Advertisement

ಪೊಲೀಸ್‌ ಠಾಣೆಗೆ ಕಟ್ಟಡ

09:46 AM Feb 05, 2018 | Team Udayavani |

ಮಹಾನಗರ: ಪೊಲೀಸ್‌ ಠಾಣೆ ಕಟ್ಟಡ ನಿರ್ಮಾಣಕ್ಕೆ ಪಡೀಲ್‌ ವ್ಯಾಪ್ತಿಯಲ್ಲಿ 1 ಎಕ್ರೆ ಜಮೀನು ಒದಗಿಸಿಕೊಡುವಂತೆ ಮಂಗಳೂರು ಪಾಲಿಕೆಗೆ ಪೊಲೀಸ್‌ ಇಲಾಖೆ ಮನವಿ ಮಾಡಿದೆ. ಆದರೆ, ‘ಸದ್ಯ ನಮ್ಮಲ್ಲಿರುವ ಜಮೀನು ನೀಡಲು ಸಾಧ್ಯವಿಲ್ಲ’ ಎಂದು ಪಾಲಿಕೆ ಮನವಿ ನಿರಾಕರಿಸಿದೆ. ಹೀಗಾಗಿ ಪೊಲೀಸ್‌ ಠಾಣೆಗೆ ಕಟ್ಟಡ ಕಟ್ಟಲು ಮಂಗಳೂರಿನಲ್ಲಿ ಜಮೀನು ಸಿಗದಂತಾಗಿದೆ.

Advertisement

ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಪೊಲೀಸ್‌ ಠಾಣೆ ಕಟ್ಟಡ ನಿರ್ಮಿಸಲು ಸರಕಾರಿ ಸ್ಥಳದ ಅಗತ್ಯವಿದೆ. ಪೊಲೀಸ್‌ ಇಲಾಖೆಯ ವತಿಯಿಂದ ಈ ಕಟ್ಟಡ ನಿರ್ಮಿಸಲು ಸೂಕ್ತ ಜಮೀನು ಇಲ್ಲ. ಹೀಗಾಗಿ ಪಡೀಲ್‌ ಜಂಕ್ಷನ್‌ನಲ್ಲಿ ರಾ.ಹೆ. 73ಕ್ಕೆ ಹೊಂದಿಕೊಂಡಿರುವ ಅಳಪೆ ಗ್ರಾಮದಲ್ಲಿ 1 ಎಕ್ರೆ ಜಮೀನು ಪಾಲಿಕೆ ವ್ಯಾಪ್ತಿಯಲ್ಲಿ ಇರುವುದರಿಂದ ಆ ಸ್ಥಳವನ್ನು ಮಂಜೂರು ಮಾಡುವಂತೆ ನಗರ ಪೊಲೀಸ್‌ ಆಯುಕ್ತರು ಇತ್ತೀಚೆಗೆ ಪಾಲಿಕೆಗೆ ಪತ್ರ ಬರೆದಿದ್ದರು.

ಹೀಗಾಗಿ, ಪಾಲಿಕೆಯ ಅಧೀನ ಹಾಗೂ ತೋಟಗಾರಿಕಾ ಇಲಾಖೆಯ ಅನುಭೋಗದಲ್ಲಿರುವ ಆ ಜಾಗವನ್ನು ಪೊಲೀಸ್‌ ಠಾಣೆ ಕಟ್ಟಡ ನಿರ್ಮಾಣಕ್ಕಾಗಿ ಕಾಯ್ದಿರಿಸುವ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಪಾಲಿಕೆಯಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾವಿಸಲಾಗಿತ್ತು. ಆದರೆ, ‘ಮಂಗಳೂರಿನ ಮುಂದಿನ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಭವಿಷ್ಯದ ಆವಶ್ಯಕತೆಗೆ ಅನುಕೂಲವಾಗಲೆಂದು ಈ ಜಮೀನನ್ನು ಪಾಲಿಕೆಯಲ್ಲಿಯೇ ಕಾಯ್ದಿರಿಸುವುದು ಉತ್ತಮ’ ಎಂದು ಕೆಲವು ಸದಸ್ಯರು ಪ್ರತಿಕ್ರಿಯಿಸಿದ್ದರು. ಹೀಗಾಗಿ, ಮುಂದಿನ ದಿನದಲ್ಲಿ ಈ ಭೂಮಿಯು ಪಾಲಿಕೆಗೆ ಅಗತ್ಯವಿರುವ ಕಾರಣ ಸದ್ಯಕ್ಕೆ ಪೊಲೀಸ್‌ ಇಲಾಖೆಯ ಮನವಿಯನ್ನು ಕೈಬಿಡಲು ಪಾಲಿಕೆ ನಿರ್ಣಯಿಸಿದೆ.

ತೋಟಗಾರಿಕೆ ಇಲಾಖೆಗೆ ಬೇಕಂತೆ!
1991ರ ಸೆ. 28ರಂತೆ ಅಳಪೆ ಗ್ರಾಮದಲ್ಲಿ ಮಂಗಳೂರು ಪಾಲಿಕೆ ಉದ್ಯಾನವನ್ನು ಅಭಿವೃದ್ಧಿಪಡಿಸಲು ಹಾಗೂ ಸಂರಕ್ಷಣೆಗಾಗಿ ತೋಟಗಾರಿಕಾ ಇಲಾಖೆಯವರಿಗೆ ನೀಡಲಾಗಿತ್ತು. ಈ ಕುರಿತು ತೋಟಗಾರಿಕಾ ಇಲಾಖೆಯ ಅಭಿಪ್ರಾಯ ಕೋರಿ ಪಾಲಿಕೆಯಿಂದ ಪತ್ರ ಕೂಡ ಬರೆಯಲಾಗಿತ್ತು. ಆದರೆ, ಯಾವುದೇ ಅಭಿಪ್ರಾಯ ಪಾಲಿಕೆಗೆ ಬಂದಿರಲಿಲ್ಲ. ಈ ಕುರಿತು ಪೊಲೀಸ್‌ ಇಲಾಖೆಯವರು ತೋಟಗಾರಿಕಾ ಇಲಾಖೆಗೆ ಪತ್ರ ಬರೆದು ಈ ಜಮೀನಿನ ಪೈಕಿ 1 ಎಕ್ರೆ ಜಮೀನನ್ನು ಪೊಲೀಸ್‌ ಠಾಣಾ ಕಟ್ಟಡ ನಿರ್ಮಾಣಕ್ಕೆ ನೀಡುವಂತೆ ಕೋರಲಾಗಿತ್ತು.

