Advertisement

ನಗರದ 3 ಕಡೆ ಬೃಹತ್‌ ಮಾರುಕಟ್ಟೆ ನಿರ್ಮಾಣ

12:38 PM Oct 05, 2018 | Team Udayavani |

ಬೆಂಗಳೂರು: ನಗರದ ಪ್ರಮುಖ ಮೂರು ಹೆದ್ದಾರಿಗಳಲ್ಲಿ ಕೆ.ಆರ್‌.ಮಾರುಕಟ್ಟೆ ಮಾದರಿ ಬೃಹತ್‌ ಮಾರುಕಟ್ಟೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

Advertisement

ಗುರುವಾರ ಬೆಳಗ್ಗೆ ಕೆ.ಆರ್‌.ಮಾರುಕಟ್ಟೆಗೆ ಮೇಯರ್‌ ಗಂಗಾಂಬಿಕೆ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಮಾರುಕಟ್ಟೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ ಮಾರುಕಟ್ಟೆಯ ಬಗ್ಗೆ ಸಮರ್ಪಕ ಮಾಹಿತಿ ಹೊಂದಿರದ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಸೂಚಿಸಿದರು. 

ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್‌, ಪಾರಂಪರಿಕ ಇತಿಹಾಸವಿರುವ ಕೆ.ಆರ್‌.ಮಾರುಕಟ್ಟೆಗೆ ನಿತ್ಯ ಲಕ್ಷಾಂತರ ಜನರು ಭೇಟಿ ನೀಡುವುದರಿಂದ ಸದಾ ಜನರಿಂದ ತುಂಬಿರುತ್ತದೆ. ಆ ಹಿನ್ನೆಲೆಯಲ್ಲಿ ಜನರ ಅನುಕೂಲಕ್ಕಾಗಿ ತುಮಕೂರು ರಸ್ತೆ, ಮೈಸೂರು ರಸ್ತೆ ಹಾಗೂ ಹೊಸೂರು ರಸ್ತೆಗಳಲ್ಲಿ ಇದೇ ಮಾದರಿಯ ಬೃಹತ್‌ ಮಾರುಕಟ್ಟೆಗಳನ್ನು ನಿರ್ಮಿಸುವ ಯೋಜನೆಯಿದ್ದು, ಬಿಬಿಎಂಪಿ ಕೌನ್ಸಿಲ್‌ ಒಪ್ಪಿಗೆ ಪಡೆದು, ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುವುದು ಎಂದರು.

ಮಾರುಕಟ್ಟೆಯಲ್ಲಿ ಬಹುತೇಕ ವ್ಯಾಪಾರಸ್ಥರು ಪಾಲಿಕೆಗೆ ಬಾಡಿಗೆ ನೀಡದೆ ವ್ಯಾಪಾರ ನಡೆಸುತ್ತಿರುವ ಬಗ್ಗೆ ದೂರುಗಳಿವೆ. ಕೆಲವರು ಮಳಿಗೆಗಳನ್ನು ಬಳಸುತ್ತಿಲ್ಲ ಹೀಗಾಗಿ ಅವ್ಯವಸ್ಥೆಯಿಂದ ಕೂಡಿದೆ ಇದಕ್ಕೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಹೀಗಾಗಿ ಜಾಗವನ್ನು ಪಾರ್ಕಿಂಗ್‌ ಅಥವಾ ಇತರೆ ಕೆಲಸಗಳಿಗೆ ಬಳಸಿಕೊಳ್ಳಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ತೀವ್ರ ತರಾಟೆ: ಮಾರುಕಟ್ಟೆಯಲ್ಲಿ ತ್ಯಾಜ್ಯ ವಿಂಗಡಣೆ ಕೇಂದ್ರ ಸ್ಥಗಿತಗೊಂಡಿರುವುದನ್ನು ಗಮಿಸಿದ ಪರಮೇಶ್ವರ್‌, ಯಾವ ಕಾರಣಕ್ಕೆ ಕೇಂದ್ರ ಮುಚ್ಚಲಾಗಿದೆ ಎಂದು ಅಧಿಕಾರಿಗಳು ಪ್ರಶ್ನಿಸಿದಾಗ, ಉತ್ತರ ನೀಡಲು ಅಧಿಕಾರಿಗಳು ತಡಬಡಾಯಿಸಿದರು. ಇದಕ್ಕೆ ಕೋಪಗೊಂಡ ಅವರು, ವಾರದೊಳಗೆ ಏಕೆ ಕೇಂದ್ರ ಮುಚ್ಚಲಾಗಿದೆ ಎಂಬುದಕ್ಕೆ ಕಾರಣ ನೀಡದಿದ್ದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

