Advertisement

ಮನೆ ಕಟ್ಟಲು ಮಾಡಿ ನೀರ ಧ್ಯಾನ

12:20 PM Jun 04, 2018 | Harsha Rao |

ಮಳೆಗಾಲದಲ್ಲಿ ಆದಷ್ಟೂ ಸ್ವಲ್ಪ ಒಣ ಮಿಶ್ರಣ ಎನ್ನುವಂತಿರುವ ಸಿಮೆಂಟ್‌ ಗಾರೆಯನ್ನೇ ಬಳಸಬೇಕು. ಅದು ಬೇಗ ಗಟ್ಟಿಗೊಳ್ಳಬೇಕು. ಆಗ ಮಳೆ ಬಂದರೂ ಏನೂ ಆಗುವುದಿಲ್ಲ. ಅದೇ ರೀತಿಯಲ್ಲಿ ಮಳೆಗಾಲದಲ್ಲಿ ಕಾಂಕ್ರಿಟ್‌ ಬ್ಲಾಕ್‌ಗಳು ತೀರ ಒದ್ದೆ ಆಗದಂತೆ ನೋಡಿಕೊಳ್ಳಬೇಕು. 

Advertisement

ಮನೆಗೆ ನೀರು ಅತ್ಯಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ನೀರಿಲ್ಲದೆ ಬದುಕಿಲ್ಲ. ನೀರಿಲ್ಲದೆ ಮನೆಯೂ ಇಲ್ಲ. ಸಿಮೆಂಟ್‌ ಕಾಂಕ್ರಿಟ್‌ ಮಿಕ್ಸಿಂಗ್‌ ನಿಂದ ಹಿಡಿದು ಇಟ್ಟಿಗೆ ನೆನೆಸಲು, ಪಾಯ, ಗೋಡೆ ಕಾಂಕ್ರಿಟ್‌ ಸೂರು ಇತ್ಯಾದಿಗಳನ್ನು ಕ್ಯೂರ್‌ ಮಾಡಲೂ ಕೂಡ ನೀರು ಬೇಕೇ ಬೇಕು. ಆದರೆ ಯಾವುದೇ ಅಂಶ ಹೆಚ್ಚಾದರೆ ಹಾನಿಕಾರಕ ಆಗುವ ರೀತಿಯಲ್ಲಿ, ನೀರು ಕೂಡ ಅನೇಕ ವೇಳೆಯಲ್ಲಿ ಹೆಚ್ಚಾದರೆ ಕಟ್ಟಡಗಳಿಗೆ ಹಾನಿಕಾರಕ ಆಗಬಹುದು. ಹೆಚ್ಚುವರಿ ನೀರು  ಎಲ್ಲಿ ಹಾಗೂ ಹೇಗೆ ತೊಂದರೆ ಕೊಡುತ್ತದೆ ಎಂಬುದನ್ನು ಗಮನಿಸಿದರೆ ಮನೆ ಕಟ್ಟುವಾಗ ಉಂಟಾಗಬಹುದಾದ ಅನೇಕ ತೊಂದರೆಗಳನ್ನು ತಪ್ಪಿಸಬಹುದು.

ಸಿಮೆಂಟ್‌ ಮಿಕ್ಸಿಂಗ್‌ನಲ್ಲಿ ಹೆಚ್ಚಾದರೆ
ಮನೆ ಕಟ್ಟಿಸುವವರಿಗೆ ಎಲ್ಲ ಕಡೆ ಗಮನ ಕೊಡಲು ಆಗದು. ಹೇಗೋ ಮನೆ ಯನ್ನು ಕಟ್ಟಿ ಮುಗಿಸಿದರೆ ಸಾಕು ಎನ್ನುವ ಮಟ್ಟಕ್ಕೆ ಬಂದು ಬಿಡುತ್ತಾರೆ. ಹೀಗಿರುವಾಗ ಸಿಮೆಂಟ್‌ ಮಿಶ್ರಣಮಾಡುವಾಗ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವೆ?

