Advertisement

ಕಿತ್ತೂರಲ್ಲೇ ಕೋಟೆ-ಅರಮನೆ ಪ್ರತಿರೂಪ ನಿರ್ಮಿಸಿ

01:20 PM Aug 03, 2022 | Team Udayavani |

ಬೆಳಗಾವಿ/ಚ.ಕಿತ್ತೂರು: ಚನ್ನಮ್ಮನ ಕಿತ್ತೂರು ಕೋಟೆಯ ಪ್ರತಿರೂಪ ಅರಮನೆಯನ್ನು ಬಚ್ಚನಕೇರಿಯಲ್ಲಿ ನಿರ್ಮಿಸಲು ಮುಂದಾಗಿರುವ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಕಿತ್ತೂರಿನ ಜನತೆ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಕಿತ್ತೂರಿನಲ್ಲಿ ಚನ್ನಮ್ಮ ಪ್ರತಿಮೆಗೆ ಗೌರವ ಸಲ್ಲಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಅಂಗಡಿ ಮುಂಗಟ್ಟು ಸೇರಿದಂತೆ ವ್ಯಾಪಾರ ವಹಿವಾಟು ಬಂದ್‌ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಿತ್ತೂರು ಬಂದ್‌ ಯಶಸ್ವಿಯಾಯಿತು. ನಂತರ ಬೆಳಗಾವಿ ನಗರಕ್ಕೆ ಆಗಮಿಸಿ ಜಿಲ್ಲಾ ಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿ ಪ್ರತಿಭಟಿಸಿದರು.

ಮೊದಲಿನಿಂದಲೂ ಅರಮನೆ ಇರುವ ಜಾಗದಲ್ಲಿಯೇ ಅರಮನೆಯ ಪ್ರತಿರೂಪವನ್ನು ನಿರ್ಮಿಸಬೇಕು. ಆದರೆ ಸರ್ಕಾರ ಮತ್ತು ಜಿಲ್ಲಾಡಳಿತ ಕಿತ್ತೂ ರು ತಾಲೂಕಿನ ಬಚ್ಚನಕೇರಿ ಗ್ರಾಮದ 57 ಎಕರೆ ಜಾಗದಲ್ಲಿ ಕಿತ್ತೂರು ಕೋಟೆಯ ಪ್ರತಿರೂಪದ ಅರಮನೆ ನಿರ್ಮಾಣಕ್ಕೆ ಮುಂದಾಗಿದೆ. ಇದು ಕಿತ್ತೂರು ನಾಡಿಗೆ ಮಾಡಿರುವ ಘೋರ ಅವಮಾನವಾಗಿದೆ ಎಂದು ಆರೋಪಿಸಿದರು.

ಕಿತ್ತೂರಿನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿ, ಕಿತ್ತೂರಿನ ಕೋಟೆಯ ಪ್ರತಿರೂಪವನ್ನು ಕಿತ್ತೂರು ಬಿಟ್ಟು ಬಚ್ಚನಕೇರಿ ಎಂಬ ಗ್ರಾಮದಲ್ಲಿ ನಿರ್ಮಿಸಲು ಹೊರಟಿರುವ ಸರ್ಕಾರದ ಕ್ರಮ ಖಂಡನೀಯ. ಸರ್ಕಾರ ಕಿತ್ತೂರನ್ನು ಹೊರಗಿಟ್ಟು ಬೇರೆ ಕಡೆಗೆ ಪ್ರತಿರೂಪದ ಅರಮನೆ ನಿರ್ಮಾಣಕ್ಕೆ ಆದೇಶ ಹೊರಡಿಸಿದೆ. ಕಿತ್ತೂರು ಜನತೆ ಹಾಗೂ ರಾಣಿ ಚನ್ನಮ್ಮನಿಗೆ ಸರ್ಕಾರ ಅವಮಾನ ಮಾಡಿದೆ ಎಂದು ಕಿಡಿಕಾರಿದರು.

ಕಿತ್ತೂರಿನ ಪರಂಪರೆ ಹಾಗೂ ಇತಿಹಾಸಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು. ಕಿತ್ತೂರಿನ ವೈಭವಯುತ ನೆಲದಲ್ಲಿಯೇ ಐತಿಹಾಸಿಕ ಗತವೈಭವ ಮರಳಿ ಬರುವ ಕಾರ್ಯ ಸರ್ಕಾರ ಮಾಡಬೇಕು. ಬಚ್ಚನಕೇರಿಯಲ್ಲಿ ಉದ್ದೇಶಿಸಿರುವ ಪ್ರತಿರೂಪದ ಅರಮನೆ ನಿರ್ಮಾಣ ಕಾರ್ಯವನ್ನು ಕೈಬಿಡಬೇಕು. ಕಿತ್ತೂರಿನಲ್ಲಿರುವ ಜಮೀನನ್ನು ಸ್ವಾಧೀನ ಪಡಿಸಿಕೊಂಡು ಇಲ್ಲಿಯೇ ನಿರ್ಮಿಸಬೇಕು ಎಂದು ಆಗ್ರಹಿಸಿದರು.