Advertisement

ಅಲ್ಲಿಂದ ಮಾರುಕಟ್ಟೆ ಕಟ್ಟಡದ ನೆಲ ಮಹಡಿಯಲ್ಲಿರುವ ನೂರಾರು ಹಳೆಯ ವಾಹನಗಳನ್ನು ಕಂಡ ಅವರು ಮಾಲೀಕರಿಲ್ಲದ ವಾಹನಗಳನ್ನು ಕೂಡಲೇ ಪೊಲೀಸರ ನೆರವಿನೊಂದಿಗೆ ಹರಾಜು ಹಾಕುವಂತೆ ಸೂಚಿಸಿದರು. ಇನ್ನು ಮೀನು ಮಾರುಕಟ್ಟೆಗೆ ತೆರಳಿದಾಗ ಅಲ್ಲಿನ ಅನೈರ್ಮಲ್ಯ ಹಾಗೂ ದುರ್ವಾಸನೆಗೆ ಬೇಸತ್ತ ಅವರು, ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಕೂಡಲೇ ಸ್ವತ್ಛಗೊಳಿಸುವಂತೆ ಸೂಚಿಸಿದರು. ಉಪಮೇಯರ್‌ ರಮೀಳಾ ಉಮಾಶಂಕರ್‌, ಆಡಳಿತ ಪಕ್ಷ ನಾಯಕ ಎಂ.ಶಿವರಾಜು, ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಹಾಜರಿದ್ದರು.

15 ದಿನಗಳಲ್ಲಿ ಮಾಹಿತಿ ಕೊಡಿ: ಕೆ.ಆರ್‌.ಮಾರುಕಟ್ಟೆಯ ಅಭಿವೃದ್ಧಿಗೆ ಈಗಾಗಲೇ ಯೋಜನೆಗಳನ್ನು ರೂಪಿಸಲಾಗಿದ್ದು, ಬಾಡಿಗೆ ನೀಡದೆ ವ್ಯಾಪಾರ ಮಾಡುವವರ ಬಗ್ಗೆ ಹಾಗೂ ಈ ಭಾಗದಲ್ಲಿನ ಪಾಲಿಕೆಯ ಆಸ್ತಿಗಳ ಸಮಗ್ರ ಮಾಹಿತಿಯನ್ನು 15 ದಿನಗಳಲ್ಲಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಪರಮೇಶ್ವರ್‌ ತಿಳಿಸಿದರು.  ಮಾರುಕಟ್ಟೆಯಲ್ಲಿ ಮೀಟರ್‌ ಬಡ್ಡಿ ದಂಧೆ ನಡೆಯುತ್ತಿರುವ ಮಾಹಿತಿ ತಮಗೂ ಬಂದಿದ್ದು, ಕೂಡಲೇ ಇಂತಹ ದಂಧೆಗೆ ಕಡಿವಾಣ ಹಾಕುವಂತೆ ಪೊಲೀಸ್‌ ಇಲಾಖೆಗೆ ತಿಳಿಸಿದ್ದೇನೆ ಎಂದರು.

ಮಾಹಿತಿ ಇಲ್ಲದಿದ್ದರೆ ಈ ಸ್ಥಾನದಲ್ಲಿ ಯಾಕಿದ್ದೀರಾ?: ಮಾರುಕಟ್ಟೆಯೊಳಗೆ ನಿರ್ಮಿಸಿರುವ ಸಾಲು ಮಳಿಗೆಗಳು ಯಾವ ಇಲಾಖೆ ವ್ಯಾಪ್ತಿಗೆ ಬರುತ್ತವೆ ಎಂದು ಪರಮೇಶ್ವರ್‌ ಅವರು ಮಾರುಕಟ್ಟೆ ಜಂಟಿ ಆಯುಕ್ತೆ ಮುನಿಲಕ್ಷ್ಮೀ ಅವರಿಂದ ಮಾಹಿತಿ ಕೇಳಿದರು. ಆದರೆ, ಈ ಬಗ್ಗೆ ಅವರಿಗೆ ಮಾಹಿತಿ ಇಲ್ಲದಿರುವುದಕ್ಕೆ ಆಕ್ರೋಶಗೊಂಡ ಸಚಿವರು, ಏನು ಕೆಲಸ ಮಾಡುತ್ತಿದ್ದೀರಾ? ನಿಮ್ಮ ಇಲಾಖೆಯ ಆಸ್ತಿಗಳು ಯಾವುವು ಎಂದು ನಿಮಗೆ ಗೊತ್ತಿಲ್ಲವೆಂದರೆ ಯಾಕೆ ಈ ಸ್ಥಾನದಲ್ಲಿರಬೇಕು? ಎಂದು ಅವರನ್ನು ಅಮಾನತುಗೊಳಿಸುವಂತೆ ಆಯುಕ್ತರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next