ಏಕೆಂದರೆ, ಹೆಚ್ಚು ನೀರು ಬಳಕೆಯಾಗುವುದು ಇಲ್ಲೇ. ಮರಳಿಗೆ ಸಿಮೆಂಟ್‌ ಬೆರೆಸಿ ಮಿಶ್ರಣ ಮಾಡಿದ ನಂತರ ಸಾಮಾನ್ಯವಾಗಿ ಅಳತೆ ಇಲ್ಲದೆ ನೀರನ್ನು ಹಾಕಿ ಬೆರೆಸಲಾಗುತ್ತದೆ. ಇಷ್ಟು ಸೀಮೆಂಟ್‌ ಇಷ್ಟೇ ನೀರು ಅಂತೇನಿಲ್ಲ. ಇದರಿಂದಾಗಿ ಸಿಮೆಂಟ್‌ ಹಾಗೂ ನೀರಿನ ಅನುಪಾತ ಹೆಚ್ಚಾ ಕಡಿಮೆ ಆಗಿ ಕೆಲವೊಮ್ಮೆ ಪ್ಲಾಸ್ಟರ್‌ ಮಾಡುವಾಗ ಬಿರುಕುಗಳು ಬಿಡುತ್ತವೆ ಇಲ್ಲವೇ, ಮಾಡಿದ ಪ್ಲಾಸ್ಟರ್‌ ಉದುರಿ ಹೋಗುತ್ತದೆ.  ಹಾಗೆಯೇ, ಕಾಂಕ್ರಿಟ್‌ನಲ್ಲಿ ಅದರಲ್ಲೂ ಮುಖ್ಯವಾಗಿ ಸೂರಿನ ಕಾಂಕ್ರಿಟ್‌ನಲ್ಲಿ ಬಿರುಕುಗಳು ಬಿಡಲೂ ಕೂಡ ಹೆಚ್ಚುವರಿ ನೀರಿನ ಅಂಶವೇ ಕಾರಣವಾಗಿರುತ್ತದೆ.  ಕೆಲವೊಮ್ಮೆ ಕೆಲಸದವರು ಹೆಚ್ಚುವರಿ ನೀರು ಹಾಕುತ್ತಾರೆ. ಏಕೆಂದರೆ  ಅವರ ಕೆಲಸ ಸುಲಭ ಆಗಲಿ ಎನ್ನುವ ಕಾರಣಕ್ಕೆ. “ನೀರು ಕಡಿಮೆ ಆದರೆ ಸರಿಯಾಗಿ ಪ್ಯಾಕ್‌ ಆಗುವುದಿಲ್ಲ’ ಎಂದು ಸಬೂಬನ್ನೂ ಕೊಡುತ್ತಾರೆ. ಕಾಂಕ್ರಿಟ್‌ ಸರಿಯಾಗಿ ಘನೀಕರಣಗೊಳ್ಳಲು ಅದನ್ನು ದಮ್ಮಸ್ಸು ಹೊಡೆಯಬೇಕು. ಇಲ್ಲವೇ ವೈಬ್ರೇಟರ್‌ ಮೂಲಕ  ಒತ್ತಬೇಕೇ ಹೊರತು ಹೆಚ್ಚುವರಿ ನೀರು ಹಾಕುವುದು ಇದಕ್ಕೆ ಪರಿಹಾರವಲ್ಲ. ಕೆಲವೊಮ್ಮ ಬಿರುಕುಗಳು ಬಾಹ್ಯವಾಗಿ ಗೋಚರವಾಗದಿದ್ದರೂ ಒಳಗೊಳಗೇ ಸಣ್ಣಸಣ್ಣ ಖಾಲಿ ಸ್ಥಳಗಳು ಹಾಗೂ ಗುಳ್ಳೆಗಳ ರೂಪದಲ್ಲಿ ಮೂಡಿ ಬರುತ್ತದೆ. ಹೀಗಾದರೆ ಒಟ್ಟಾರೆಯಾಗಿ ಕಾಂಕ್ರಿಟ್‌ ಗಟ್ಟಿಗೊಳ್ಳುವುದಿಲ್ಲ ಎನ್ನುವ ಸೂಚನೆಯೇ ಆಗಿರುತ್ತದೆ. 