ಈ ಮನವಿಯ ಬಗ್ಗೆ ತೋಟಗಾರಿಕಾ ಇಲಾಖೆಯವರು ಈ ಜಮೀನಿನಲ್ಲಿ ಹಾರ್ಟಿ ಕ್ಲಿನಿಕ್ಸ್‌ ಹಾಗೂ ತೋಟಗಾರಿಕಾ ಸೇವಾ ಕೇಂದ್ರ ಸ್ಥಾಪಿಸಲಾಗುವುದರಿಂದ ಈ ಜಮೀನನ್ನು ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

Advertisement

ಉಚಿತ ಜಮೀನು ನಿಯಮವೂ ಇದೆ
ರಾಜ್ಯ ಸರಕಾರವು ರಾಜ್ಯದಲ್ಲಿನ ನಗರ ಸ್ಥಳೀಯ ಸಂಸ್ಥೆಗಳ ಜಮೀನನ್ನು ವಿಲೇವಾರಿ ಮಾಡುವ ಬಗ್ಗೆ ಮಾರ್ಗಸೂಚಿ ರಚಿಸಿದೆ. ಇದರಂತೆ ರಾಜ್ಯದ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ಹಾಗೂ ಅಧಿಸೂಚಿತ ಪ್ರದೇಶಗಳಿಗೆ ಸೇರಿದ ಜಮೀನನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ರಾಜ್ಯ ಸರಕಾರದಿಂದ ನಡೆಸಲ್ಪಡುತ್ತಿರುವ ಶಾಲೆ / ಕಾಲೇಜು / ಹಾಸ್ಟೆಲ್‌ / ಆಸ್ಪತ್ರೆ / ಅಂಗನವಾಡಿ / ಸಾರ್ವಜನಿಕ ಲೈಬ್ರೇರಿ / ಸ್ತ್ರೀ ಸ್ವೀಕಾರ ಕೇಂದ್ರಗಳು ಹಾಗೂ ಪೊಲೀಸ್‌ ಠಾಣೆಗಳಿಗೆ ಉಚಿತ ಜಮೀನು ಮಂಜೂರಾತಿ ನೀಡುವುದು ಎಂಬ ನಿಯಮವಿದೆ. ಇದನ್ನು ಪಾಲಿಕೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲೂ ಉಲ್ಲೇಖಿಸಲಾಗಿತ್ತು. 

ಮನಪಾ ಜತೆಗೆ ಮಾತುಕತೆ
ಪೊಲೀಸ್‌ ಇಲಾಖೆಗೆ ಮಂಗಳೂರು ವ್ಯಾಪ್ತಿಯಲ್ಲಿ ಇರುವ ಸರಕಾರಿ ಜಾಗವನ್ನು ಒದಗಿಸಲು ಪಾಲಿಕೆಯೇ ನಿರಾಕರಿಸಿದರೆ ಬೇರೆ ಜಾಗ ಹೊಂದಿಸುವುದು ಕಷ್ಟವಾಗಲಿದೆ. ಆದರೂ ಪಾಲಿಕೆ ಕೈಗೊಂಡ ನಿರ್ಣಯವನ್ನು ಪರಿಶೀಲಿಸಿ ಮತ್ತೂಮ್ಮೆ ಪಾಲಿಕೆ ಜತೆಗೆ ಮಾತುಕತೆ ನಡೆಸಲಾಗುವುದು.
– ಟಿ.ಆರ್‌. ಸುರೇಶ್‌, ಪೊಲೀಸ್‌ ಆಯುಕ್ತರು

ಜಮೀನು ನಿರ್ಣಯ ಕೈಬಿಡಲಾಗಿದೆ
ಪೊಲೀಸ್‌ ಠಾಣೆ ಕಟ್ಟಡಕ್ಕೆ ಜಮೀನು ಒದಗಿಸುವಂತೆ ಪೊಲೀಸ್‌ ಆಯುಕ್ತರಿಂದ ಪಾಲಿಕೆಗೆ ಪತ್ರ ಬಂದಿತ್ತು. ಆದರೆ, ಮಂಗಳೂರಿನ ಭವಿಷ್ಯದ ದೃಷ್ಟಿಯಿಂದ ಪಾಲಿಕೆಗೆ ಜಮೀನು ಆವಶ್ಯಕತೆ ಇರುವುದರಿಂದ ಈ ನಿರ್ಣಯವನ್ನು ಕೈಬಿಡಲು ನಿರ್ಧರಿಸಲಾಗಿದೆ. ಮುಂದೆ ಈ ಕುರಿತು ಪರಿಶೀಲಿಸಿ ನಿರ್ಧರಿಸಲಾಗುವುದು. 
– ಶಶಿಧರ ಹೆಗ್ಡೆ,
 ಮುಖ್ಯ ಸಚೇತಕರು, ಮನಪಾ

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next