮಿತಿ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಸೆಂಟರ್‌ ಆರಂಭಕ್ಕೆ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಮನವಿ ಸಲ್ಲಿಸಿತ್ತು. ಅವರ ಮನವಿಯಂತೆ ಮಂಜೂರಾದ ಈ ಕೇಂದ್ರ ಕುಂದಾಪುರ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಸ್ಥಾಪಿಸಲಾಗಿದೆ.

ನಿರ್ಮಾಣ ಪೂರ್ಣ: ಕುಂದಾಪುರ ಸರಕಾರಿ ಆಸ್ಪತ್ರೆಯ ಸಿಬಂದಿಯಾಗಿ ಪತ್ನಿ ವಿಜಯಾ ಬಾಯಿ ಸುದೀರ್ಘ‌ ಸೇವೆ ನೀಡಿದ್ದರು. ಆಸ್ಪತ್ರೆಗೆ ಅಖಿಲ ಭಾರತ ಮಟ್ಟದ ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ಸೆಂಟರ್‌ ಮಂಜೂರಾಗಿದ್ದನ್ನು ತಿಳಿಸಿ, ವೈದ್ಯರು, ಪ್ರತಾಪಚಂದ್ರ ಶೆಟ್ಟರು, ಶ್ರೀನಿವಾಸ ಶೆಟ್ಟರ ಮನವಿ ಮೇರೆಗೆ ಕಟ್ಟಡ ನಿರ್ಮಿಸಿದ್ದೇವೆ. ಗುಣಮಟ್ಟದಲ್ಲಿ ನಿರ್ಮಾಣ ಕಾರ್ಯ ನಡೆದಿದ್ದು ಯಂತ್ರೋಪಕರಣಗಳ ಅಳವಡಿಕೆ ನಂತರ ಉದ್ಘಾಟನೆಯಾಗಲಿದೆ. –ಶಿವರಾಮ ಪುತ್ರನ್‌, ಹಿರಿಯ ಸಮಾಜ ಸೇವಕರು

ನಿರ್ಮಾಣ ಪೂರ್ಣ: ಭಾರತ ವಾಕ್‌ ಶ್ರವಣ ಸಂಸ್ಥೆಯ ಔಟ್ರೀಚ್‌ ಸೆಂಟರ್‌ ಕಾರ್ಯನಿರ್ವಹಿಸಲಿದ್ದು ದಾನಿಗಳ ಮೂಲಕ ಕಟ್ಟಡ ನಿರ್ಮಾಣ ನಡೆದಿದೆ. ಈ ಹಿಂದೆ ಇಲ್ಲಿಯೇ ಸೇವೆ ಸಲ್ಲಿಸಿದ್ದ ದಿ| ವಿಜಯಾ ಬಾಯಿ ಅವರ ನೆನಪಿನಲ್ಲಿ ಅವರ ಪತಿ, ಮಕ್ಕಳು ಸುಸಜ್ಜಿತ ಕಟ್ಟಡ ನಿರ್ಮಿಸಿದ್ದಾರೆ. ಈಗ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದ್ದು ಸುಸಜ್ಜಿತವಾಗಿ ಕೇಂದ್ರವಾದ ಬಳಿಕ ಅಲ್ಲೇ ಚಿಕಿತ್ಸೆ ಆರಂಭಿಸಲಾಗುವುದು. –ಡಾ| ರಾಬರ್ಟ್‌ ರೆಬೆಲ್ಲೂ, ಆಡಳಿತ ಶಸ್ತ್ರ ಚಿಕಿತ್ಸಕ ವೈದ್ಯಾಧಿಕಾರಿ, ಸರಕಾರಿ ಉಪವಿಭಾಗ ಆಸ್ಪತ್ರೆ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next