ಗೋಡೆ ಕಟ್ಟುವಾಗ ಗಾರೆಗೆ ಹೆಚ್ಚು ನೀರಾದರೆ
ಗಾರೆಯವರು ಗೋಡೆ ಕಟ್ಟುವಾಗ ಸಾಮಾನ್ಯವಾಗಿ ಸ್ವಲ್ಪ ಉದುರು ಉದುರಾಗೇ ಇರಲಿ ಎಂದು ಬಯಸುತ್ತಾರೆ. ಆದರೆ ಕೆಲವೊಮ್ಮೆ ಮಳೆ ಬಂದೋ ಇಲ್ಲ ಇತರೆ ಕಾರಣಕ್ಕೋ ಹೆಚ್ಚುವರಿ ನೀರಾದರೆ, ಗೋಡೆ ಕಟ್ಟುವ ಕೆಲಸ ಕಷ್ಟವಾಗುತ್ತದೆ. ಒಂದು ವರಸೆಯೇ ಸರಿಯಾಗಿ ನಿಲ್ಲಿಸಲು ಕಷ್ಟವಾಗುತ್ತದೆ. ಕೆಲವೊಮ್ಮೆ ಎರಡನೇ ವರಸೆ ಇಡಲು ಹೋದರೆ, ಕೆಳಗಿನ ವರಸೆ ಅಲುಗಿ, ತೂಕಿಗೆ ಅಂದರೆ ಪ್ಲಂಬ್‌ಗ ಬರುವುದಿಲ್ಲ. ಒಂದು ಕಡೆ ಸರಿಮಾಡಲು ನೋಡಿದರೆ, ಮತ್ತೂಂದು ಕಡೆ ಅಲುಗಾಡಲು ತೊಡಗುತ್ತದೆ. ಅದರಲ್ಲೂ ಈ ಮೊದಲೇ ಕಾಂಕ್ರಿಟ್‌ ಬ್ಲಾಕ್‌ಗಳು ನೀರಲ್ಲಿ ತೋಯ್ದಿದ್ದರೆ, ವರಸೆಯನ್ನು ಸರಿಯಾಗಿ ಇಡಲು ಮತ್ತೂ ಕಷ್ಟವಾಗುತ್ತದೆ. ಮಳೆಗಾಲದಲ್ಲಿ ಆದಷ್ಟೂ ಸ್ವಲ್ಪ ಒಣ ಮಿಶ್ರಣ ಎನ್ನುವಂತಿರುವ ಸಿಮೆಂಟ್‌ ಗಾರೆಯನ್ನೇ ಬಳಸಬೇಕು. ಅದು ಬೇಗ ಗಟ್ಟಿಗೊಳ್ಳಬೇಕು. ಆಗ ಮಳೆ ಬಂದರೂ ಏನೂ ಆಗುವುದಿಲ್ಲ. ಅದೇ ರೀತಿಯಲ್ಲಿ ಮಳೆಗಾಲದಲ್ಲಿ ಕಾಂಕ್ರಿಟ್‌ ಬ್ಲಾಕ್‌ಗಳು ತೀರ ಒದ್ದೆ ಆಗದಂತೆ ನೋಡಿಕೊಳ್ಳಬೇಕು. ಈ ಸಣ್ಣ ಸಣ್ಣ ವಿಚಾರಗಳೂ ಮನೆ ಕಟ್ಟುವವರಿಗೆ ಅಥವಾ ಕಟ್ಟಿಸುವ ಮೇಸಿŒಗೆ ತಿಳಿದಿರಬೇಕು. ಹಣ ಹೂಡಿ ಮನೆ ಕಟ್ಟಿಸುವ ಮಾಲೀಕರಿಗೆ ಇವೆಲ್ಲ ತಿಳಿದಿರುವುದು ಕಷ್ಟ ಸಾಧ್ಯ. 

Advertisement

ಉಕ್ಕು ಮತ್ತು ನೀರು
ಹೇಳಿ ಕೇಳಿ ನೀರು ಹಾಗೂ ಕಬ್ಬಿಣ ಒಂದಕ್ಕೊಂದು ಆಗೋಲ್ಲ. ಕಂಬಿಗಳಿಗೆ ಸುಲಭವಾಗಿ ನೀರು ತಾಗಿದರೆ ತುಕ್ಕು ಹಿಡಿದುಬಿಡುತ್ತದೆ. ಕಾಂಕ್ರಿಟ್‌ ಕ್ಯೂರ್‌ ಮಾಡಬೇಕಾದರೆ ಅದರಲ್ಲೂ ಆರ್‌ಸಿಸಿ ಸೂರಿಗೆ ಎಷ್ಟು ಬೇಕೋ ಅಷ್ಟು ದಿನ ಅಂದರೆ ಸಾಮಾನ್ಯವಾಗಿ 21 ದಿನ ನೀರು ಹಾಯಿಸಿದರೆ ಸಾಕಷ್ಟು ಗಟ್ಟಿಗೊಂಡು ನಂತರ ಅನೇಕ ವರ್ಷಗಳ ಕಾಲ ಗಾಳಿಯಲ್ಲಿ ಇರುವ ನೀರಿನ ಅಂಶ ಹೀರಿಕೊಂಡೇ “ಏರ್‌ ಕ್ಯೂರಿಂಗ್‌’ ಆಗುತ್ತದೆ. ತಿಂಗಳಾನು ಗಟ್ಟಲೆ ಸೂರಿನ ಮೇಲೆ ನೀರು ನಿಂತರೆ ನಿಧಾನವಾಗಿ ಸೂರಿನ ಒಳಗಿರುವ ಕಂಬಿಗಳು ತುಕ್ಕು ಹಿಡಿಯಬಹುದು. ಆದುದರಿಂದ ಸೂರಿನ ಕ್ಯೂರಿಂಗ್‌ ಆದ ಕೂಡಲೆ ಅದರ ಮೇಲೆ ನೀರು ನಿರೋಧ ಪದರವನ್ನು ಹರಡಿ, ಹೆಚ್ಚುವರಿ ನೀರು ನಿಲ್ಲದೆ ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. 