Advertisement

ಸರ್ಕಾರ ಕೂಡಲೇ ಆದೇಶವನ್ನು ಹಿಂಪಡೆಯಬೇಕು. ಕಿತ್ತೂರು ಕೋಟೆ ಎದುರಿನ ರೈತರ ಜಮೀನಿಗೆ ಸೂಕ್ತ ಪರಿಹಾರ ನೀಡಿ ಸ್ವಾಧೀನಪಡಿಸಿಕೊಂಡು ಕಿತ್ತೂರಿನಲ್ಲಿಯೇ ಅರಮನೆ ಪ್ರತಿರೂಪ ನಿರ್ಮಾಣ ಮಾಡಬೇಕು. ಸದ್ಯ ಇರುವ ಕೋಟೆಯಲ್ಲಿ ಅರಮನೆ ಕಟ್ಟಲು ಪುರಾತತ್ವ ಇಲಾಖೆಯ ನಿರ್ಬಂಧ ಇರಬಹುದು. ಆದರೆ ಅದರ ಎದುರಿಗೆ ಖಾಸಗಿ ಜಾಗದಲ್ಲಿ ಕಟ್ಟುವುದರಿಂದ ಸಮಸ್ಯೆ ಆಗುವುದಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಿರಂತರ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.

ಶ್ರೀ ಮಹಾಲಕ್ಷ್ಮಿ (ದ್ಯಾಮವ್ವ) ದೇವಿ ಮಂದಿರ ನಿರ್ಮಿಸಲು 6 ಎಕರೆ ಜಾಗದಲ್ಲಿ ತೋಟಗಾರಿಕಾ ಇಲಾಖೆಯ ಕೆಲಸಕ್ಕೆ ಹಾಗೂ ಉತ್ಸವ ವೇಳೆ ಸಮುದಾಯ ಭವನ ನಿರ್ಮಾಣಕ್ಕೆ ಪುರಾತತ್ವ ಇಲಾಖೆಯವರು ಅನುಮತಿ ಕೊಟ್ಟಿದ್ದಾರೆ. ಆದರೆ ಕೋಟೆ ನಿರ್ಮಿಸಲು ಅವರು ಅನುಮತಿ ಏಕೆ ನೀಡುವುದಿಲ್ಲ. ರಾಮಮಂದಿರ ಎಲ್ಲಿ ಇತ್ತೋ ಅಲ್ಲಿಯೇ ನಿರ್ಮಾಣ ಆಗುತ್ತಿದೆ. ಅದೇ ರೀತಿ ಚನ್ನಮ್ಮಾಜಿ ಆಡಳಿತ ಮಾಡಿದ ಜಾಗದಲ್ಲಿಯೇ ಅರಮನೆ ನಿರ್ಮಾಣ ಆಗಬೇಕು ಎಂದು ಮುಖಂಡ ಹಬೀಬ್‌ ಶಿಲೇದಾರ ಆಗ್ರಹಿಸಿದರು.

ವಾದ್ಯ ಮೇಳಗಳೊಂದಿಗೆ ಬೃಹತ್‌ ಪ್ರತಿಭಟನಾ ರ್ಯಾಲಿ ನಡೆಯಿತು. ಜಿಲ್ಲಾಡಳಿತದ ಗಮನಸೆಳೆಯಲು ವಿವಿಧ ದೇಸಿ ವಾದ್ಯದವರು ಪಾಲ್ಗೊಂಡಿದ್ದರು. ಪಪಂ ಸದಸ್ಯರಾದ ಜಯಸಿದ್ದರಾಮ ಮಾರೀಹಾಳ, ಕೃಷ್ಣಾ ಬಾಳೇಕುಂದ್ರಿ, ಶಂಕರ ಬಡಿಗೇರ, ಪ್ರವೀಣಗೌಡ ಪಾಟೀಲ, ಎಂ.ಎಸ್‌ ಜಕಾತಿ, ಮುಖಂಡರಾದ ಬಾಬಾಸಾಹೇಬ ಪಾಟೀಲ, ಯಲ್ಲಪ್ಪ ವಕ್ಕುಂದ, ಬಸವರಾಜ ಸಂಗೊಳ್ಳಿ, ಕಾಶೀನಾಥ ಕಿನಾರೆ, ಸಚೀನ್‌ ಮಾರೀಹಾಳ, ಜಯದೇವ ಮಾರೀಹಾಳ, ವಿಜಯಕುಮಾರ ಶಿಂಧೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next