ಹಣ ಉಳಿಯುತ್ತದೆ ಎಂದು ಇಡೀ ಮನೆಗೆ ಬೇಕಾಗುವಷ್ಟು ಉಕ್ಕಿನ ಸರಳುಗಳನ್ನು ಪಾಯದ ಮಟ್ಟದಲ್ಲೇ ತಂದು ಬಿಡುವುದುಂಟು. ಹೀಗೆ ಶೇಖರಿಸಿದ ಸರಳುಗಳನ್ನು ಮಣ್ಣಿನ ಮೇಲೆ ನೇರವಾಗಿ ಇರಿಸಿದರೆ, ಕೆಲವೇ ತಿಂಗಳುಗಳಲ್ಲಿ ಅವು  ಕಿಲುಬು ಹಿಡಿಯುತ್ತವೆ.  ಪಾಯದಿಂದ ಸೂರಿನ ಮಟ್ಟದವರೆಗೆ ಕಟ್ಟಲು ಸಾಮಾನ್ಯವಾಗಿ ಎರಡು ಮೂರು ತಿಂಗಳುಗಳಾದರೂ ಆಗುತ್ತದೆ. ಸೂಕ್ತ ಹೊದಿಕೆ ಇಲ್ಲದೆ, ತೆರೆದಂತೆ ಉಕ್ಕನ್ನು ಶೇಖರಿಸಿಟ್ಟರೆ, ಒಟ್ಟಿಗೆ ತಂದುದರಿಂದಾಗಿ ಉಳಿತಾಯ ಆದದ್ದಕ್ಕಿಂತ ಹೆಚ್ಚಿಗೇನೇ ತುಕ್ಕು ಹಿಡಿದು ನಷ್ಟವಾಗುತ್ತದೆ. ಆದುದರಿಂದ, ಉಕ್ಕನ್ನು ತಂದಮೇಲೆ ಅದರ ಸೂಕ್ತ ರಕ್ಷಣೆಯೂ ಬಹಳ ಮುಖ್ಯವಾಗುತ್ತದೆ. 

ಕೆಲವೊಮ್ಮೆ ಮನೆಯ ಹೊರಗೆ ಹಾಗೂ ಒಳಗೂ ನೀರು ನಿರೋಧಕ ಪದರವನ್ನು ಗೋಡೆಗಳು, ಸೂರಿಗೆ ನೀಡಿದ್ದರೆ, ಕೆಲವೊಮ್ಮೆ ಪಾಯದಿಂದ ಮೇಲೆ ಹತ್ತುವ ನೀರು ಪ್ಲಿಂತ್‌ ಕಾಂಕ್ರಿಟ್‌ನಲ್ಲಿ ಬಳಸಿರುವ ಉಕ್ಕಿಗೆ ಕಿಲುಬು ಹಿಡಿಯುವಂತೆ ಮಾಡಬಹುದು! ಅದೇ ರೀತಿಯಲ್ಲಿ ಎಲ್ಲಾದರೂ ಸಣ್ಣ ಬಿರುಕು ಇದ್ದರೂ, ಅನೇಕ ಬಾರಿ ನೀರು ಕೆಳಗೆ ಹರಿದು ಹೋಗಲು ನೀಡಿರುವ ದೋಣಿ ಕೊಳವೆಗಳ ಆಸುಪಾಸಿನಲ್ಲಿ ಒಂದಷ್ಟು ಬಿರುಕು ಬಿಟ್ಟು, ಅಲ್ಲೇ ನೀರು ಇಂಗಿ, ಕ್ರಮೇಣ ಸೂರಿನ ಕಂಬಿ ತುಕ್ಕು ಹಿಡಿದು ಹಾಳಾಗಿಬಿಡುತ್ತದೆ. 

ಉಪಟಳ
ನೀರಿನ ಉಪಟಳದ ಅರಿವು ಕೆಲವು ಸಲ ಸುಲಭದಲ್ಲಿ ಲಭ್ಯವಾದರೆ, ಮತ್ತೆ ಕೆಲವು ಬಾರಿ ಕ್ಯಾನ್ಸರ್‌ನಂತೆ ಒಳಗೊಳಗೇ ಹಾನಿ ಮಾಡಿದ ನಂತರವೇ ತಿಳಿಯುತ್ತದೆ. ಆದುದರಿಂದ ನಾವು ಮನೆ ನಿರ್ವಹಣೆ ಮಾಡುವಾಗ ಕೆಲವೊಂದು ಅಂಶಗಳನ್ನು ಗಮನಿಸಬೇಕು. ಸೂರಿನ ಪ್ಲಾಸ್ಟರ್‌ ಸ್ವಲ್ಪ ಕೆಳಗಿಳಿದಂತೆಯೋ ಇಲ್ಲವೇ ಬಿರುಕು ಬಿಟ್ಟಂತೆಯೋ ಆಗಿದ್ದರೆ, ಅದು ನೀರಿನಿಂದಾಗಿ ತೇವ ಉಂಟಾದ ಕಾರಣ, ಉಕ್ಕು ತುಕ್ಕು ಹಿಡಿದು ಪ್ಲಾಸ್ಟರ್‌ ಅನ್ನು ಸೂರಿನಿಂದ ಕೆಳಕ್ಕೆ ತಳ್ಳುತ್ತಿದೆಯೇ? ಎಂಬುದನ್ನು ಪರೀಕ್ಷಿಸಿ. ಕಾಂಕ್ರಿಟ್‌ ನೀರಿನ ಅಂಶವನ್ನು ಹೆಚ್ಚು ಹೀರಲೂ ಕೂಡ ಅದನ್ನು ತಯಾರು ಮಾಡುವಾಗ ಹೆಚ್ಚುವರಿ ನೀರು ಬೆರೆಸಿದ್ದ ಕಾರಣವೂ ಇರಬಹುದು. ತೀರ ದೊಡ್ಡ ಮಟ್ಟಕ್ಕೆ ಪ್ಲಾಸ್ಟರ್‌ ಸಡಿಲ ಆಗಿದ್ದರೆ, ಅನಿವಾರ್ಯವಾಗಿ ಆದನ್ನು ತೆಗೆದು, ಉಕ್ಕಿಗೆ ಅಂಟಿರುವ ಕಿಲುಬನ್ನು ಕೆರೆದು ಮತ್ತೆ ಪ್ಲಾಸ್ಟರ್‌ ಮಾಡಬೇಕಾಗುತ್ತದೆ. 

ಮನೆ ಕಟ್ಟುವರೆಲ್ಲಾ ಒಂದು ವಿಚಾರ ತಿಳಿದುಕೊಳ್ಳಬೇಕು. ಅದು ಏನೆಂದರೆ, ಮನೆಗಳಿಗೆ ಮನುಷ್ಯರಂತೆ ವೇಗವಾಗಿ ವಯಸ್ಸು ಆಗದಿದ್ದರೂ, ಸವಕಳಿಯನ್ನು ಕಡಿಮೆ ಮಾಡಲು ಹಾಗೂ ದೀರ್ಘಾಯಸ್ಸು ನೀಡಬಹುದು. ಅದು ಹೇಗಂದರೆ ಮನೆ ಕಟ್ಟುವಾಗ ನೀರ ಬಳಕೆಯ ಮೇಲೆ ನಿಗವಹಿಸುವುದು. ಮನುಷ್ಯರಿಗೆ ನೀರು ಕುಡಿದಷ್ಟು ಆರೋಗ್ಯ ವೃದ್ಧಿಯಾಗುತ್ತದೆ. ಆದರೆ ಮನೆಗೆ ಹೆಚ್ಚಿಗೆ ನೀರು ಕುಡಿಸಿದರೆ ಆಯಸ್ಸು ಕಡಿಮೆಯಾಗುತ್ತದೆ. ಈ ಸತ್ಯ ಮಾಲೀಕರಿಗೂ, ಮನೆ ಕಟ್ಟುವವರು ಇಬ್ಬರಿಗೂ ತಿಳಿದಿದ್ದರೆ “ಆರೋಗ್ಯಪೂರ್ಣ’ ಮನೆಯನ್ನು ನಿರ್ಮಾಣ ಮಾಡಬಹುದು. ಭವಿಷ್ಯದಲ್ಲಿ ಉಂಟಾಗಬಹುದಾದ ತಲೆಬೇನೆಯಿಂದ ತಪ್ಪಿಸಿಕೊಳ್ಳಬಹುದು. 
  
ಮಾಹಿತಿಗೆ: 9844132826

– ಆರ್ಕಿಟೆಕ್ಟ್ ಕೆ. ಜಯರಾಮ್

Advertisement

Udayavani is now on Telegram. Click here to join our channel and stay updated with the latest news.

Next